ಮಂಡ್ಯ, ಸೆಪ್ಟಂಬರ್,12,2025 (www.justkannada.in): ಯಾಂತ್ರೀಕೃತ ವಿಧಾನದ ಮೂಲಕ ಭತ್ತದ ನಾಟಿಯನ್ನು ಮಹಿಳೆಯರು ಕೂಡ ಮಾಡಲು ಸಾಧ್ಯ ಎಂದು ಸಂದೇಶ ಸಾರುವ ನಿಟ್ಟಿನಲ್ಲಿ ಮಂಡ್ಯ ಜಿಲ್ಲಾ ಪಂಚಾಯತ್ ಸಿಇಓ ನಂದಿನಿ ಕೆ.ಆರ್. ಅವರು ಸ್ವತಃ ಭತ್ತ ನಾಟಿ ಮಾಡಿ ಗಮನ ಸೆಳೆದರು.
ಜಿಲ್ಲಾ ಪಂಚಾಯತ್, ಮಂಡ್ಯ ಮತ್ತು ಕೃಷಿ ಇಲಾಖೆ ಮಂಡ್ಯ ವತಿಯಿಂದ ಹೊಳಲು ಗ್ರಾಮದ ದಕ್ಷ ಯಂತ್ರ ನಾಟಿ ಸಸಿಮಡಿ ತಯಾರಿಕಾ ಘಟಕದಲ್ಲಿ ಏರ್ಪಡಿಸಲಾಗಿದ್ದ ಯಾಂತ್ರೀಕೃತ ಭತ್ತದ ನಾಟಿ ಪ್ರಾತ್ಯಕ್ಷಿಕೆಯಲ್ಲಿ ಭಾಗವಹಿಸಿದ ಸಿಇಓ ನಂದಿನಿ ಕೆ.ಆರ್ ಅವರು, ಯಾಂತ್ರೀಕೃತ ವಿಧಾನದ ಮೂಲಕ ಮಹಿಳೆಯರು ಕೂಡ ಭತ್ತ ನಾಟಿ ಮಾಡಬಹುದು ಎಂಬ ವಿಶ್ವಾಸ ತುಂಬಲು ಸ್ವತಃ ಅವರೇ ನಾಟಿ ಪ್ರಕ್ರಿಯೆಯಲ್ಲಿ ತೊಡಗಿರುವುದಾಗಿ ತಿಳಿಸಿದರು.
ಭತ್ತ ನಾಟಿಗೆ ಯಂತ್ರ ಬಳಸಲು ಮಹಿಳೆಯರಿಗೆ ಸಾಧ್ಯವಿಲ್ಲ, ಅವರಿಂದ ಯಂತ್ರವನ್ನು ನಿರ್ವಹಣೆ ಮಾಡಲು ಅಸಾಧ್ಯ ಎಂಬ ಕಲ್ಪನೆಗಳನ್ನು ತೊಡೆದು ಹಾಕುವ ನಿಟ್ಟಿನಲ್ಲಿ ಮಹಿಳೆಯರು ಕೂಡ ಯಂತ್ರದ ಮೂಲಕ ಭತ್ತ ನಾಟಿ ಮಾಡಬಹುದು ಹಾಗೂ ಯಂತ್ರವನ್ನು ನಿರ್ವಹಣೆ ಮಾಡಬಹುದು ಎಂದು ತರಬೇತಿಗೆ ಬಂದಿದ್ದ ಸ್ವ-ಸಹಾಯ ಸಂಘದ ಮಹಿಳೆಯರಿಗೆ ಸಲಹೆ ನೀಡಿದರು.
ಇತ್ತೀಚಿನ ದಿನಗಳಲ್ಲಿ ಭತ್ತ ನಾಟಿಗೆ ಕೃಷಿ ಕೂಲಿಕಾರರು ಸರಿಯಾದ ಸಮಯದಲ್ಲಿ ದೊರೆಯುತ್ತಿಲ್ಲ, ಇದರಿಂದ ಸರಿಯಾದ ಸಮಯದಲ್ಲಿ ನಾಟಿ ಮಾಡಲು ಸಾಧ್ಯವಾಗದೇ ಇಳುವರಿ ಕಡಿಮೆಯಾಗುತ್ತಿದೆ. ಯಾಂತ್ರೀಕೃತ ವಿಧಾನದ ಭತ್ತ ನಾಟಿಯಿಂದ ಭತ್ತ ನಾಟಿಯ ವೆಚ್ಚ ತಗ್ಗಿಸಬಹುದಾಗಿದೆ ಹಾಗೂ ಕಡಿಮೆ ಸಮಯದಲ್ಲಿ ನಾಟಿ ಮಾಡಬಹುದಾಗಿದೆ ಎಂದು ಜಿ.ಪಂ. ಸಿಇಓ ನಂದಿನಿ ಕೆ.ಆರ್. ಅವರು ತಿಳಿಸಿದರು.
ಕೃಷಿ ಇಲಾಖೆಯ ಸಮನ್ವಯದೊಂದಿಗೆ, ಮಂಡ್ಯ ಜಿಲ್ಲೆಯಲ್ಲಿ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಯೋಜನೆಯಡಿ ನೊಂದಾಯಿತ ಸ್ವ-ಸಹಾಯ ಸಂಘದ ಮಹಿಳೆಯರಿಗೆ ಒಂಟಿ ಕಣ್ಣಿನ ಕಬ್ಬಿನ ಸಸಿ ಮಡಿ ತಯಾರಿಸುವುದು ಹಾಗೂ ಯಂತ್ರ ನಾಟಿ ಸಸಿಮಡಿ ತಯಾರಿಸುವ ಕುರಿತಂತೆ ಒಂದು ದಿನದ ತರಬೇತಿಯನ್ನು ಏರ್ಪಡಿಸಲಾಗಿತ್ತು.
ಯಾಂತ್ರೀಕೃತ ವಿಧಾನದ ಭತ್ತ ನಾಟಿಗೆ ಸಸಿಮಡಿಗಳನ್ನು ತಯಾರಿಸುವ ವಿಧಾನದ ಬಗ್ಗೆ ಮಹಿಳಾ ಸ್ವ-ಸಹಾಯ ಸಂಘಗಳಿಗೆ ತರಬೇತಿ ನೀಡಿ, ಅವರಿಂದ ರೈತರಿಗೆ ಉತ್ತಮ ಗುಣಮಟ್ಟದ ಭತ್ತದ ಸಸಿಗಳನ್ನು ಒದಗಿಸುವ ನಿಟ್ಟಿನಲ್ಲಿ ಜಿಲ್ಲಾ ಪಂಚಾಯತ್ ಮತ್ತು ಕೃಷಿ ಇಲಾಖೆ ಕಾರ್ಯಪ್ರವೃತ್ತವಾಗಿದ್ದು, ಈ ನಿಟ್ಟಿನಲ್ಲಿ ತರಬೇತಿ ಏರ್ಪಡಿಸಲಾಗಿತ್ತು ಎಂದು ಜಿ.ಪಂ. ಸಿಇಓ ನಂದಿನಿ ಕೆ.ಆರ್. ಅವರು ತಿಳಿಸಿದರು.
ಈ ಸಂದರ್ಭದಲ್ಲಿ, ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಅಶೋಕ್, ಸಹಾಯಕ ಕೃಷಿ ನಿರ್ದೇಶಕರಾದ ಶ್ರೀಹರ್ಷ ಸೇರಿದಂತೆ ಇತರರು ಹಾಜರಿದ್ದರು.
Key words: Mandya, ZP, CEO, planting, paddy