ಮೈಸೂರು,ಸೆಪ್ಟಂಬರ್,19,2025 (www.justkannada.in): ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ ಉದ್ಘಾಟನೆಗೆ ಮೂರು ದಿನಗಳು ಬಾಕಿ ಇದ್ದು ಈ ಬಾರಿ ಮೈಸೂರು ದಸರಾಗೆ ಭಾರಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.
ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಮೈಸೂರು ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ 11 ದಿನದ ಮೈಸೂರು ದಸರಾಗೆ 75000 ಪೊಲೀಸರನ್ನ ನಿಯೋಜನೆ ಮಾಡಲಾಗಿದೆ. ಜಂಬೂ ಸವಾರಿಯಲ್ಲಿ ಅಂದಾಜು 15 ಲಕ್ಷ ಜನ ಭಾಗವಹಿಸುವ ನಿರೀಕ್ಷೆ ಇದೆ. ಅರಮನೆಯಲ್ಲಿ 48 ಸಾವಿರ, ಬನ್ನಿಮಂಟಪದಲ್ಲಿ 32 ಸಾವಿರ ಆಸನ ವ್ಯವಸ್ಥೆ ಮಾಡಲಾಗಿದೆ . ಪಾಸ್ ಇದ್ದವರಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ಅಹಿತಕರ ಘಟನೆ ನಡೆಯದಂತೆ ಎಲ್ಲೆಡೆ ಕಟ್ಟೆಚ್ಚರ ವಹಿಸಲಾಗುತ್ತದೆ ಎಂದು ತಿಳಿಸಿದರು.
ಸೂಕ್ಷ್ಮ ಪ್ರದೇಶಗಳಲ್ಲಿ ಸಿಸಿ ಕ್ಯಾಮರಾ ಅಳವಡಿಕೆ ಮಾಡಲಾಗಿದ್ದು30,614 ಸಿಸಿ ಕ್ಯಾಮರಾಗಳ ಕಣ್ಗಾವಲು ಇರಲಿದೆ. ಪ್ರವಾಸಿಗರ ಅನುಕೂಲಕ್ಕಾಗಿ 43 ಕಡೆ ಸಹಾಯ ಕೇಂದ್ರ ಸ್ಥಾಪನೆ ಮಾಡಲಾಗುತ್ತಿದೆ. ಸುಗಮ ಸಂಚಾರಕ್ಕಾಗಿ ಮಾರ್ಗಗಳ ಬದಲಾವಣೆ ಮಾಡುವುದು ಅರಮನೆ ಸುತ್ತ ಏಕಮುಖ ಸಂಚಾರ ವ್ಯವಸ್ಥೆ ಮಾಡಲಾಗುತ್ತಿದ್ದು ಉತ್ತನಹಳ್ಳಿ ಬಳಿ ಯುವ ದಸರಾಗೆ ತಯಾರಿ ನಡೆಯುತ್ತಿದೆ ಎಂದು ಮೈಸೂರು ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಮಾಹಿತಿ ನೀಡಿದರು.
ದಸರಾ ವೇಳೆ ತುತ್ತೂರಿ ನಿಷೇಧ
ಇನ್ನು ಮೈಸೂರು ನಗರ ಘಟಕ ವ್ಯಾಪ್ತಿಯಲ್ಲಿ ಕಳೆದ ವರ್ಷಗಳ ದಸರಾ ಹಬ್ಬದ ಸಮಯದಲ್ಲಿ ಸಾರ್ವಜನಿಕ ರಸ್ತೆ ಸ್ಥಳಗಳಲ್ಲಿ ಓಡಾಡುವ ಸಾರ್ವಜನಿಕರಿಗೆ ಹಾಗೂ ಪ್ರವಾಸಿಗರಿಗೆ ಕೆಲ ಪುಂಡ ಪೋಕರಿಗಳು ತುತ್ತೂರಿ( ವುವುಜೆಲಾ)ಗಳಿಂದ ಊದಿ ಕಿರಿಕಿರಿ ಉಂಟು ಮಾಡಿರುವುದು ಗಮನಕ್ಕೆ ಬಂದಿದೆ. ಹೀಗಾಗಿ ಮೈಸೂರು ನಗರ ಪೊಲೀಸ್ ಕಮಿಷನರೇಟ್ ಘಟಕದ ವ್ಯಾಪ್ತಿಯಲ್ಲಿ ವುವುಜೆಲಾ(ತುತ್ತೂರಿ) ಮಾರಾಟ ಮಾಡುವುದನ್ನ ಮತ್ತು ಬಳಸುವುದನ್ನ ನಿಷೇಧಿಸಿದ್ದೇವೆ ಎಂದು ಸೀಮಾ ಲಾಟ್ಕರ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಡಿಸಿಪಿಗಳಾದ ಸುಂದರ್ ರಾಜ್, ಬಿಂದು ಮಣಿ ಭಾಗಿಯಾಗಿದ್ದರು.
Key words: Mysore Dasara, 75000 police, Security, CC TV