“ಹೊಸ ಪಕ್ಷ ಕಟ್ತೀನಿ” ಪುನರುಚ್ಚರಿಸಿದ ಯತ್ನಾಳ್..

ಮೈಸೂರು,ಸೆಪ್ಟಂಬರ್,12,2025 (www.justkannada.in): ಬಿಜೆಪಿ ರಿಪೇರಿಯಾದರೆ ಬಿಜೆಪಿ ಜೊತೆ ಹೋಗುತ್ತೇನೆ ಇಲ್ಲದಿದ್ದರೆ ಹೊಸ ಪಕ್ಷ ಕಟ್ಟಿ ಸಿಎಂ ಆಗುತ್ತೇನೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪುನರುಚ್ಚರಿಸಿದರು.

ಮೈಸೂರಿನಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಕಾರ್ಯಕರ್ತರು ಮದ್ದೂರಿಗೆ ಬರಬೇಕು ಅಂತ ಕೇಳುತ್ತಿದ್ದರು. ಬಿಜೆಪಿ ನಾಯಕರು ಹೋದಾಗ ಯತ್ನಾಳ ಯತ್ನಾಳ ಅಂತ ಕೂಗಿದರು. ಅವರ ಹೃದಯದಲ್ಲಿ ನನ್ನ ಮೇಲೆ ಪ್ರೀತಿ ಇದೆ. ಗಣಪತಿ ವಿಸರ್ಜನೆ ವೇಳೆ ಈ ಸರ್ಕಾರದಲ್ಲಿ ಆಗುತ್ತಿರುವ ಅನಾಹುತಗಳು ಜನ ನೋಡುತ್ತಿದ್ದಾರೆ.  ಸಿದ್ದರಾಮಯ್ಯ ಸರ್ಕಾರಕ್ಕೆ ಒಂದು ಸಂದೇಶ ಕೊಡುತ್ತೇನೆ. ಹಿಂದೂ ವಿರೋಧಿ ನೀತಿ ಅನುಸರಿದರೆ ಈ ಸರ್ಕಾರ 5 ವರ್ಷ ಇರಲ್ಲ. ನೇಪಾಳ ರೀತಿಯಲ್ಲಿ ಆಗತ್ತೆ. ರಾಜ್ಯ ಸರ್ಕಾರ ಭ್ರಷ್ಟಾಚಾರದಿಂದ ಕೂಡಿದೆ. ಅದರಲ್ಲಿ ಬಿಜೆಪಿ ನಾಯಕರು ಕೂಡ ಅಡ್ಜಸ್ಟ್ ಮೆಂಟ್ ರಾಜಕಾರಣ ಮಾಡ್ತಾರೆ.ಮುಸ್ಲಿಂ ಸಮುದಾಯಕ್ಕೆ ಆಗೋ ಕೆಲಸ ಹಿಂದುಗಳಿಗೆ ಆಗುತ್ತಿಲ್ಲ ಎಂದರು.

ಮದ್ದೂರಿನಲ್ಲಿ ತಮ್ಮ ವಿರುದ್ಧ ಎಫ್ಐಆರ್ ವಿಚಾರ ಕುರಿತು ಪ್ರತಿಕ್ರಿಯಿಸಿದ ಯತ್ನಾಳ್, ಅಲ್ಲಿ ಅಕ್ರಮ ಮಸೀದಿ ಇದೆ. ಅದಕ್ಕೆ ದಾಖಲೆ ಇಲ್ಲ. ಅಂತ ಕಡೆ ಕಲ್ಲುಗಳನ್ನು ಹೊಡೆದರೆ ಏನು ಮಾಡಬೇಕು. ಸರ್ಕಾರ ಏನು ಕತ್ತೆ ಕಾಯುತ್ತಿದೆಯಾ? ಇನ್ಮುಂದೆ ಮಸೀದಿ ಸಂಪೂರ್ಣ ತಪಾಸಣೆ ಆಗಬೇಕು. ಕಲ್ಲು ಸಶಸ್ತ್ರ ಇದ್ದರೆ  ಆ ಮಸೀದಿ ಮೌಲಿಯ ಜವಾಬ್ದಾರಿ ಅಂತ ಹೇಳಬೇಕು. ಇಲ್ಲದಿದ್ದರೆ ಅಂತ ಕಟ್ಟಡ ಕೆಡವಬೇಕು ಅಂತ ನಾನೇ ಸರ್ಕಾರಕ್ಕೆ ಪತ್ರ ಬರೆಯುತ್ತೇನೆ. ನನ್ನ ಮೇಲೆ ಎಸ್ಟು ಕೇಸು ಬೇಕಾದರೂ ಹಾಕಲಿ. ಈಗಾಗಲೇ 70 ಕೇಸ್ ಹಾಕಿದ್ದಾರೆ. ಇದಕ್ಕೆಲ್ಲ ನಾನು ಹೆದರಲ್ಲ ಎಂದು ತಿಳಿಸಿದರು.

ಸರ್ಕಾರಕ್ಕೆ ಇನ್ನಾದರೂ ಎತ್ತೆಚ್ಚುಕೊಳ್ಳದಿದ್ದರೆ ನೇಪಾಳ ಮಾದರಿಯಲ್ಲಿ ಕ್ರಾಂತಿ ಆಗತ್ತೆ

ಮಸೀದಿಗಳಲ್ಲಿ ಕಲ್ಲುಗಳಿಲ್ಲ ಅಂದರೆ ಎಲ್ಲಿಂದ ಬರುತ್ತೆ. ಈ ಹಿಂದೆ ಬಿಜೆಪಿ ಸರ್ಕಾರ ಇದ್ದಾಗ ಶಿವಮೊಗ್ಗದಲ್ಲಿ ಗಲಾಟೆ ಆಯಿತು. ಆಗ ಯಡಿಯೂರಪ್ಪ ಏನು ಕ್ರಮ ತೆಗೆದುಕೊಳ್ಳಲಿಲ್ಲ. ಕಠಿಣ ಕ್ರಮ ಕಠಿಣ ಕ್ರಮ ಅಂತ ಹೇಳೋ ಗೃಹ ಮಂತ್ರಿ ಮಾಡಿದ್ದರು. ಅದಕ್ಕಾಗಿ ಬಿಜೆಪಿ ನೆಲ ಕಚ್ಚಿತ್ತು. ಈಗ ಮತ್ತೆ ಯಡಿಯೂರಪ್ಪ ಮಗ ಬಂದಿದ್ದಾರೆ . ಏನು ಮಾಡುತ್ತಿದ್ದಾರೆ. ಲಿಂಗಾಯತ ಸಮುದಾಯಕ್ಕೆ ಯಡಿಯೂರಪ್ಪ ಕೊಡುಗೆ ಏನು? ಒಕ್ಕಲಿಗರ ಸಮುದಾಯಕ್ಕೆ ಡಿಕೆಶಿ ಕೊಡುಗೆ ಏನು? ಕಾಂಗ್ರೆಸ್ ಗೆ ಹಿಂದೂಗಳು ವೋಟ್ ಹಾಕಿಲ್ವಾ. ಸರ್ಕಾರಕ್ಕೆ ಇನ್ನಾದರೂ ಎತ್ತೆಚ್ಚುಕೊಳ್ಳದೆ ಇದ್ದರೆ ನೇಪಾಳ ಮಾದರಿಯಲ್ಲಿ  ರಾಜ್ಯದಲ್ಲಿ ಕ್ರಾಂತಿ ಆಗತ್ತೆ ಎಂದು ಯತ್ನಾಳ್  ಎಚ್ಚರಿಸಿದರು.

ಇನ್ನಾದರೂ ನಮ್ಮ ಹೈ ಕಮಾಂಡ್ ಎಚ್ಚೆತ್ತುಕೊಳ್ಳಬೇಕು. ಯಡಿಯೂರಪ್ಪ ಹಾಗೂ ವಿಜಯೇಂದ್ರ ಒತ್ತಡಕ್ಕೆ ನನ್ನ ಉಚ್ಚಾಟನೆ ಮಾಡಿದರು. ಈಗ ಅಮಿತ್ ಶಾಗೂ ಕೂಡ ತಪ್ಪು ಮಾಡಿದೆ ಅಂತ ಅನ್ನಿಸಿದೆ. ನಿನ್ನೆ ಮದ್ದೂರಿನಲ್ಲಿ ನನಗೆ ಸಿಕ್ಕ ಪ್ರೀತಿ ನೋಡಿ ಎಲ್ಲರಿಗೂ ಜ್ಞಾನದೋಯ ಆಗುತ್ತಿದೆ. 2028 ರಾಜ್ಯದಲ್ಲಿ ಕ್ರಾಂತಿ ಆಗತ್ತೆ. ಈಗಾಗಲೇ ನಾನು ಪ್ರತಾಪ್ ಸಿಂಹ, ಜಾರಕಿಹೊಳಿ, ಕುಮಾರ್ ಬಂಗಾರಪ್ಪ ಎಲ್ಲರೂ ಕೂಡಿ ಬದಲಾವಣೆ ತರುತ್ತೇವೆ ಎಂದರು.

ನಮ್ಮ ಪ್ರಧಾನಿಗಳು ಹೇಳುತ್ತಾರೆ. ನಾನು ತಿನ್ನಲ್ಲ ತಿನ್ನೂರಿಗೂ ಬಿಡಲ್ಲ ಅಂತ. ಆದರೆ ಇಲ್ಲಿ ಯಡಿಯೂರಪ್ಪ ಕುಟುಂಬ ಹಣ ಲೂಟಿ ಮಾಡಿದೆ. ಇದಕ್ಕೆ ಏನು ಹೇಳಬೇಕು. ಬಿಜೆಪಿ ಕುಟುಂಬ ರಾಜಕಾರಣದಿಂದ ಮುಕ್ತವಾಗಬೇಕು. ಒಂದು ವೇಳೆ ಅದು ಸಾಧ್ಯವಾಗದೇ ಇದ್ದರೆ ನಮ್ಮ ನಿಲುವು ಸ್ಪಷ್ಟವಾಗಿದೆ. ನಮ್ಮದೇ ಸರ್ಕಾರ ಬರಲು ಏನು ಬೇಕು ಅದನ್ನು ಮಾಡುತ್ತೇವೆ ಎಂದರು.

ಭಾನು ಮುಸ್ತಾಕ್ ದಸರಾ ಉದ್ಘಾಟನೆ ವಿಚಾರ ಕುರಿತು ಮಾತನಾಡಿದ ಶಾಸಕ ಯತ್ನಾಳ್,  ಚಾಮುಂಡಿ ತಾಯಿಗೆ ಹೂವು ಹಾಕೋರು ಸನಾತನಿಗಳು ಆಗಿರಬೇಕು. ಮೂರ್ತಿ ಪೂಜೆ ಮಾಡಲ್ಲ ಅಂತ ವಿರೋಧಿಸುವವರಿಂದ ದಸರಾ ಉದ್ಘಾಟನೆ ಸರಿಯಲ್ಲ. ಅವರು ಬೇಕಾದರೆ ಬೇರೆ ಬೇರೆ ಕಾರ್ಯಕ್ರಮ ಉದ್ಘಾಟನೆ ಮಾಡಲಿ. ಈ ಬಗ್ಗೆ ಮುಸ್ಲಿಂ ಸಮುದಾಯದ ಧರ್ಮ ಗುರುಗಳು ಏನು ಹೇಳುತ್ತಾರೆ. ಮೂರ್ತಿ ಪೂಜೆ ಒಪ್ಪುತ್ತಾರಾ? ಸಿದ್ದರಾಮಯ್ಯ ರಾಜಕೀಯ ಅಂತ್ಯ ಚಾಮುಂಡಿ ಬೆಟ್ಟದಿಂದಲೇ ಆಗುತ್ತೆ ಎಂದು ಭವಿಷ್ಯ ನುಡಿದರು.

ಅಡ್ಜಸ್ಟ್ಮೆಂಟ್ ರಾಜಕಾರಣ ಮಾಡೋದು ನಾಶ ಆಗಲಿ ಅಂತ ಚಾಮುಂಡೇಶ್ವರಿ ತಾಯಿ ಬಳಿ ಪ್ರಾರ್ಥನೆ ಮಾಡುತ್ತೇನೆ ಎಂದು ಯತ್ನಾಳ್ ಹೇಳಿದರು.

ಮದ್ದೂರು ಗಣೇಶನ ಮೇಲೆ ಕಲ್ಲು ತೂರಾಟ ವಿಚಾರ, ಚಲುವರಾಯಸ್ವಾಮಿ ಮುಸ್ಲಿಂ ಅವರದ್ದು ತಪ್ಪಿದೆ ಅಂತಾರೆ. ಈ ಹಿಂದೆ ನೇರವಾಗಿ ಮಾತನಾಡಿದ ರಾಜಣ್ಣ ಅವರ ಉಚ್ಚಾಟನೆ ಮಾಡಿದರು. ಆರ್.ಸಿ. ಬಿ ಕಾಲ್ತುಳಿತ ಪ್ರಕರಣ ಆಯಿತು.  ಪೊಲೀಸರ ಮೇಲೆ ಬೊಟ್ಟು ಮಾಡಿದರು. ಇದು ಕಾಂಗ್ರೆಸ್ ಸರ್ಕಾರದ ನಿಲುವುಗಳು ಸಿದ್ದರಾಮಯ್ಯ ಹಿಂದುಳಿದ ದಲಿತರಿಗೆ ಯಾರಿಗೂ ನ್ಯಾಯ ಕೊಡ್ತಿಲ್ಲ. ಹಗರಣ ಆದರೂ ಕ್ರಮ ತೆಗೆದುಕೊಳ್ಳುತ್ತಿಲ್ಲ. ಈ ಸರ್ಕಾರ ಜಾಸ್ತಿ ದಿನ ಉಳಿಯಲ್ಲ ಎಂದು ರಾಜ್ಯ ಸರ್ಕಾರದ ವಿರುದ್ಧ ಯತ್ನಾಳ್ ವಾಗ್ದಾಳಿ  ನಡೆಸಿದರು.

ಬಿಜೆಪಿ ಹೈ ಕಮಾಂಡ್ ಭೇಟಿ ಮಾಡ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಯತ್ನಾಳ್,  ನಾನು ಬಿಜೆಪಿ ಹೈ ಕಮಾಂಡ್ ಭೇಟಿ ಮಾಡಲ್ಲ. ನಮ್ಮ ಜೊತೆ ಬಿಜೆಪಿಯ ಎಲ್ಲರೂ ಇದ್ದಾರೆ. ಪೂಜ್ಯ ತಂದೆ ಮಗ ಇಬ್ಬರನ್ನು ಬಿಟ್ಟು ಎಂದು ಮತ್ತೆ ಯಡಿಯೂರಪ್ಪ ವಿಜಯೇಂದ್ರ ವಿರುದ್ಧ  ಗುಡುಗಿದರು.

ಪ್ರದೀಪ್ ಈಶ್ವರ್ ಕೋತಿ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಶಾಸಕ ಯತ್ನಾಳ್, ನಾನು ಮನುಷ್ಯರ ಹೇಳಿಕೆಗೆ ಅಷ್ಟೇ ಉತ್ತರ ಕೊಡುತ್ತೇನೆ. ಇಂತಹ ಬಾಲಿಶ ಹೇಳಿಕೆ ಕೊಡೋರಿಗೆ ಉತ್ತರ ಕೊಡಲ್ಲ. ಯಾರು ಕೋತಿ ಅಂತ ಜನರಿಗೆ ಗೊತ್ತು. ಸುಧಾಕರ್ ಎಂಪಿ ಆದರೆ ರಾಜೀನಾಮೆ ಕೊಡುತ್ತೇನೆ ಅಂದಿದ್ದ. ಇಷ್ಟು ವರ್ಷ ಆದರೂ ಕೊಟ್ಟಿಲ್ಲ. ಅಂತವರಿಗೆ ಉತ್ತರ ಕೊಡಲ್ಲ ನನ್ನ ಉತ್ತರ ಸಿದ್ದರಾಮಯ್ಯ ಡಿಕೆಶಿ ಯಡಿಯೂರಪ್ಪರಿಗೆ ಮಾತ್ರ ಎಂದು ಯತ್ನಾಳ್ ಹೇಳಿದರು.

Key words:  form, new party, Mysore, Basanagowda patil Yatnal