ಮೈಸೂರು,ಸೆಪ್ಟಂಬರ್,16,2025 (www.justkannada.in): ನಾಡಹಬ್ಬ ಮೈಸೂರು ದಸರಾ ಉದ್ಘಾಟನೆಯ ವಿಷಯವನ್ನು ಧಾರ್ಮಿಕ ಮತಾಂಧತೆಯ ವಿಷ ಬೀಜ ಬಿತ್ತಲು ಬಳಸಿಕೊಳ್ಳಲು ಯತ್ನಿಸಲಾಗಿತ್ತು. ಇಂತಹ ದುಷ್ಟ ಆಲೋಚನೆಯ ವ್ಯಕ್ತಿಗಳಿಗೆ ರಾಜ್ಯ ಹೈಕೋರ್ಟ್ ಸರಿಯಾಗಿ ಕಪಾಳ ಮೋಕ್ಷ ಮಾಡಿದೆ ಎಂದು ಕೆಪಿಸಿಸಿ ವಕ್ತಾರ ಹೆಚ್.ಎ ವೆಂಕಟೇಶ್ ಕುಟುಕಿದರು.
ದಸರಾ ಉದ್ಘಾಟನೆಗೆ ಸಾಹಿತಿ ಬಾನು ಮುಷ್ತಾಕ್ ಆಯ್ಕೆ ವಿರೋಧಿಸಿ ಮಾಜಿ ಸಂಸದ ಪ್ರತಾಪ್ ಸಿಂಹ ಸಲ್ಲಿಸಿದ್ದ ಅರ್ಜಿಯನ್ನ ಹೈಕೋರ್ಟ್ ವಜಾಗೊಳಿಸಿತ್ತು. ಈ ಕುರಿತು ಮಾಧ್ಯಮ ಪ್ರಕಟಣೆ ಮೂಲಕ ಪ್ರತಿಕ್ರಿಯಿಸಿರುವ ಹೆಚ್.ಎ ವೆಂಕಟೇಶ್, ಹೆಮ್ಮೆಯ ಸಾಹಿತಿ ಬಾನು ಮುಷ್ತಾಕ್, ಕನ್ನಡ ಭಾಷೆಗೆ ಬೂಕರ್ ಪ್ರಶಸ್ತಿ ತಂದುಕೊಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಬಾರಿಯ ದಸರಾ ಉದ್ಘಾಟಕರಾಗಿ ಇವರನ್ನು ಆಯ್ಕೆ ಮಾಡಿದ ರಾಜ್ಯ ಸರ್ಕಾರದ ಕ್ರಮ ಸಮರ್ಥನೀಯ. ಬಾನು ಅವರು ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರು ಎನ್ನುವ ಏಕೈಕ ಕಾರಣಕ್ಕೆ ಕೆಲ ಮತಾಂಧರು ಇದನ್ನು ವಿವಾದವಾಗಿಸಿದ್ಧರು. ವಿಶೇಷವಾಗಿ ಮೈಸೂರಿನ ಮಾಜಿ ಸಂಸದ ಪ್ರತಾಪ್ ಸಿಂಹ ಹೈಕೋರ್ಟ್ ನಲ್ಲಿ ಪಿಐಎಲ್ ದಾಖಲಿಸಿ ಅನಗತ್ಯ ಹುಯಿಲೆಬ್ಬಿಸಿ ಶಾಂತ ಸ್ಥಿತಿ ಕದಡಲು ಯತ್ನಿಸಿದ್ದರು. ಈಗ ಪಿಐಎಲ್ ವಜಾ ಆಗಿದೆ. ಯಾವುದೇ ಹುರುಳಿಲ್ಲದೆ ಕೇವಲ ಧಾರ್ಮಿಕ ಸಹಿಷ್ಣು ವಾತಾವರಣ ಹಾಳುಗೆಡವುವ ಉದ್ದೇಶದಿಂದ ಇದನ್ನು ದಾಖಲಿಸಲಾಗಿತ್ತು ಎನ್ನುವುದು ನಿರ್ವಿವಾದ ಎಂದು ಟೀಕೀಸಿದರು.
ಎರಡು ಬಾರಿ ಚುನಾಯಿತರಾಗಿದ್ದ ಮಾಜಿ ಸಂಸದನಾದರೂ ನಡತೆ ಮತ್ತು ವರ್ತನೆಯಲ್ಲಿ ಪ್ರತಾಪ್ ಸಿಂಹ ಗಾಂಭೀರ್ಯ ರೂಢಿಸಿಕೊಂಡಿಲ್ಲ. ಇವರ ಹೇಳಿಕೆಗಳನ್ನು ಗಮನಿಸಿದಾಗ ಗಂಭೀರವಾಗಿರುವ ವ್ಯಕ್ತಿತ್ವ ದೋಷ ಇವರಲ್ಲಿರುವುದು ಸ್ಪಷ್ಟವಾಗುತ್ತದೆ. ಒಬ್ಬ ಮಾಜಿ ಸಂಸದ, ಬಹಳ ಹಗುರವಾಗಿ ನಡೆದುಕೊಳ್ಳುವುದು, ಪುಡಿ ರೌಡಿಯಂತೆ ಬೆದರಿಕೆ ಹಾಕುವುದು ಸರಿಯಲ್ಲ. ಈ ಎಲ್ಲಾ ಕಾರಣಗಳಿಂದ ಪ್ರತಾಪ್ ಸಿಂಹ ಮೊದಲು ವ್ಯಕ್ತಿತ್ವ ವಿಕಸನ ತಜ್ಞರಿಂದ ತರಬೇತಿ ಪಡೆಯುವುದು ಅಗತ್ಯವಿದೆ ಎಂದು ನನಗನಿಸುತ್ತಿದೆ. ಇಷ್ಟಕ್ಕೂ ಇವರ ವರ್ತನಾ ಪರಿಸ್ಥಿತಿ ಸುಧಾರಿಸದಿದ್ದರೆ ಮೈಸೂರಿನ ಪ್ರಜ್ಞಾವಂತ ಜನತೆಯೇ ಇವರನ್ನು ಹಿಡಿದು ಬಲವಂತವಾಗಿ ಮಾನಸಿಕ ಆಸ್ಪತ್ರೆಗೆ ದಾಖಲಿಸಲು ಮುಂದಾಗಲೂಬಹುದು ಎಂದು ಎಚ್.ಎ .ವೆಂಕಟೇಶ್ ಲೇವಡಿ ಮಾಡಿದ್ದಾರೆ.
Key words: Mysore Dasara, inauguration, High Court, H.A. Venkatesh