ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ: ಪಡಿತರ ಚೀಟಿ, ಆಧಾರ್ ಕಾರ್ಡ್ ಕಡ್ಡಾಯ- ಮೈಸೂರು ಜಿಲ್ಲಾಧಿಕಾರಿ

ಮೈಸೂರು ಸೆಪ್ಟಂಬರ್, 11,2025 (www.justkannada.in): ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಸೆಪ್ಟೆಂಬರ್‌ 22 ರಿಂದ ಅಕ್ಟೋಬರ್‌ 7 ರವರೆಗೆ ಕೈಗೊಳ್ಳುತ್ತಿದ್ದು, ಜಿಲ್ಲೆಯಲ್ಲೂ ಸಮೀಕ್ಷೆ ಕಾರ್ಯ ಯಶಸ್ವಿಯಾಗಿ ನಡೆಸಲು ಸಕಲ ಸಿದ್ಧತೆ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಾದ ಜಿ ಲಕ್ಷ್ಮೀ ಕಾಂತ ರೆಡ್ಡಿ ಅವರು ತಿಳಿಸಿದರು.

ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕೈಗೊಳ್ಳುವ ಕುರಿತು ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಡಿಸಿ ಲಕ್ಷ್ಮೀಕಾಂತ ರೆಡ್ಡಿ, ಜನರ ಶೈಕ್ಷಣಿಕ ಮಟ್ಟ, ಆರ್ಥಿಕ ಸ್ಥಿತಿ, ಜಾತಿ, ಉಪಜಾತಿ, ಕೌಶಲ್ಯ ಅಗತ್ಯತೆ ಮತ್ತು ಇತರೆ ಸಾಮಾಜಿಕ ಅಂಶ ದಾಖಲಿಸಿ, ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಆಧಾರವನ್ನು ಒದಗಿಸುವ ಉದ್ದೇಶದಿಂದ ದತ್ತಾಂಶ ಸಂಗ್ರಹ ಸಮೀಕ್ಷೆ ನಡೆಸಲಾಗುತ್ತಿದೆ. ಸಮೀಕ್ಷೆಯು ಸುಮಾರು 60 ಪ್ರಶ್ನೆ ಒಳಗೊಂಡಿರುತ್ತದೆ. ಗಣತಿದಾರರು ಮೊಬೈಲ್ ಆ್ಯಪ್‌ ಮೂಲಕ ಮನೆ-ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸುತ್ತಾರೆ. ಸಮೀಕ್ಷೆಯು ಪಡಿತರ ಚೀಟಿ ಮತ್ತು ಆಧಾರ್ ಸಂಖ್ಯೆಯ ಆಧಾರದಲ್ಲಿ ನಡೆಯಲಿದೆ ಎಂದು ತಿಳಿಸಿದರು.

ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ಎಲ್ಲಾ ಕುಟುಂಬಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕೈಗೊಳ್ಳುವ ಪ್ರಕ್ರಿಯೆ ಶೀಘ್ರ ಆರಂಭ ವಾಗಲಿದೆ. ಆ ದಿಸೆಯಲ್ಲಿ ಈ ಎಲ್ಲಾ ಕುಟುಂಬಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಆಗಬೇಕಿದೆ. ಯಾವುದೇ ಕುಟುಂಬವು ಸಮೀಕ್ಷೆಯಿಂದ ಹೊರಗುಳಿಯದಂತೆ ಎಚ್ಚರ ವಹಿಸಬೇಕು ಎಂದು ತಿಳಿಸಿದರು.

ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಪಡಿತರ ಚೀಟಿ ಹಾಗೂ ಆಧಾರ್ ಕಾರ್ಡ್ ಕಡ್ಡಾಯವಾಗಿರುತ್ತದೆ. 6 ವರ್ಷ ಮೇಲ್ಪಟ್ಟು ಪಡಿತರ ಚೀಟಿ ಇಲ್ಲದಿರುವ ಮತ್ತು ಪಡಿತರ ಚೀಟಿಯಲ್ಲಿ ಹೆಸರು ಇಲ್ಲದಿರುವ ಕುಟುಂಬದ ಸದಸ್ಯರ ಆಧಾರ್ ಕಾರ್ಡ್ ಕಡ್ಡಾಯವಾಗಿದೆ ಎಂದು ತಿಳಿಸಿದರು.

ಆಧಾರ್ ಕಾರ್ಡ್ ಇಲ್ಲವೆಂದರೆ ಹತ್ತಿರದ ಆಧಾರ್ ನೊಂದಣಿ ಕೇಂದ್ರಕ್ಕೆ ಭೇಟಿ ನೀಡಿ ಆಧಾ‌ರ್ ನೊಂದಣಿ ಮಾಡಿಸಿ, ನೊಂದಣಿ ಸಂಖ್ಯೆಯನ್ನು ಪಡೆಯಬೇಕು. ಆಧಾರ್ ಕಾರ್ಡ್ ಇದ್ದು ಲಿಂಕ್ ಆಗಿರುವ ಮೊಬೈಲ್ ಫೋನ್ ನಂಬ‌ರ್ ಇಲ್ಲದಿದ್ದರೆ ಹತ್ತಿರದ ಆಧಾ‌ರ್ ನೊಂದಣಿ ಕೇಂದ್ರಕ್ಕೆ ಭೇಟಿ ನೀಡಿ ಈಗ ಬಳಸುತ್ತಿರುವ ಮೊಬೈಲ್ ನಂಬರ್ ಗೆ ಲಿಂಕ್ ಮಾಡಿಸಿಕೊಳ್ಳವುದು ಅವಶ್ಯಕವಾಗಿದೆ ಎಂದು ತಿಳಿಸಿದರು.

ಜಿಲ್ಲೆಯಾದ್ಯಂತ ಸಮೀಕ್ಷೆ ಕೈಗೊಳ್ಳಲು 7686 ಗಣತಿದಾರರನ್ನು ನೇಮಿಸಲಾಗಿದೆ. ಜೊತೆಗೆ 149 ಮಾಸ್ಟರ್ ಟ್ರೈನರ್‌ 389 ಮೇಲ್ವಿಚಾರಕರನ್ನು ನೇಮಿಸಲಾಗಿದೆ. ಮಾಸ್ಟರ್ ಟ್ರೈನಿಂಗ್ ಪಡೆದವರು ಗಣತಿದಾರರಿಗೆ ತರಬೇತಿ ನೀಡಲಿದ್ದಾರೆ.

ಸಹಾಯವಾಣಿ ಸಂಪರ್ಕ: ಸಮೀಕ್ಷೆಗೆ ಸಂಬಂಧಿಸಿದಂತೆ ಯಾವುದೇ ಮಾಹಿತಿ ಗೊಂದಲಗಳಿದ್ದಲ್ಲಿ ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗದ ರಾಜ್ಯ ಸಹಾಯವಾಣಿ ಸಂಖ್ಯೆ 8050770007ಗೆ ಕರೆ ಮಾಡಬಹುದು ಎಂದು ಡಿಸಿ ಲಕ್ಷ್ಮೀಕಾಂತ ರೆಡ್ಡಿ ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಯುಕೇಶ್ ಕುಮಾರ್, ಮಹಾನಗರ ಪಾಲಿಕೆ ಆಯುಕ್ತರಾದ ಶೇಕ್ ತನ್ವಿರ್ ಆಸಿಫ್ ಹಾಗೂ ಬಿಸಿಎಂ ಅಧಿಕಾರಿ ರಾಘವೇಂದ್ರ ಉಪಸ್ಥಿತರಿದ್ದರು.

Key words: Social, Educational Survey, Mysore, DC, Meeting