RCB ಕಾಲ್ತುಳಿತ: ಆರೋಪ ಹೊತ್ತ ಸಂಸ್ಥೆಗೆ ಕಾಮನ್ ವೆಲ್ತ್ ಕಾರ್ಯಕ್ರಮದ ಗುತ್ತಿಗೆ?

ಬೆಂಗಳೂರು,ಸೆಪ್ಟಂಬರ್,11,2025 (www.justkannada.in):  ಐಪಿಎಲ್ ಕಾಲ್ತುಳಿತ ದುರಂತ ನಡೆದು 11 ಮಂದಿ ಮೃತಪಟ್ಟ ಘಟನೆ ಮಾಸುವ ಮುನ್ನವೇ ರಾಜ್ಯ ಸರಕಾರ ಮತ್ತೆ ಬೇಜಾವಾಬ್ದಾರಿ ಮೆರೆದಿದೆ.

ವಿಧಾನಸೌಧ ಮುಂಭಾಗದ ಮೆಟ್ಟಿಲಿನಲ್ಲಿ ಜೂನ್ 4ರಂದು ಐಪಿಎಲ್ ಸಂಭ್ರಮಾಚರಣೆ ನಡೆಸಿ ನಂತರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ  ಜನಜಂಗುಳಿಯಾಗಿ ಕಾಲ್ತುಳಿತ ಸಂಭವಿಸುವುದಕ್ಕೆ ಕಾರಣ ಎನ್ನಲಾದ ಸಂಸ್ಥೆ ಮತ್ತೆ ಚರ್ಚೆಗೆ ಬಂದಿದೆ.

ಇಂದು ನಡೆಯಲಿರುವ 11ನೇ ಕಾಮನ್ ವೆಲ್ತ್ ಸಂಸದೀಯ ಸಂಘದ ಭಾರತ ವಿಭಾಗದ ಸಮ್ಮೇಳನದ ಆಯೋಜನೆ ಹೊಣೆಯನ್ನು ಸರ್ಕಾರ ,  ಕಾಲ್ತುಳಿತ ದುರಂತಕ್ಕೆ ಕಾರಣವಾದ ಸಂಸ್ಥೆಗೆ ಮತ್ತೆ ನೀಡಿದೆ ಎಂಬ ಆರೋಪ ಕೇಳಿ ಬಂದಿದೆ.

ಎರಡು ದಿನಗಳ ಕಾಮನ್ ವೆಲ್ತ್ ಸಂಸದೀಯ ಸಂಘದ ಸಮ್ಮೇಳನದ ಉದ್ಘಾಟನೆ ವಿಧಾನಸೌಧ ಮುಂಭಾಗದ ಮೆಟ್ಟಿಲಿನಲ್ಲಿ ನಡೆಯಲಿದ್ದು ಇದರಲ್ಲಿ ಸುಮಾರು 9 ಕಾಮನ್ ವೆಲ್ತ್  ರಾಷ್ಟ್ರಗಳ ಪ್ರತಿನಿಧಿಗಳು ಹಾಗೂ ದೇಶದ ಎಲ್ಲಾ ರಾಜ್ಯಗಳ ಸ್ಪೀಕರ್ ಗಳು, ಸಭಾಪತಿಗಳು ಹಾಗೂ ಉಪ ಸಭಾಪತಿಗಳು ಸೇರಿದಂತೆ ಸುಮಾರು 600ಕ್ಕೂ ಹೆಚ್ಚು ಮಂದಿ ಭಾಗವಹಿಸುವ ಸಾಧ್ಯತೆ ಇದೆ.

ಹಾಗಂತ ವಿಧಾನಸೌಧದ ಮುಂದಿನ ಮೆಟ್ಟಿಲಿನಲ್ಲಿ ಈ ಕಾರ್ಯಕ್ರಮ ನಡೆದ ಮಾತ್ರಕ್ಕೆ ಮತ್ತೆ ಅವಘಡ ಸಂಭವಿಸುತ್ತದೆ ಎಂದೇನು ಅಲ್ಲ. ಆದರೆ ಇಂಥ ಅಂತರಾಷ್ಟ್ರೀಯ ಮಟ್ಟದ ಕಾರ್ಯಕ್ರಮವನ್ನು ದೇಶವನ್ನೇ ಬೆಚ್ಚಿ ಬೀಳಿಸಿದ್ದ “ಕಾಲ್ತುಳಿತ ದುರಂತ”  ಆರೋಪ ಹೊತ್ತಿರುವ ಸಂಸ್ಥೆಗೆ ಈ ನಿರ್ವಹಣೆ ಗುತ್ತಿಗೆ ಹಿಂಬಾಗಿಲಿನ ಮೂಲಕ ನೀಡಿರುವ ಅನುಮಾನವನ್ನು ಸರ್ಕಾರವೇ ನಿವಾರಿಸಬೇಕಿದೆ.

11 ಮಕ್ಕಳನ್ನು ಬಲಿ ತೆಗೆದುಕೊಂಡ ಕಾಲ್ತುಳಿತ ದುರಂತದ ತನಿಖೆ ಮತ್ತು ವಿಚಾರಣೆಗಳನ್ನು ನಡೆಸಿರುವ ಬೆಂಗಳೂರು ಜಿಲ್ಲಾಧಿಕಾರಿ ಹಾಗೂ ನ್ಯಾ. ಜಾನ್ ಮೈಕೆಲ್ ಕುನ್ಹ ನೇತೃತ್ವದ ಸಮಿತಿ ಹಾಗೂ ಸಿಐಡಿ ವಿಶೇಷ ತನಿಖಾ ದಳ ಸರ್ಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿ ಆರೋಪಿಯನ್ನಾಗಿ ಹೆಸರಿಸಿದ್ದ ಸಂಸ್ಥೆ  ವಿರುದ್ಧ ಸರ್ಕಾರ ಈ ತನಕ  ಕ್ರಮ ಜರುಗಿಸಿಲ್ಲ. ಪ್ರಭಾವಿ ರಾಜಕಾರಣಿ ಕುಟುಂಬಕ್ಕೆ ಸೇರಿದ ಸಂಸ್ಥೆ ಇದಾಗಿರುವ ಕಾರಣ, ಕ್ರಮಕ್ಕೆ ಹಿಂದೇಟು ಹಾಕಲಾಗುತ್ತಿದೆಯೇ ಎಂಬುದು ಅನುಮಾನ.

ವಿಧಾನಸಭೆ ಕಾರ್ಯದರ್ಶಿ ವಿಶಾಲಾಕ್ಷಿ ಮುಂದಾಳತ್ವದಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮಕ್ಕೆ ಕೇಂದ್ರದ ಅನುದಾನ ಸೇರಿದಂತೆ ಸುಮಾರು 30 ಕೋಟಿ ರೂ ವೆಚ್ಚ ಮಾಡಲಾಗುತ್ತಿದೆ ಎನ್ನಲಾಗಿದೆ. ಇಷ್ಟೆಲ್ಲ ದೊಡ್ಡ ಮೊತ್ತದ ಕಾರ್ಯಕ್ರಮವನ್ನು ಗಂಭೀರ ಆರೋಪ ಹೊತ್ತ ಸಂಸ್ಥೆಗೆ ಅಥವಾ ಸಂಸ್ಥೆ ಜತೆಗೆ ನಂಟಿರುವ ವ್ಯಕ್ತಿಗಳಿಗೆ ನೀಡಿರುವುದು ನಿಜವೇ .? ಎಂಬುದನ್ನು ಸ್ಪಷ್ಟಪಡಿಸಬೇಕಾಗಿದೆ.

ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹಾಗೂ ಸರ್ಕಾರದ ಮುಖ್ಯಸ್ಥರಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕತ್ತಲಲ್ಲಿಟ್ಟು ತೀರ್ಮಾನ ತೆಗೆದುಕೊಂಡರೇ ಎಂಬ ಶಂಕೆ ಮೂಡಿದೆ.

Key words: RCB stampede,  Commonwealth program, contract , accused, organization