ಸಾರ್ವಜನಿಕ ಗಣೇಶೋತ್ಸವಕ್ಕೆ ಸೆಸ್ಕ್‌ನಿಂದ ಸುರಕ್ಷತಾ ಮಾರ್ಗಸೂಚಿ: ಈ ಮುನ್ನೆಚ್ಚರಿಕೆಗಳು ಅಗತ್ಯ

ಮೈಸೂರು, ಆಗಸ್ಟ್,25, 2025 (www.justkannada.in):  ಗೌರಿ-ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಗಣಪತಿ ಪ್ರತಿಷ್ಠಾಪನೆ ಮಾಡುವ ಸಂದರ್ಭದಲ್ಲಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮ ನಿಯಮಿತ (ಸೆಸ್ಕ್‌) ವತಿಯಿಂದ ಸಾರ್ವಜನಿಕ ಸಾರ್ವಜನಿಕವಾಗಿ ಗಣಪತಿ ಪ್ರತಿಷ್ಠಾಪನೆ ಮಾಡುವ ಸಂಘ-ಸಂಸ್ಥೆಗಳಿಗೆ ಮಾರ್ಗಸೂಚಿ ಹೊರಡಿಸಿದೆ.

ಹಬ್ಬದ ಆಚರಣೆ ವೇಳೆ ಸಂಭ್ರಮದ ಜತೆಗೆ ಸುರಕ್ಷತೆಗೂ ಆದ್ಯತೆ ನೀಡಬೇಕಿದೆ. ಆದ್ದರಿಂದ ಸಾರ್ವಜನಿಕ ಸ್ಥಳಗಳಲ್ಲಿ ಗಣೇಶೋತ್ಸವ ನಡೆಸುವವರು ಸೂಕ್ತ ಮುನ್ನೆಚ್ಚರಿಕೆವಹಿಸಬೇಕಿದೆ. ಆ ಮೂಲಕ ಹಬ್ಬದ ಆಚರಣೆ ಸಂದರ್ಭದಲ್ಲಿ ಯಾವುದೇ ಅನಾಹುತಗಳು ಸಂಭವಿಸದಂತೆ ನಿಗಾವಹಿಸಬೇಕಿದೆ.

ಆದ್ದರಿಂದ ಗಣೇಶೋತ್ಸವ ಆಚರಣೆಗೆ ಅನಧಿಕೃತವಾಗಿ ವಿದ್ಯುತ್ ಲೈನ್‌ ಗಳಿಗೆ ಹುಕ್ ಹಾಕಿ ಸಂಪರ್ಕ ಪಡೆಯದೆ, ಸೆಸ್ಕ್‌ ಉಪ ವಿಭಾಗೀಯ ಅಥವಾ ಶಾಖಾ ಕಚೇರಿಗೆ ತೆರಳಿ ಅನುಮತಿ ಪಡೆದು ಸಂಪರ್ಕ ಪಡೆಯಬೇಕು. ಗಣಪತಿ ಪ್ರತಿಷ್ಠಾಪಿಸುವ ಸ್ಥಳದ ಸುತ್ತಮುತ್ತ ಯಾವುದೇ ವಿದ್ಯುತ್ ಮಾರ್ಗಗಳು ಇಲ್ಲದಿರುವುದನ್ನು ಖಚಿತಪಡಿಸಿಕೊಳ್ಳಬೇಕು. ವಿದ್ಯುತ್ ಲೈನ್‌ ಕೆಳಗೆ ಅಥವಾ ಅಕ್ಕಪಕ್ಕದಲ್ಲಿ ಗಣಪತಿ ಪೆಂಡಾಲ್/ಮಂಟಪಗಳನ್ನು ಹಾಕದೆ, ಸುರಕ್ಷತೆಯ ಅಂತರ ಕಾಯ್ದುಕೊಂಡು ಪೆಂಡಾಲ್/ಮಂಟಪಗಳನ್ನು ಹಾಕಬೇಕು.

ಮಳೆಗಾಲ ಇರುವುದರಿಂದ ಹೆಚ್ಚಿನ ಮುನ್ನೆಚ್ಚರಿಕೆ ವಹಿಸಬೇಕಿದ್ದು, ವಿದ್ಯುತ್ ಕಂಬಗಳು, ವಿದ್ಯುತ್ ಪರಿವರ್ತಕ(ಟಿ.ಸಿ)ಗಳಿಗೆ ಬ್ಯಾನರ್, ಫಲಕಗಳನ್ನು ಕಟ್ಟಬಾರದು. ಗಣೇಶನ ವಿಗ್ರಹ ವಿಸರ್ಜನೆ ವೇಳೆ ವಿದ್ಯುತ್ ತಂತಿಗಳಿಗೆ ತಾಗುವ ರೀತಿಯಲ್ಲಿ ಎತ್ತರದ ಧ್ವಜಗಳು, ಕಟೌಟ್‌ ಗಳನ್ನು ಕಟ್ಟಬಾರದು. ಗಣಪತಿ ವಿಸರ್ಜನಾ ಮೆರವಣೆಗೆ ನಡೆಯುವ ಬೀದಿಗಳಲ್ಲಿ ವಿದ್ಯುತ್ ಲೈನ್‌ಗಳ ಅಡಚಣೆ ಇದ್ದಲ್ಲಿ ಸಂಬಂಧಪಟ್ಟ ಸೆಸ್ಕ್‌ ಕಚೇರಿಯ ಗಮನಕ್ಕೆ ತಂದು, ವಿದ್ಯುತ್ ಪೂರೈಕೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಕ್ರಮವಹಿಸಬೇಕಿದೆ. ವಿದ್ಯುತ್‌ ಸಂಬಂಧಿಸಿದ ಯಾವುದೇ ಸಹಾಯ ಅಥವಾ ಮಾಹಿತಿಗೆ 1912 ಸಂಪರ್ಕಿಸಬೇಕಿದೆ.

ಗ್ರಾಹಕರು ಹಾಗೂ ಸಾರ್ವಜನಿಕರ ಸೇವೆಗೆ ಸೆಸ್ಕ್‌ ಸದಾ ಸನ್ನದ್ಧವಿರಲಿದೆ. ಈ ನಿಟ್ಟಿನಲ್ಲಿ ಸುರಕ್ಷಿತವಾಗಿ ಗಣೇಶೋತ್ಸವ ಆಚರಿಸಲು ಗಣೇಶ ಮಂಡಳಿಗಳು ಸೆಸ್ಕ್‌ ವತಿಯಿಂದ ಅಗತ್ಯ ಸಹಕಾರ ಪಡೆದು ಸುರಕ್ಷಿತ ರೀತಿಯಲ್ಲಿ ಹಬ್ಬದ ಆಚರಣೆ ಮಾಡಬೇಕಿದೆ ಎಂದು ಸೆಸ್ಕ್‌ ವ್ಯವಸ್ಥಾಪಕ ನಿರ್ದೇಶಕರಾದ ಕೆ.ಎಂ. ಮುನಿಗೋಪಾಲ್‌ ರಾಜು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Key words: CESC, safety, guidelines , Ganesh festival