ಮೈಸೂರು, ಸೆಪ್ಟೆಂಬರ್,13,2025 (www.justkannada.in): ಸರ್ಕಾರ ಸತ್ತವರ ಕುಟುಂಬದವರಿಗೆ ಪರಿಹಾರ ನೀಡುವುದು ಸಾವಿಗೆ ಸಮಾನ ಎಂದಲ್ಲ. ಮೃತರ ಕುಟುಂಬಕ್ಕೆ ಸಾಂತ್ವನ ಹೇಳಲು ಪರಿಹಾರ ನೀಡಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ಇಂದು ಮೈಸೂರಿನ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಹಾಸನದಲ್ಲಿ ರಸ್ತೆ ಅಪಘಾತದಲ್ಲಿ ಮಾಡಿದವರ ಕುಟುಂಬದವರಿಗೆ 5 ಲಕ್ಷ ಪರಿಹಾರ ಘೋಷಣೆ ಮಾಡಿದ್ದು ಬಿಜೆಪಿ ಅದನ್ನು 10 ಲಕ್ಷಕ್ಕೆ ಏರಿಸಬೇಕೆಂದು ಹೇಳಿರುವ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ಮೃತರ ಕುಟುಂಬಕ್ಕೆ ಸಾಂತ್ವನ ಹೇಳಲು ಪರಿಹಾರ ನೀಡಲಾಗುತ್ತದೆ. ಸರ್ಕಾರ ರಸ್ತೆ ಸುರಕ್ಷತಾ ಕಾನೂನು ಜಾರಿ ಮಾಡಿದ್ದು, ಸುರಕ್ಷತಾ ಕ್ರಮಗಳನ್ನು ಗಳನ್ನು ಕೈಗೊಂಡಿದೆ. ಚಾಲಕರ ತಪ್ಪಿನಿಂದ ಅಪಘಾತವಾಗಿದೆ. ಅದಕ್ಕೆ ಸರ್ಕಾರ ಹೇಗೆ ಹೊಣೆಯಾಗಲು ಸಾಧ್ಯ? ಎಂದರು.
ಮೃತರ ಕುಟುಂಬದವರಿಗೆ ಸಾವಿನ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುವುದಾಗಿ ತಿಳಿಸಿದ ಸಿಎಂ ಸಿದ್ದರಾಮಯ್ಯ ಹಾಸನ ಉಸ್ತುವಾರಿ ಸಚಿವ ಕೃಷ್ಣಭೈರೇಗೌಡ ಅವರಿಗೆ ಮೃತರ ಸಂಬಂಧಿಕರನ್ನು ಭೇಟಿ ಮಾಡಿ ಪರಿಹಾರ ಘೋಷಣೆ ಮಾಡುವಂತೆ ಸೂಚಿಸಿದ್ದೇನೆ ಎಂದರು.
ಆರ್ಥಿಕವಾಗಿ ಹಿಂದುಳಿದಿದ್ದಾರೆ ಎಂದೇ ಪರಿಹಾರ ನೀಡಿದೆ
ಸತ್ತವರು ಹೆಚ್ಚಾಗಿ ಕೂಲಿ ಕಾರ್ಮಿಕರು, ವಿದ್ಯಾರ್ಥಿಗಳಿದ್ದರು ಹಾಗಾಗಿ ಸರ್ಕಾರ ಹೆಚ್ಚಿನ ಪರಿಹಾರ ಒದಗಿಸುತ್ತಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಸಿಎಂ ಸಿದ್ದರಾಮಯ್ಯ, ಸರ್ಕಾರ ಐದು ಲಕ್ಷ ಪರಿಹಾರ ನೀಡಿದೆ. ಮೃತರ ಕುಟುಂಬದವರು ಆರ್ಥಿಕವಾಗಿ ಹಿಂದುಳಿದಿದ್ದಾರೆ ಎಂದೇ ಪರಿಹಾರ ನೀಡಿದೆ ಎಂದರು.
ವಿರೋಧಪಕ್ಷದವರ ಒತ್ತಡದಿಂದ ಪ್ರಧಾನಿಗಳು ಮಣಿಪುರಕ್ಕೆ ಭೇಟಿ ನೀಡುತ್ತಿದ್ದಾರೆ
ಮೂರು ವರ್ಷಗಳ ನಂತರ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಮಣಿಪುರಕ್ಕೆ ಭೇಟಿ ನೀಡುತ್ತಿರುವುದರ ಬಗ್ಗೆ ಪ್ರತಿಕ್ರಿಯೆ ನೀಡಿ, ಗಲಾಟೆ ಆಗುವಾಗ ಭೇಟಿ ನೀಡದೇ, ಪರಿಸ್ಥಿತಿ ಸುಧಾರಿಸಿದ ಮೇಲೆ ಭೇಟಿ ನೀಡುತ್ತಿದ್ದಾರೆ. ಇಷ್ಟು ವರ್ಷ ಆಯ್ಕೆ ಹೋಗಲಿಲ್ಲ ಎಂದು ಪ್ರಶ್ನಿಸಿದರು. ವಿರೋಧಪಕ್ಷದವರ ಒತ್ತಡದಿಂದ ಈಗ ಭೇಟಿ ನೀಡುತ್ತಿದ್ದಾರೆ ಎಂದರು.
ಧರ್ಮಸ್ಥಳ ಪ್ರಕರಣ: ತನಿಖೆಯಲ್ಲಿ ವಿಳಂಬವಾಗುತ್ತಿಲ್ಲ
ಧರ್ಮಸ್ಥಳ ಪ್ರಕರಣದಲ್ಲಿ ಎಸ್ಐಟಿ ತನಿಖೆ ವಿಳಂಬವಾಗುತ್ತಿರುವುದರ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿ ವಿಳಂಬವಾಗುತ್ತಿಲ್ಲ. ಎಸ್ ಐ ಟಿ ತನಿಖೆ ಮಾಡುತ್ತಿದ್ದು ಸರ್ಕಾರ ಇದರಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ಹಾಗೆಂದು ಅನಗತ್ಯವಾಗಿ ವಿಳಂಬ ಮಾಡುವಂತಿಲ್ಲ. ನನಗೆ ತಿಳಿದಂತೆ ವಿಳಂಬವಾಗುತ್ತಿಲ್ಲ ಎಂದು ಹೇಳಿದರು.
ಪ್ರಚೋದನಾಕಾರಿ ಭಾಷಣ ಮಾಡುವವರ ವಿರುದ್ಧ ಕ್ರಮ
ಬಿಜೆಪಿ ನಾಯಕರಾದ ಸಿ.ಟಿ ರವಿ, ಬಸನಗೌಡ ಯತ್ನಾಳ್ ಅವರ ಮೇಲೆ ಎಫ್ಐಆರ್ ದಾಖಲಾಗಿರುವ ಬಗ್ಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಬಿಜೆಪಿಯವರು ಪ್ರಚೋದನಾಕಾರಿಯಾದ ಭಾಷಣ ಮಾಡಿದರೆ ಏನು ಮಾಡಬೇಕು? ಶಾಂತಿ ನೆಮ್ಮದಿಯನ್ನು ಕಾಪಾಡುವುದು ಅತ್ಯಂತ ಅವಶ್ಯಕ. ಅದಕ್ಕಾಗಿ ಪ್ರಚೋದನಾಕಾರಿ ಭಾಷಣ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಇದು ರಾಜಕಾರಣವಲ್ಲ ಎಂದರು. ಇದು ಹಿಂದೂಗಳನ್ನೇ ಗುರಿಯಾಗಿಸಿ ಮಾಡಿರುವ ಕೃತ್ಯ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ, ನಾನೂ ಕೂಡ ಒಬ್ಬ ಹಿಂದೂ. ನನ್ನ ಹೆಸರಿನಲ್ಲಿಯೇ ಈಶ್ವರ ಮತ್ತು ರಾಮ ಎರಡೂ ದೇವರ ಹೆಸರಿದೆ ಎಂದರು.
ರಾಜಕಾರಣಕ್ಕಾಗಿ ಆಕ್ಷೇಪ
ಮಹಾರಾಷ್ಟ್ರ ಮುಖ್ಯಮಂತ್ರಿಗಳು ಆಲಮಟ್ಟಿ ಅಣೆಕಟ್ಟನ್ನು ಎತ್ತರಿಸುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ನ್ಯಾಯಮಂಡಳಿಯೇ ಅಣೆಕಟ್ಟನ್ನು 519 ಮೀ.ಗಳಿಂದ 524 ಮೀ.ವರೆಗೆ ಏರಿಸಲು 2010 ರಲ್ಲಿ ಹೇಳಿದೆ. 15 ವರ್ಷಗಳಾಗಿದ್ದು ರಾಜಕಾರಣಕ್ಕಾಗಿ ಆಕ್ಷೇಪ ತೆಗೆದಿದ್ದಾರೆ ಎಂದರು.
ಬಿಜೆಪಿ ಮುಖ್ಯಮಂತ್ರಿಗಳಿಗೆ ಪ್ರಧಾನಮಂತ್ರಿ ತಿಳಿ ಹೇಳಬೇಕು
ಗೋವಾ ಮಹದಾಯಿ ಯೋಜನೆಯನ್ನು ಹಾಗೂ ತಮಿಳುನಾಡು ಸರ್ಕಾರ ಮೇಕೆದಾಟು ಯೋಜನೆಯನ್ನು ವಿರೋಧಿಸುತ್ತಿರುವ ಬಗ್ಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಬಿಜೆಪಿ ಮುಖ್ಯಮಂತ್ರಿಗಳಿಗೆ ಪ್ರಧಾನಮಂತ್ರಿ ತಿಳಿ ಹೇಳಬೇಕು ಎಂದರು.
ಜಾತಿ ಗಣತಿ: ಮತಾಂತರಗೊಂಡ ಜಾತಿಯನ್ನೇ ಪರಿಗಣಿಸಲಾಗುವುದು
ರಾಜ್ಯ ಸರ್ಕಾರ ಕೈಗೊಳ್ಳುತ್ತಿರುವ ಜಾತಿ ಗಣತಿಯಲ್ಲಿ ಹೊಸ ಜಾತಿಗಳನ್ನು ಸರಕಾರ ಸೇರ್ಪಡೆ ಮಾಡುತ್ತಿದೆ ಎಂಬ ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ, ಕೇಂದ್ರ ಸರ್ಕಾರ ಕೈಗೊಂಡಿರುವ ಜಾತಿ ಗಣತಿ ಬಗ್ಗೆ ಏನು ಹೇಳುತ್ತಾರೆ ಎಂದು ಪ್ರಶ್ನಿಸಿದರು. ಯಾರಾದರೂ ಮತಾಂತರಗೊಂಡಿದ್ದರೆ ಅವರ ಈಗಿನ ಜಾತಿಯನ್ನೇ ಪರಿಗಣಿಸಲಾಗುವುದು. ಮತಾಂತರವಾಗುವುದು ಬೇಡ ಎಂದರೂ ವ್ಯವಸ್ಥೆಯ ಪರಿಣಾಮವಾಗಿ ಮತಾಂತರಗೊಳ್ಳುತ್ತಾರೆ. ಹಿಂದೂ ಸಮಾಜದಲ್ಲಿ ಸಮಾನತೆ ಇದ್ದಿದ್ದರೆ, ಸಮಾನ ಅವಕಾಶಗಳಿದ್ದರೆ, ಏಕೆ ಮತಾಂತರಗೊಳ್ಳುತ್ತಾರೆ? ಅಸ್ಪೃಶ್ಯತೆ ಏಕೆ ಬಂತು, ಅದನ್ನು ನಾವು ಹುಟ್ಟುಹಾಕಿದ್ದೇವೆಯೇ? ಎಂದರು. ಅಸಮಾನತೆ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಧರ್ಮದಲ್ಲಿ ಇದ್ದರೂ ಮತಾಂತರವಾಗಿದ್ದಾರೆ. ಅದು ಅವರ ಹಕ್ಕು ಎಂದರು.
Key words: Mysore, CM, Siddaramaiah, government, compensation