ಬೆಂಗಳೂರು, ಸೆಪ್ಟೆಂಬರ್ 17,2025 (www.justkannada.in): ಕರ್ನಾಟಕ ಮಾಧ್ಯಮ ಅಕಾಡೆಮಿಯು Infosys Springboard ಸಿ.ಎಸ್.ಆರ್. ಕಾರ್ಯಕ್ರಮದಡಿ ಪತ್ರಕರ್ತರ ತರಬೇತಿಗೆ ಅರ್ಜಿ ಆಹ್ವಾನಿಸಿದೆ.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮಾಧ್ಯಮ ಪಟ್ಟಿಯಲ್ಲಿರುವ ಮಾಧ್ಯಮ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕನಿಷ್ಠ 5 ವರ್ಷ ಸೇವಾನುಭವ ಹೊಂದಿರುವ ಪತ್ರಕರ್ತರು ಅರ್ಜಿ ಸಲ್ಲಿಸಬಹುದು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಪರಿಗಣಿಸಿರುವ ರಾಜ್ಯಮಟ್ಟದ ಪತ್ರಿಕೆಗಳು ಹಾಗೂ ಇಲಾಖೆಯಡಿ ನೋಂದಾಯಿತ ಉಪಗ್ರಹ ಸುದ್ದಿ ವಾಹಿನಿಗಳ ಸಂಪಾದಕರು ಶಿಫಾರಸು ಮಾಡುವ ಪತ್ರಕರ್ತರನ್ನು ತರಬೇತಿಗೆ ಪರಿಗಣಿಸಲಾಗುವುದು. ಈ ಕುರಿತು ಸಂಪಾದಕರನ್ನು ನೇರವಾಗಿ ಸಂಪರ್ಕಿಸಲಾಗುವುದು.
ಆಸಕ್ತ ಪತ್ರಕರ್ತರು ಗೂಗಲ್ ಫಾರ್ಮ್ https://forms.gle/q9NUnsQ7M5xrsruj9 ನಲ್ಲಿ ಮಾಹಿತಿ ಹಾಗೂ ದಾಖಲೆಗಳನ್ನು ಒದಗಿಸುವ ಮೂಲಕ ತರಬೇತಿಗೆ ನೋಂದಾಯಿಸಬಹುದಾಗಿದೆ.
- ಅರ್ಜಿ ನಮೂನೆಯಲ್ಲಿ ಸೂಚಿಸಿರುವಂತೆ ಪತ್ರಕರ್ತರು ಭಾವಚಿತ್ರ, ವಯಸ್ಸಿನ ದಾಖಲೆ, ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಮಾಧ್ಯಮ ಸಂಸ್ಥೆಯ ಮುಖ್ಯಸ್ಥರ ದೃಢೀಕರಣ, ಸದರಿ ಮಾಧ್ಯಮ ಸಂಸ್ಥೆಯು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮಾಧ್ಯಮ ಪಟ್ಟಿಯಲ್ಲಿ ಸೇರ್ಪಡೆಯಾಗಿರುವ ಕುರಿತ ದಾಖಲೆ ಹಾಗೂ ಕನಿಷ್ಠ 5 ವರ್ಷ ಸೇವೆ ಸಲ್ಲಿಸಿರುವ ಕುರಿತು ಸೇವಾನುಭವ ದಾಖಲೆಗಳನ್ನು ಸಲ್ಲಿಸಬೇಕು.
- ಇದು ಮೂರು ದಿನಗಳ ವಸತಿಯುತ ತರಬೇತಿಯಾಗಿದ್ದು, ಪತ್ರಕರ್ತರಿಗೆ ಪ್ರಯಾಣ ಭತ್ಯೆ ನೀಡಲಾಗುವುದು. ಇನ್ ಫೋಸಿಸ್ ಸಂಸ್ಥೆಯ ನಿಗದಿತ ಕ್ಯಾಂಪಸ್ ಗಳಲ್ಲಿ ತರಬೇತಿ ನಡೆಯಲಿದೆ.
- ಈ ತರಬೇತಿ ಕಾರ್ಯಕ್ರಮದಲ್ಲಿ ಡಿಜಿಟಲ್ ಮಾಧ್ಯಮ, ಎಐ ಬಳಕೆ ಹಾಗೂ ಸಾಫ್ಟ್ ಸ್ಕಿಲ್ ಅಭಿವೃದ್ಧಿ ತರಬೇತಿ ನೀಡಲಾಗುವುದು.
- ಪ್ರಸಕ್ತ ಸಾಲಿನಲ್ಲಿ ಒಟ್ಟು ಮೂರು ತಂಡಗಳಲ್ಲಿ ತರಬೇತಿ ನಡೆಯಲಿದ್ದು, ಒಂದು ತಂಡದಲ್ಲಿ ಮಹಿಳಾ ಆಯವ್ಯಯದಡಿ ಪತ್ರಕರ್ತೆಯರಿಗಾಗಿ ತರಬೇತಿ ನಡೆಯಲಿದೆ.
- ಎಲ್ಲ ಮೂರು ತಂಡಗಳಿಗೂ ಈ ಒಂದು ಬಾರಿ ಮಾತ್ರ ಅರ್ಜಿ ಆಹ್ವಾನಿಸಲಾಗುತ್ತಿದೆ.
- ತರಬೇತಿಯ ಸ್ಥಳ ಮತ್ತು ದಿನಾಂಕವನ್ನು ನಂತರ ತಿಳಿಸಲಾಗುವುದು. ತರಬೇತಿಗೆ ಪತ್ರಕರ್ತರ ಆಯ್ಕೆ ಕುರಿತ ಅಂತಿಮ ನಿರ್ಧಾರ ಅಕಾಡೆಮಿಯದ್ದೇ ಆಗಿರುತ್ತದೆ.
- ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 26,2025 ಕೊನೆಯ ದಿನವಾಗಿದೆ.
Key words: Karnataka Media Academy, training, journalists