ಸಂಶೋಧಕ- ಪತ್ರಕರ್ತ- ರಾಜಕಾರಣಿ; ಡಾ.ಕೆ. ಶಿವಕುಮಾರ್ ಹೊಸ ಅಧ್ಯಾಯ.   

ಮೈಸೂರು,ಆಗಸ್ಟ್,26,2025 (www.justkannada.in): ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ ಪತ್ರಿಕೆಯ ಹಿರಿಯ ಸಹಾಯಕ ಸಂಪಾದಕರಾಗಿ,ಮೈಸೂರು ಆವೃತ್ತಿ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿರುವ 55 ವರ್ಷ ವಯಸ್ಸಿನ ಕೆ.ಶಿವಕುಮಾರ್, ಕರ್ನಾಟಕದ, ಅದರಲ್ಲಿಯೂ ವಿಶೇಷವಾಗಿ ಹಳೆ ಮೈಸೂರು ಭಾಗದ ಇತಿಹಾಸ ಮತ್ತು ಈ ಸೀಮೆಯ ರಾಜಕೀಯ, ಸಾಮಾಜಿಕ, ಆರ್ಥಿಕ  ಬೆಳವಣಿಗೆ, ಆಗು ಹೋಗುಗಳ ಬಗ್ಗೆ ಅಧಿಕೃತವಾಗಿ ಮಾತನಾಡಬಲ್ಲ ಅಪರೂಪದ ಪತ್ರಕರ್ತ.

ಕಳೆದ 35 ವರುಷಗಳಿಂದ ಪತ್ರಿಕೋದ್ಯಮದಲ್ಲಿ ಸೇವೆ ಸಲ್ಲಿಸುತ್ತಿರುವ ಶಿವಕುಮಾರ್, ಮೈಸೂರು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಸ್ನಾತಕ ಪದವೀಧರರು. ಕಾಡುಗಳ್ಳ ವೀರಪ್ಪನ್ ಕ್ರೌರ್ಯ/ಉಪಟಳದಿಂದ ಉಂಟಾದ ಸಾಮಾಜಿಕ ತಳಮಳ ಕುರಿತು ತಲಸ್ಪರ್ಶಿ ಅಧ್ಯಯನ ನಡೆಸಿ, ಇದೇ ವಿಷಯದಲ್ಲಿ ಸಲ್ಲಿಸಿದ ಪಿಎಚ್ ಡಿ ಪ್ರೌಢಪ್ರಬಂಧಕ್ಕೆ ಮೈಸೂರು ವಿವಿಯಿಂದ ಡಾಕ್ಟರೇಟ್ ಪಡೆದಿದ್ದಾರೆ.

ತನ್ನ ವಿದ್ಯಾರ್ಥಿ ಜೀವನದಿಂದಲೂ ದಲಿತರು, ಹಿಂದುಳಿದವರು, ಬುಡಕಟ್ಟು ಸಮುದಾಯ ಮತ್ತು ಅಲ್ಪಸಂಖ್ಯಾತರ ಪರವಾದ ಎಲ್ಲ ಸಾಮಾಜಿಕ ಚಳವಳಿಗಳ ಜತೆಯಲ್ಲಿಯೇ ಸಾಗಿ ಬಂದಿರುವ ಕೆ. ಶಿವಕುಮಾರ್, ದನಿ ಇಲ್ಲದವರಿಗೆ ದನಿಯಾಗುತ್ತಲೇ ಪತ್ರಿಕೋದ್ಯೋಗ ಸವೆಸುತ್ತಾ ಬಂದಿರುವ ಅಪರೂಪದ ಪತ್ರಕರ್ತ. ವಿವಿಯಲ್ಲಿ ಪ್ರೊ. ಸಯ್ಯದ್ ಇಕ್ಬಾಲ್ ಖಾದ್ರಿ, ಪತ್ರಿಕಾ ರಂಗದಲ್ಲಿ ಟಿ. ಜೆ. ಎಸ್, ಜಾರ್ಜ್, ಸಾಮಾಜಿಕ ರಂಗದಲ್ಲಿ ಪ್ರೊ. ಕೆ. ರಾಮದಾಸ್, ದೇವನೂರ ಮಹಾದೇವ ಅವರ ಗರಡಿಯಲ್ಲಿ ಪಳಗಿರುವ ಕೆ. ಶಿವಕುಮಾರ್, ತಮ್ಮ ಮಾಸ್ಟರ್ ಡಿಗ್ರಿ ಬಳಿಕ ಒಂದಿಷ್ಟು ಕಾಲ ಕೋಲಾರ ಪತ್ರಿಕೆಯಲ್ಲಿ ಕೆಲಸ ಮಾಡಿದರು. ಬಳಿಕ  ಮೈಸೂರಿನ ಡೆಕ್ಕನ್ ನ್ಯೂಸ್, ಆಂದೋಲನ, ಏಷ್ಯನ್ ಏಜ್ ಬಳಿಕ ದೀರ್ಘಕಾಲ ಎಕ್ಸ್ಪ್ರೆಸ್ ಪತ್ರಿಕೆಯಲ್ಲಿ ವಿವಿಧ ಜವಾಬ್ದಾರಿ ಹೊತ್ತು ಮಾಡಿರುವ ವರದಿಗಾರಿಕೆ, ಅವರ ಸಾಮಾಜಿಕ ಬದ್ಧತೆಯ ಪ್ರತಿಫಲನ.

ನೊಂದವರ ನೋವು ನೊಂದವರಿಗಷ್ಟೇ ಗೊತ್ತು, ನೋಯದವರಿಗೆ ಹೇಗೆ ತಾನೇ ಗೊತ್ತಾಗುತ್ತದೆ ಎಂಬ ಮಾತೊಂದಿದೆ. ಅಂತೆಯೇ ಶಿವಕುಮಾರ್ ಅವರಿಗೆ  ತಳ ಸಮುದಾಯದಲ್ಲಿರುವ ಎಲ್ಲ ಜನರ ನೋವು-ನಲಿವಿನ ಅರಿವಿದೆ. ಅವರೆಲ್ಲರೂ ನನ್ನ ಅಣ್ತತಮ್ಮಂದಿರು ಎನ್ನುತ್ತಾರೆ ಶಿವಕುಮಾರ್. ಕರ್ನಾಟಕದ  ಸಾಮಾಜಿಕ,ಆರ್ಥಿಕ ಮತ್ತು ರಾಜಕೀಯ ಬಹು ಆಯಾಮಗಳ ಬಗ್ಗೆ, ಇಲ್ಲಿನ ಸಮಸ್ಯೆ-ಸಂಕಟ-ಸವಾಲು-ಪರಿಹಾರಗಳ ಬಗ್ಗೆ  ವಿಶಿಷ್ಟವಾದ ಒಳನೋಟ ಹೊಂದಿದ್ದಾರೆ.

ಬಸವ ಪ್ರಶಸ್ತಿ, ಕಾನ್ಶಿರಾಮ್ ಪ್ರಶಸ್ತಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ  ಸೇರಿದಂತೆ ಪ್ರತಿಷ್ಠಿತ ಪ್ರಶಸ್ತಿ ಪಡೆದಿರುವ ಕೆ.ಶಿವಕುಮಾರ್,  ಶೈಕ್ಷಣಿಕವಾಗಿ, ಬೌದ್ಧಿಕವಾಗಿಯೂ ವಿಶ್ವವಿದ್ಯಾಲಯಗಳ ಪಾಲಿಗೆ ಅನುಭವಿ ಶಿಕ್ಷಣ ತಜ್ಞ. ವಿವಿಯ ಪಠ್ಯಕ್ರಮ ಮತ್ತು ಅಧ್ಯಯನ ವಿಷಯವನ್ನು ಉತ್ಕೃಷ್ಟಗೊಳಿಸುವ ನಿಟ್ಟಿನಲ್ಲಿ ಮೈಸೂರು ವಿಶ್ವವಿದ್ಯಾಲಯ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಸೇರಿದಂತೆ ಹಲವು ಪ್ರತಿಷ್ಠಿತ ಶೈಕ್ಷಣಿಕ ಸಂಸ್ಥೆಗಳ ಆಡಳಿತ ಮಂಡಳಿಯ ಸದಸ್ಯನಾಗಿ ನಾಮನಿರ್ದೇಶನಗೊಂಡು ಕೆಲಸ ಮಾಡಿದ್ದಾರೆ.

ಮಾನವ ಶಾಸ್ತ್ರ ವಿಷಯದಲ್ಲಿ ಕೆ. ಶಿವಕುಮಾರ್ ಅವರು  ಸಂಶೋಧನೆ ನಡೆಸಿ ಸಾದರ ಪಡಿಸಿರುವ “ವೀರಪ್ಪನ್ ನಂತರದ ಕಾಲಘಟ್ಟ:  ಕರ್ನಾಟಕದ ಚಾಮರಾಜನಗರ ಜಿಲ್ಲೆಯ ಸಾಮಾಜಿಕ,ಆರ್ಥಿಕ ಹಾಗೂ ಸಂವಹನ ಅಭಿವೃದ್ಧಿ- ಒಂದು ಅಧ್ಯಯನ” ಕುರಿತ ಮಹಾಪ್ರಬಂಧ ಒಂದು ಅನೂಹ್ಯ ಡಾಕ್ಯೂಮೆಂಟರಿಯೂ ಹೌದು.

ನರಹಂತಕ ವೀರಪ್ಪನ್ ಸಕ್ರಿಯನಾಗಿದ್ದ ಕಾಲಘಟ್ಟದ ಎಲ್ಲ ಕ್ರೌರ್ಯಗಳನ್ನು ಪ್ರತ್ಯಕ್ಷ ವರದಿ ಮಾಡಿದಂತೆಯೇ, ವೀರಪ್ಪನ್ ಸಾವಿನ ಬಳಿಕದ ಸಾಮಾಜಿಕ ಸ್ಥಿತಿಗತಿಯನ್ನೂ ಸೂಕ್ಷ್ಮವಾಗಿ ನೋಡಿದ್ದಾರೆ, ಹಾಗಾಗಿ, ಅವರ ಈ ಪ್ರಬಂಧ ವರದಿಗೆ ಸಹಜವಾಗಿಯೇ ಅತ್ಯಂತ ಮೌಲಿಕತೆ ಹಾಗೂ ಅರ್ಥವಂತಿಕೆ ಬಂದಿದೆ. ವೀರಪ್ಪನ್ ಉಪಟಳ ಹೆಚ್ಚಿದ್ದ ಚಾಮರಾಜನಗರ ಜಿಲ್ಲೆಯ ಇಂದಿನ ಸ್ಥಿತಿ ಗತಿ ಏನು, ಅಲ್ಲಿ ಯಾವ ರೀತಿ ಅಭಿವೃದ್ಧಿ ಕಾರ್ಯ ನಡೆಯಬೇಕಿದೆ ? ಸಂವಿಧಾನ ನೀಡುವ ಸಾಮಾಜಿಕ ಆಶಯಗಳು ಈಡೇರಿವಿಯೇ ? – ಎಂಬಿತ್ಯಾದಿ ಸಂಗತಿಗಳನ್ನು ಯಾವುದೇ ಜನಪರ ಸರಕಾರ ಅಧ್ಯಯನ ನಡೆಸಿ, ಅದಕ್ಕೆ ತಕ್ಕಂತೆ ಕಲ್ಯಾಣ ಯೋಜನೆಗಳನ್ನು ಪ್ರಕಟಿಸಬೇಕಿತ್ತು. ಅಂಥ ಯೋಜಿತ ಹಾಗೂ ಕೇಂದ್ರಿತ ಪ್ರಯತ್ನ ಇದುವರೆಗೂ ಸರಕಾರದ ವತಿಯಿಂದ ನಡೆದಿಲ್ಲ.

ಕೆ. ಶಿವಕುಮಾರ್ ಈ ಸೂಕ್ಷ್ಮತೆಯನ್ನು ಗ್ರಹಿಸಿಯೇ ಈ ಅಧ್ಯಯನ ಕಾರ್ಯ ಕೈಗೆತ್ತಿಕೊಂಡಿರಬೇಕು. ಹಾಗಾಗಿಯೇ, ಇಲ್ಲಿ  ಚಾಮರಾಜನಗರದ ಸಾಮಾಜಿಕ ಅಭಿವೃದ್ಧಿ, ಆ ಭಾಗದ ಜನರು ಅನುಭವಿಸಿರುವ ಕಷ್ಟ ಕೋಟಲೆಗಳು,  ಸರಕಾರ ಅವರಿಗೆ ಒದಗಿಸಿರುವ  ಸಮಾನತೆ,  ಸಾಮಾಜಿಕ ಸ್ವಾತಂತ್ರ್ಯ, ಸಾಮಾಜಿಕ ಅರಿವಿನಂಥ ಸಂಗತಿಗಳು ನಿಜವಾಗಿಯೂ ದೊರೆತಿವೆಯೇ ? ಈ ಎಲ್ಲವನ್ನೂ ಇಲ್ಲಿ ಚರ್ಚಿಸಿದ್ದಾರೆ.

ದಬ್ಬಾಳಿಕೆ, ಕ್ರೌರ್ಯ, ಮಾನವ ಹಕ್ಕುಗಳ ಉಲ್ಲಂಘನೆ, ಭ್ರೂಣ ಹತ್ಯೆ, ಜೀತ ಪದ್ಧತಿ, ಗರ್ಭಪಾತ, ಬಾಲ್ಯ ವಿವಾಹದಂಥ ಅನಿಷ್ಟಗಳು ವೀರಪ್ಪನ್ ಕಾಲಘಟ್ಟದಲ್ಲಿ ಹೇಗಿದ್ದವು, ಈಗ ಹೇಗಿವೆ ? ಸರಕಾರದ ಸಾಮಾಜಿಕ ಭದ್ರತಾ ಯೋಜನೆಗಳು, ಅನುಕೂಲಗಳಾದ  ಪಡಿತರ ಲಭ್ಯತೆ, ಮಾಸಾಶನ,  ವಿಮಾ ಯೋಜನೆಗಳು ನಿಜಕ್ಕೂ ಈಗ ದೊರಕುತ್ತಿವೆಯೇ, ಜನರೇನಾದರೂ ಸಾಮಾಜಿಕ ದುಶ್ಚಟಗಳಿಗೆ ಬಲಿಯಾಗಿರುವರೇ ? ಗುಡಿ ಕೈಗಾರಿಕೆ, ಆರ್ಥಿಕ ಚಟುವಟಿಕೆ ಹೇಗಿದೆ ? ವಿದ್ಯುತ್, ಶಿಕ್ಷಣ, ಆರೋಗ್ಯ, ಬ್ಯಾಂಕಿಂಗ್, ಟೆಲಿ ಕಮ್ಯುನಿಕೇಷನ್ ದೊರಕುತ್ತಿದೆಯೇ ? ಈ ಎಲ್ಲವನ್ನೂ ಅನುಭವಿಸಲು ಅಲ್ಲಿನ ಜನ ಸಶಕ್ತರಿರುವರೇ – ಈ ಎಲ್ಲ ಸಂಗತಿಗಳು ಹಿನ್ನಡೆ/ಮುನ್ನಡೆಗೆ ವೀರಪ್ಪನ್ ಹೇಗೆ ಕಾರಣಕರ್ತನಾಗಿದ್ದಾನೆ ಎಂಬ ಸಂಗತಿ ಬಗ್ಗೆ ಸಂಶೋಧಕ ಶಿವಕುಮಾರ್ ಬೆಳಕು ಚೆಲ್ಲಿದ್ದಾರೆ.

ಹಾಗೆ ನೋಡಿದರೆ, ಇದು ಕೇವಲ ಶೈಕ್ಷಣಿಕ ಕಾರಣಕ್ಕೆ ದಾಖಲಿಸಿರುವ ಪ್ರಬಂಧವಲ್ಲ. ಬದಲಿಗೆ,  ಮಾನವ ಅಭಿವೃದ್ಧಿ ಕುರಿತ ರಚನಾತ್ಮಕ ಸಲಹೆ, ಒಳನೋಟಗಳನ್ನು ಒಳಗೊಂಡಿರುವ ವಾಸ್ತವಕ್ಕೆ ಹತ್ತಿರವಾದ ಪ್ರಬಂಧ.  ಇದಕ್ಕಾಗಿಯೇ  ಶಿವಕುಮಾರ್ ಚಾಮರಾಜನಗರ ಜಿಲ್ಲೆಯ 95 ಹಳ್ಳಿಗಳನ್ನು ಸುತ್ತಾಡಿದ್ದಾರೆ, 306ಕ್ಕೂ ಹೆಚ್ಚು ಸಂತ್ರಸ್ತರನ್ನು ಮಾತನಾಡಿಸಿದ್ದಾರೆ, ಅವರೊಂದಿಗೆ ಕಾಲ ಕಳೆದು, ಅವರ ಅನುಭವಗಳಿಗೆ ಕಿವಿಯಾಗಿದ್ದಾರೆ. ವೀರಪ್ಪನ್ ಓಡಾಡಿದ ಚಾಮರಾಜನಗರ ಜಿಲ್ಲೆಯ ಎಲ್ಲ ಕಡೆಯೂ ನಾಲ್ಕು ವರ್ಷ ಕಾಲ ಓಡಾಡಿ ಸಿದ್ಧಪಡಿಸಿರುವ ಈ ಪ್ರಬಂಧ,  ಈ ಎಲ್ಲ ಕಾರಣಗಳಿಗಾಗಿ ಶೈಕ್ಷಣಿಕ ವಲಯದ ಗಮನಸೆಳೆದಿದೆ.

ಇಂಥಾ ಶಿವಕುಮಾರ್ ಅವರಿಗೆ ಜಸ್ಟ್ ಕನ್ನಡ ಅಭಿನಂದಿಸುತ್ತದೆ !

Key words: Researcher, Journalist, Politician, K. Shivakumar, new chapter.