ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಆಯ್ಕೆ ಸ್ವಾಗತಾರ್ಹ : ಪ್ರತಾಪ ಸಿಂಹ ವಿರೋಧಕ್ಕೆ ಕೆ.ವಿ‌‌. ಮಲ್ಲೇಶ್ ಕಿಡಿ

ಮೈಸೂರು,ಆಗಸ್ಟ್,26,2025 (www.justkannada.in): ಹಿರಿಯ‌ ಸಾಹಿತಿ, ಪ್ರತಿಷ್ಠಿತ ಬೂಕರ್ ಪ್ರಶಸ್ತಿ ಪುರಸ್ಕೃತೆ ಬಾನು ಮುಷ್ತಾಕ್ ಅವರನ್ನು ಮೈಸೂರು‌ ದಸರಾ ಉದ್ಘಾಟನೆಗೆ ಆಹ್ವಾನಿಸಲು ರಾಜ್ಯ ಸರಕಾರ ನಿರ್ಧರಿಸಿರುವುದು ಅತ್ಯಂತ‌ ಸ್ವಾಗತಾರ್ಹ ಎಂದಿರುವ ಕಾಂಗ್ರೆಸ್ ಮುಖಂಡ ಕೆ.ವಿ ಮಲ್ಲೇಶ್ ಅವರು  ಬಾನು ಮುಷ್ತಾಕ್ ಆಯ್ಕೆಗೆ ವಿರೋಧ ವ್ಯಕ್ತಪಡಿಸಿರುವ ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ದ ಕಿಡಿಕಾರಿದ್ದಾರೆ.

ಈ ಕುರಿತು ಮಾಧ್ಯಮ ಪ್ರಕಟಣೆ ಮೂಲಕ ಪ್ರತಿಕ್ರಿಯಿಸಿರುವ ಕೆ.ವಿ ಮಲ್ಲೇಶ್,  ದಸರಾ ಮಹೋತ್ಸವ ನಾಡಿನ ಸಾಂಸ್ಕೃತಿಕ ‌ವೈಭವದ ಪ್ರತೀಕವಾದ ನಾಡಹಬ್ಬ. ಕನ್ನಡ ನಾಡಿನ, ದೇಶ- ವಿದೇಶಗಳ  ಎಲ್ಲ ಜಾತಿ, ಧರ್ಮ, ವರ್ಗಗಳ ಜನರು ಉತ್ಸಾಹದಿಂದ ಪಾಲ್ಗೊಳ್ಳುವ  ಸೌಹಾರ್ದದ ಸಂಭ್ರಮ. ಪ್ರಜಾತಂತ್ರ ಸರ್ಕಾರ ನೀಡುವ ಅನುದಾನದ ಮೂಲಕ ಸಂಘಟಿತವಾಗುವ ಈ ಉತ್ಸವ ಜಾತಿ, ಧರ್ಮ, ರಾಜ್ಯ-ದೇಶದ ಗಡಿರೇಖೆಗಳನ್ನು ಮೀರಿ ಸರ್ವರನ್ನೂ ಒಳಗೊಳ್ಳುತ್ತಿರುವಾಗ , ಕೆಲವರು ಉದ್ಘಾಟಕರ ಆಯ್ಕೆಯನ್ನು ವಿವಾದಕ್ಕೆ ಗುರಿ ಮಾಡುತ್ತಿರುವುದು ಖಂಡನೀಯ ಎಂದಿದ್ದಾರೆ.

ಎರಡು ಬಾರಿ ಮೈಸೂರು ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ ಮಾಜಿ ಸಂಸದ ಪ್ರತಾಪ‌ ಸಿಂಹ ಅವರು ಬಾನು ಮುಷ್ತಾಕ್‌ ಅವರ ಧಾರ್ಮಿಕ ನಂಬಿಕೆಯನ್ನು ಮುಂದೆ ಮಾಡಿ, ಆಕ್ಷೇಪ ವ್ಯಕ್ತಪಡಿಸಿರುವುದು ಅವರ  ಸಂಕುಚಿತ ಮನೋಧರ್ಮವನ್ನು‌ ತೋರಿಸುತ್ತದೆ.  ಪ್ರತಾಪ ಸಿಂಹ, ಬಾನು ಸಹಿತ ಯಾರೇ ಆಗಲಿ ಅವರವರ ಧಾರ್ಮಿಕ‌ ನಂಬಿಕೆಗಳು ಅವರವರಿಗೆ ಬಿಟ್ಟ ವಿಷಯ. ಧಾರ್ಮಿಕ ನಂಬಿಕೆಯ ಸ್ವಾತಂತ್ರವನ್ನು ಸಂವಿಧಾನ‌ ನಮಗೆ‌ ನೀಡಿದೆ ಕೂಡ .

ಆದರೆ, ಪ್ರಜಾತಾಂತ್ರಿಕ ಸರ್ಕಾರವನ್ನು ವ್ಯಕ್ತಿಗತ ನಂಬಿಕೆ, ಧರ್ಮ-ಕರ್ಮಗಳ ಆಧಾರದ ಮೇಲೆ ನಡೆಸಲಾಗದು. ನಾಡಿನ ಸಾಂಸ್ಕೃತಿಕ ಉತ್ಸವವೂ ಸೇರಿ ಸರ್ಕಾರ ನಡೆಸುವ ಎಲ್ಲ ಕಾರ್ಯಕ್ರಮಗಳು ಪ್ರಜಾತಾಂತ್ರಿಕ, ಸಾಂವಿಧಾನಿಕ ಆಶಯಗಳ ತಳಹದಿಯ ಮೇಲೆ ನಡೆಯಬೇಕೆಂಬ ಸಾಮಾನ್ಯ ಜ್ಞಾನ, ಕನಿಷ್ಠ ಪ್ರಜ್ಞೆ ಮಾಜಿ ಸಂಸದರಿಗೆ ಇಲ್ಲದಿರುವುದು ದುರದೃಷ್ಟಕರ ಎಂದು ಕೆ.ವಿ ಮಲ್ಲೇಶ್ ಬೇಸರ ವ್ಯಕ್ತಪಡಿಸಿದ್ದಾರೆ.

ಮೈಸೂರು ರಾಜ ಪರಂಪರೆ, ಅವರು ಆಚರಿಸುವ ಧಾರ್ಮಿಕ ಆಚರಣೆಗಳ ಬಗ್ಗೆ ಗೌರವ ಭಾವನೆ ಇರಿಸಿಕೊಳ್ಳುವುದು, ಬಿಡುವುದು ಪ್ರತಾಪಸಿಂಹ ಅವರ ವೈಯಕ್ತಿಕ ವಿಚಾರ. ರಾಜ ಪ್ರಭುತ್ವದ ಕಾಲ‌ ಮುಗಿದು, ಪ್ರಜಾಪ್ರಭುತ್ವವನ್ನು ಅಪ್ಪಿಕೊಂಡು ದಶಕಗಳೇ ಕಳೆದ ನಂತರವೂ ‘ಮಹಾರಾಜರ ಪರಂಪರೆಯನ್ನು ಹಾಳುಮಾಡುತ್ತಿದ್ದಾರೆ’ ಎಂದು ಹಳಹಳಿಸುವುದು, ಬಾನು ಅವರಿಗೆ ಚಾಮುಂಡೇಶ್ವರಿ ಮೇಲೆ ನಂಬಿಕೆ ಇದೆಯೇ ; ಇಲ್ಲವೇ ಎಂದು ಪ್ರಶ್ನಿಸುವುದು,  ಬಾನು ಮುಷ್ತಾಕ್ ಅವರು ನಂಬಿದ ಧರ್ಮ ಏನು ಹೇಳುತ್ತದೆಯೋ ಆ ಕಾರಣಕ್ಕೆ ಅವರ ಆಯ್ಕೆ ಸಮ್ಮತವಲ್ಲ ಎನ್ನುವುದು ಅವರ ಎಳಸುತನಕ್ಕೆ ಸಾಕ್ಷಿ. ಪ್ರಜಾಪ್ರಭುತ್ವ ವ್ಯವಸ್ಥೆ ಕೊಡಮಾಡಿದ ಎಲ್ಲ ಲಾಭಗಳನ್ನು ಪಡೆದು ಅಧಿಕಾರ – ಸ್ಥಾನ ಮಾನಗಳನ್ನು ಅನುಭವಿಸಿರುವ  ಪ್ರತಾಪ ಸಿಂಹ, ಬಸನಗೌಡ ಯತ್ನಾಳ ಮುಂತಾದವರು ‘ಪ್ರಭುತ್ವವಾದಿ’ ಮನಸ್ಥಿತಿಯನ್ನು ಮೆರೆಯುವುದು ಶೋಭೆ ತರುವ ವಿಚಾರವಲ್ಲ.

ಈ ಹಿಂದೆ ನಾಡಿನ ಹೆಮ್ಮೆಯ ಕವಿಯ ನಿಸಾರ್ ಅಹಮದ್ ಅವರು ದಸರೆಯನ್ನು‌ ಉದ್ಘಾಟಿಸಿದ್ದರು. ವಿವಿಧ ಕ್ಷೇತ್ರ, ವರ್ಗಗಳ ಜನರು ಅವರ ವೈಯಕ್ತಿಕ ನಂಬಿಕೆ- ಶ್ರದ್ಧೆಗಳನ್ನು ಮೀರಿ ನವರಾತ್ರಿ ಉತ್ಸವಕ್ಕೆ ಚಾಲನೆ ನೀಡಿದ ನಿದರ್ಶನಗಳಿವೆ. ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗಲೆಲ್ಲ ಒಳಗೊಳ್ಳುವಿಕೆಯ ಆಶಯವನ್ನು ಹೆಚ್ಚು ವಿಸ್ತೃತ ಗೊಳಿಸಿದೆ. ನಾಡಿನ ಜನ ಇಂತಹ ‘ಸೌಹಾರ್ದ’ ನಡೆಗಳನ್ನು ಮೆಚ್ಚಿದ್ದಾರೆ ಕೂಡ. ವಾಸ್ತವ ಹೀಗಿರುವಾಗ, ಎಲ್ಲಾ ವಿಷಯದಲ್ಲೂ ಧಾರ್ಮಿಕ ಸಂಕುಚಿತತೆ ತೋರುವ, ಮೊಸರಲ್ಲಿ ಕಲ್ಲು ಹುಡುಕುವ ಕೆಲವು ಬಿಜೆಪಿ ನಾಯಕರ  ‘ಅಪ್ರಜಾತಾಂತ್ರಿಕ’ ಒತ್ತಡಕ್ಕೆ ಮಣಿಯದೆ ರಾಜ್ಯ ಸರ್ಕಾರ  ಮುನ್ನಡೆಯಲಿ. ಸಾಧ್ಯವಾದರೆ, ಬಾನು ಅವರೊಂದಿಗೆ ಬೂಕರ್ ಪುರಸ್ಕಾರ ವನ್ನು ಹಂಚಿಕೊಂಡ ದೀಪಾ ಭಾಸ್ತಿ ಅವರನ್ನೂ ದಸರೆಯ ಯಾವುದಾದರೂ ಕಾರ್ಯಕ್ರಮ ಉದ್ಘಾಟನೆಗೆ ಆಹ್ವಾನಿಸಿ, ಗೌರವಿಸಲಿ ಎಂದು ಕೆ.ವಿ ಮಲ್ಲೇಶ್ ಆಗ್ರಹಿಸಿದ್ದಾರೆ.

Key words: Banu Mushtaq, choice, inaugurate, dasara, welcome, K.V. Mallesh