ಮೈಸೂರು,ಸೆಪ್ಟಂಬರ್,9,2025 (www.justkannada.in): ಜಿಲ್ಲೆಯಲ್ಲಿರುವ ಕೆರೆಗಳ ಅಭಿವೃದ್ಧಿಗೆ ಅನುದಾನ ನೀಡುವ ಕುರಿತು ಮತ್ತು ಕಬ್ಬಿನ ಹೆಚ್ಚುವರಿ ದರ ನಿಗದಿಪಡಿಸಲು ಒತ್ತಾಯಿಸಿ ಮೈಸೂರು ಜಿಲ್ಲಾಧಿಕಾರಿಗೆ ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ಕಬ್ಬು ಬೆಳೆಗಾರದ ಸಂಘದ ವತಿಯಿಂದ ಮನವಿ ಸಲ್ಲಿಸಲಾಯಿತು.
ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ಕಬ್ಬು ಬೆಳೆಗಾರದ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ಅಪರ ಜಿಲ್ಲಾಧಿಕಾರಿ ಶಿವರಾಜ್ ಅವರಿಗೆ ಮನವಿ ಪತ್ರ ಸಲ್ಲಿಸಿ ಒತ್ತಾಯಿಸಲಾಯಿತು.
ಜಿಲ್ಲೆಯಲ್ಲಿ ನೂರಾರು ಕೆರೆಗಳಿದ್ದು ಕೆಲವು ಸ್ಥಳೀಯ ಬಲಾಢ್ಯರ ಕೆರೆ ಒತ್ತುವರಿ ಕಾರಣ ಕೆರೆಗಳಿಗೆ ನೀರಿನ ಮೂಲ ನಿಂತು ಹೋಗಿದೆ. ಆದ್ದರಿಂದ ಅಂತರ್ಜಲ ಕುಸಿತವಾಗುತ್ತಿದೆ. ಸುಮಾರು 80 ವರ್ಷಗಳಿಂದ ಕೆರೆಗಳಲ್ಲಿ ಹೂಳು ತುಂಬಿ ಅಂತರ್ಜಲ ಕುಸಿತವಾಗಿದೆ ಆದ್ದರಿಂದ ಹೂಳು ತುಂಬಿದ ಕೆರೆಗಳ ಮಣ್ಣನ್ನು ಬೇಸಿಗೆಯಲ್ಲಿ ರೈತರ ಜಮೀನಿಗೆ ಉಚಿತವಾಗಿ ಸರಬರಾಜು ಮಾಡಿದಲ್ಲಿ ಕೃಷಿ ಭೂಮಿಯ ಫಲವತ್ತತೆ ಹೆಚ್ಚುತ್ತದೆ. ಇದರಿಂದ ಸರ್ಕಾರ ನೀಡುವ ಡಿ.ಎ.ಪಿ, ಯೂರಿಯಾ ಗೊಬ್ಬರವನ್ನು ರೈತರಿಗೆ ಉಚಿತವಾಗಿ ನೀಡಿದಂತಾಗುತ್ತದೆ ಹಾಗೂ ರೈತರು ರಸಗೊಬ್ಬರ ಔಷಧಿ ರಹಿತವಾದ ಆರೋಗ್ಯಕರವಾದ ಆಹಾರವನ್ನು ಬೆಳೆದು ಸಾರ್ವಜನಿಕರಿಗೆ ಪೂರೈಸಲು ಸಹಕಾರಿಯಾಗುತ್ತದೆ. ಇದರಿಂದ ಆರೋಗ್ಯ ಸಮಸ್ಯೆಗಳು ಕಡಿಮೆಯಾಗಿ ಸಾರ್ವಜನಿಕರಿಗೆ ಹಣ ಉಳಿಸಿದಂತಾಗುತ್ತದೆ ಹಾಗೂ ಸರ್ಕಾರಕ್ಕೆ ಆರ್ಥಿಕ ನಷ್ಟ ತಪ್ಪಿಸಿದಂತಾಗುತ್ತದೆ ರೈತರಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ ಹಾಗೂ ಅಂತರ್ಜಲ ವೃದ್ಧಿಯಾಗುತ್ತದೆ. ಏತ ನೀರಾವರಿ ಬದಲು ರಾಜಕಾಲುವೆ ಒತ್ತುವರಿ ತೆರವುಗೊಳಿಸಿದಲ್ಲಿ ನೈಸರ್ಗಿಕವಾದ ಮಳೆ ನೀರನ್ನು ಕ್ರೋಡೀಕರಿಸಿ ಪ್ರತಿ ಜಿಲ್ಲೆಗೆ 40 ಟಿ.ಎಂ.ಸಿ ಮಳೆಯ ನೀರನ್ನು ಸಂಗ್ರಹಿಸಿದಂತಾಗುತ್ತದೆ.
ಒಟ್ಟು ರಾಜ್ಯದಲ್ಲಿ 1,250 ಟಿ.ಎಂ.ಸಿ ನೀರನ್ನು ಮಳೆಯಿಂದಾಗಿ ಸಂಗ್ರಹಿಸಬಹುದಾಗಿರುತ್ತದೆ. ರಾಜ್ಯದ 40 ಲಕ್ಷ ಕೊಳವೆ ಬಾವಿಗಳಲ್ಲಿ ಅಂತರ್ಜಲ ವೃದ್ಧಿಯಾಗುತ್ತದೆ. ಅರಣ್ಯದ ಒಳಗೆ ಹಾಗೂ ಅಂಚಿನಲ್ಲಿ ಇರುವ ಕೆರೆಗಳ ಪುನರುಜ್ಜಿವನದಿಂದ ಕೆರೆಗಳಲ್ಲಿ ನೀರು ಸಂಗ್ರಹವಾಗಿ ಬೇಸಿಗೆಯಲ್ಲಿ ಪ್ರಾಣಿಗಳು ನಾಡಿಗೆ ಬರುವುದು ತಪ್ಪುತ್ತದೆ. ರಾಜ್ಯಾದ್ಯಂತ ಗ್ರಾಮೀಣ ಭಾಗದಲ್ಲಿ ಇರುವ ಕೆರೆಗಳಿಗೆ ಗ್ರಾಮಗಳ ಚರಂಡಿಯ ಗಲೀಜು ನೀರು ಹೋಗಿ ಜಾನುವಾರುಗಳಿಗೆ ಕುಡಿಯಲು ಯೋಗ್ಯವಾಗಿಲ್ಲ. ಆದ್ದರಿಂದ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಇದನ್ನು ಸರಿಪಡಿಸಬೇಕು. ಆದ್ದರಿಂದ ಕೆರೆಗಳ ಅಭಿವೃದ್ಧಿಗೆ ಸರ್ಕಾರ ವಿಶೇಷವಾಗಿ ಹೆಚ್ಚು ಅನುದಾನ ನೀಡಲು ಯೋಜನೆ ರೂಪಿಸುವಂತೆ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
ಹಾಗೆಯೇ ಮೈಸೂರು ಜಿಲ್ಲೆಯ ಬಣ್ಣಾರಿ ಸಕ್ಕರೆ ಕಾರ್ಖಾನೆ ಕಬ್ಬು ಸರಬರಾಜು ಮಾಡಿದ ರೈತರಿಗೆ ಟನ್ ಗೆ 3295 ರೂಪಾಯಿಗಳನ್ನು ನೀಡುತ್ತಿದ್ದು, ಕಬ್ಬು ಉತ್ಪಾದನೆ ವೆಚ್ಚಕ್ಕೆ ಸರಿಯಾಗಿಲ್ಲ ಆದ್ದರಿಂದ ರೈತರು ನಷ್ಟ ಅನುಭವಿಸುತ್ತಿದ್ದಾರೆ. ತಾವು ಕೂಡಲೇ ಸಕ್ಕರೆ ಕಾರ್ಖಾನೆ ಮಾಲೀಕರ ಸಭೆ ಕರೆದು ಹೆಚ್ಚುವರಿಯಾಗಿ ರಾಜ್ಯ ಸಲಹಾ ಬೆಲೆಯನ್ನು ಎಸ್.ಎ.ಪಿ ನಿಗದಿಗೊಳಿಸಬೇಕೆಂದು ಕೋರುತ್ತೇವೆ. ತೋಟಗಾರಿಕೆ ಇಲಾಖೆಯಿಂದ ಬಾಳೆ ಬೆಳೆಗಾರರಿಗೆ ಬರುತ್ತಿದ್ದ ಅನುದಾನ ಕಳೆದ ಒಂದು ವರ್ಷದಿಂದ ಬರುತ್ತಿಲ್ಲ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ರೈತ ಮುಖಂಡರು ಒತ್ತಾಯಿಸಿದ್ದಾರೆ.
ಮೈಸೂರು ಜಿಲ್ಲೆಯ ಬಾಳೆ ಬೆಳೆಗಾರರಿಗೆ ತೊಂದರೆ: ಸೂಕ್ತ ಕ್ರಮಕ್ಕೆ ಆಗ್ರಹ
ಇನ್ನು ಆಂಧ್ರಪ್ರದೇಶ ಹಾಗೂ ತಮಿಳುನಾಡು ಭಾಗದಿಂದ ಮೂರನೇ ದರ್ಜೆಯ ಬಾಳೆಕಾಯಿ ಮೈಸೂರು ಮಾರ್ಕೆಟ್ ಗೆ ಬರುತ್ತಿತ್ತು. ಇದರಿಂದ ಸ್ಥಳೀಯ ರೈತರಿಗೆ ನಷ್ಟವಾಗುತ್ತಿದೆ ಹಾಗೂ ಬೆಲೆ ಕುಸಿತಕ್ಕೆ ಕಾರಣವಾಗಿದೆ. ಮೂರನೇ ದರ್ಜೆ ಬಾಳೆಹಣ್ಣು ಕಡಿಮೆ ದರಕ್ಕೆ ಹೋಗುವುದರಿಂದ ಗ್ರಾಹಕರು ಹೆಚ್ಚಾಗಿ ಅಂತರ್ ರಾಜ್ಯದಿಂದ ಬರುವ ಬಾಳೆಕಾಯಿ ತೆಗೆದುಕೊಳ್ಳುತ್ತಿರುವುದರಿಂದ ಮೈಸೂರು ಜಿಲ್ಲೆಯ ಬಾಳೆ ಬೆಳೆಗಾರರಿಗೆ ತೊಂದರೆ ಅನುಭವಿಸುವಂತಾಗಿದೆ. ಆದ್ದರಿಂದ ನಿಮ್ಮ ಅಧ್ಯಕ್ಷತೆಯಲ್ಲಿ ಬಾಳೆ ಬೆಳೆಗಾರರು ಹಾಗೂ ವ್ಯಾಪಾರಸ್ಥರು ಅಧಿಕಾರಿಗಳ ಸಭೆಯನ್ನು ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಮುಂಬರುವ ನವೆಂಬರ್ ತಿಂಗಳ ಮೊದಲ ವಾರದಲ್ಲೇ ಭತ್ತ ಖರೀದಿ ಕೇಂದ್ರ ತೆರೆಯಬೇಕು. ಕಳೆದ ವರ್ಷದಂತೆ ವಿಳಂಬ ನೀತಿ ಅನುಸರಿಸದಂತೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್, ಜಿಲ್ಲಾಧ್ಯಕ್ಷ ಸೋಮಶೇಖರ್, ಬರಡನಪುರ ನಾಗರಾಜ್, ವರಕೋಡು ನಾಗೇಶ್, ಲಕ್ಷ್ಮೀಪುರ ವೆಂಕಟೇಶ್, ಕುರುಬೂರು ಸಿದ್ದೇಶ್, ದೇವನೂರು ವಿಜಯೇಂದ್ರ, ಮಾರ್ಬಳ್ಳಿ ನೀಲಕಂಠಪ್ಪ, ಬನ್ನೂರು ಸೂರಿ, ಕಾಟೂರು ನಾಗೇಶ್, ಗಿರೀಶ್, ಸಾತಗಳ್ಳಿ ಬಸವರಾಜ, ದೇವನೂರು ಮಹದೇವಪ್ಪ, ಸತೀಶ್, ಕೂರ್ಗಳ್ಳಿ ರವಿಕುಮಾರ್, ಶಿವಪ್ರಸಾದ್, ರಂಗರಾಜು, ವಾಜಮಂಗಲ ಮಹದೇವು, ನಾಗೇಂದ್ರ, ಕಮಲಮ್ಮ, ವಿಜಯಮ್ಮ, ಪುಷ್ಪಾ ಉಪಸ್ಥಿತರಿದ್ದರು.
Key words: Grants, development , lakes, sugarcane, Farmer Leader, appeal, Mysore DC