ಅಕ್ರಮ ಗಣಿಗಾರಿಕೆ: ಸಂಪುಟ ಉಪಸಮಿತಿ ವರದಿ ಶಿಫಾರಸ್ಸಿನಂತೆ ಸರ್ಕಾರ ಕೈಗೊಂಡ ತೀರ್ಮಾನಗಳು ಹೀಗಿದೆ..

ಬೆಂಗಳೂರು,ಆಗಸ್ಟ್,22,2025 (www.justkannada.in):  ರಾಜ್ಯದಲ್ಲಿ ನಡೆದಿದ್ದ ಅಕ್ರಮ ಗಣಿಗಾರಿಕೆ ಸಂಬಂಧ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ರಚಿಸಲಾಗಿದ್ದ ಸಚಿವ ಸಂಪುಟದ ಉಪಸಮಿತಿಯ ವರದಿಯನ್ನು ರಾಜ್ಯ ಸಚಿವ ಸಂಪುಟ ಅನುಮೋದಿಸಿದ್ದು ಈ ವರದಿಯ ಶಿಫಾರಸ್ಸಿನಂತೆ ಕೈಗೊಂಡ ತೀರ್ಮಾನಗಳ ಬಗ್ಗೆ ರಾಜ್ಯ ಸರ್ಕಾರ ಇಂದು ಸದನಕ್ಕೆ ತಿಳಿಸಿದೆ.

ಇಂದು ಸದನದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ,  ಉಪ ಸಮಿತಿಯ ಶಿಫಾರಸ್ಸಿನಂತೆ, ಅಕ್ರಮ ಗಣಿಗಾರಿಕೆಯಿಂದ ಸರ್ಕಾರಕ್ಕೆ ಉಂಟಾದ ಆರ್ಥಿಕ ನಷ್ಟವನ್ನು ವಸೂಲಿ ಮಾಡಲು, ಕರ್ನಾಟಕ ಅಕ್ರಮ ಗಣಿಗಾರಿಕೆ ಮತ್ತು ಅಪರಾಧದ ಉತ್ಪತ್ತಿಗಳಿಂದಾದ ಸ್ವತ್ತನ್ನು ವಶಪಡಿಸಿಕೊಳ್ಳುವುದಕ್ಕಾಗಿ ಮತ್ತು ಜಪ್ತಿಗಾಗಿ ವಸೂಲಾತಿ ಆಯುಕ್ತರನ್ನು (Recovery Commissioner) ನೇಮಿಸಲು ರೂಪಿಸಲಾದ ಹೊಸ ಕರಡು ಮಸೂದೆಯನ್ನು ಸಚಿವ ಸಂಪುಟವು ಅಂಗೀಕರಿಸಿದೆ ಎಂದರು.

ಅಕ್ರಮ ಗಣಿಗಾರಿಕೆ ಪ್ರಕರಣಗಳಲ್ಲಿ ಕಾನೂನು ಕ್ರಮ ಜರುಗಿಸಲು, ನ್ಯಾಯಾಲಯ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಲು ಹಾಗೂ ರಾಜ್ಯ ಸರ್ಕಾರಕ್ಕೆ ಸಂಭವಿಸಿರುವ ನಷ್ಟವನ್ನು ವಸೂಲಾತಿ ಮಾಡಲು ಸರ್ಕಾರವು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದೆ ಎಂಬುದನ್ನು ಸದನದ ಗಮನಕ್ಕೆ ತರಬಯಸುತ್ತೇನೆ. ನಮ್ಮ ಸರ್ಕಾರವು ಸಾರ್ವಜನಿಕ ಸಂಪತ್ತಿನ ಲೂಟಿಯನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಸಹ ಸದನಕ್ಕೆ ತಿಳಿಸಬಯಸುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ಕರ್ನಾಟಕ ರಾಜ್ಯದಲ್ಲಿ 2006 ರಿಂದ 2011 ರವರೆಗೆ ಭಾರಿ ಪ್ರಮಾಣದಲ್ಲಿ ಅಕ್ರಮ ಗಣಿಗಾರಿಕೆ ನಡೆದಿದ್ದವು. ಈ ಅಕ್ರಮದಲ್ಲಿ ಅಧಿಕಾರಸ್ಥ ರಾಜಕಾರಣಿಗಳು, ವ್ಯಾಪಾರಸ್ಥರು, ಅಧಿಕಾರಿಗಳು ಹಾಗೂ ಇನ್ನಿತರರು ಶಾಮೀಲಾಗಿ ರಾಜ್ಯದ ಸಂಪತ್ತನ್ನು ಲೂಟಿ ಮಾಡಿದ್ದರು ಎಂಬುದು ದೇಶದ ಮುಂದೆ ಜಗಜ್ಜಾಹೀರಾಗಿರುವ ಸಂಗತಿ. ಈ ಅಕ್ರಮಗಳನ್ನು ಲೋಕಾಯುಕ್ತ ಸಂಸ್ಥೆಯು ಗಂಭೀರವಾಗಿ ಪರಿಗಣಿಸಿ ತನಿಖೆ ಮಾಡಿ ವರದಿ ನೀಡಿತ್ತು.

​2013 ರಿಂದ 2018ರ ನಮ್ಮ ಸರ್ಕಾರದ ಅವಧಿಯಲ್ಲಿ ಸಚಿವ ಸಂಪುಟದ ಉಪ ಸಮಿತಿ ರಚಿಸಲಾಗಿತ್ತು. ಉಪ ಸಮಿತಿಯು ಗಣಿ ಅಕ್ರಮಗಳಿಂದ ರಾಜ್ಯದ ಬೊಕ್ಕಸಕ್ಕೆ ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ ಎಂದು ಅಂದಾಜಿಸಿ ದಿನಾಂಕ: 16.10.2015 ರಂದು ನಡೆದ ಉಪ ಸಮಿತಿ ಸಭೆಯಲ್ಲಿ ಕೆಲವು ಶಿಫಾರಸ್ಸುಗಳನ್ನು ಮಾಡಿದೆ.

ಆ ಸಂದರ್ಭದಲ್ಲಿ, ಅಕ್ರಮ ಗಣಿಗಾರಿಕೆ ಕುರಿತು ನಮ್ಮ ಸರ್ಕಾರವು ಹಲವು ಕ್ರಮಗಳನ್ನು ಕೈಗೊಂಡಿತ್ತು. ಆದರೆ ಸರ್ಕಾರ ಬದಲಾದ ನಂತರ ಅಕ್ರಮ ಗಣಿಗಾರಿಕೆಯಿಂದ ಉಂಟಾದ ವಸೂಲಾತಿ ಇನ್ನಿತರೆ ಕ್ರಮಗಳಿಗೆ ಹಿನ್ನಡೆಯಾದವು. ಸಾರ್ವಜನಿಕ ಸಂಪತ್ತಿನ ಲೂಟಿಯ ಬಗ್ಗೆ ಆಗಬೇಕಾದಷ್ಟು ಕ್ರಮಗಳು ಆಗಲಿಲ್ಲ ಎಂಬುದನ್ನು ಗಮನಿಸಿದ ಪ್ರಸ್ತುತ ನಮ್ಮ ಸರ್ಕಾರವು ದಿನಾಂಕ: 05.07.2025 ರಲ್ಲಿ ಅಧಿಕೃತ ಜ್ಞಾಪನ ಸಂಖ್ಯೆ: ಸಸಂಶಾ 03 ಸಿಎಸ್ಸಿ 2025 ರಲ್ಲಿ ಹೆಚ್.ಕೆ. ಪಾಟೀಲ್, ಕಾನೂನು, ಸಂಸದೀಯ ವ್ಯವಹಾರಗಳು ಹಾಗೂ ಪ್ರವಾಸೋದ್ಯಮ ಸಚಿವರ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟದ ಉಪಸಮಿತಿಯನ್ನು ರಚಿಸಲಾಯಿತು.

.ಸದರಿ ಉಪ ಸಮಿತಿಯು ಕೂಲಂಕಷವಾಗಿ ಪರಿಶೀಲಿಸಿ, ದಾಖಲೆಯ ಅವಧಿಯಲ್ಲಿ ಸಭೆಗಳನ್ನು ಮಾಡಿ ದಿನಾಂಕ: 13.08.2025 ರಂದು ವರದಿ ನೀಡಿತು. ಸದರಿ ವರದಿಯನ್ನು ದಿನಾಂಕ: 19.08.2025 ರಂದು ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಅಂಗೀಕರಿಸಲಾಗಿದೆ ಎಂಬುದನ್ನು ಸದನದ ಗಮನಕ್ಕೆ ತರಬಯಸುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ಸಚಿವ ಸಂಪುಟ ಉಪ ಸಮಿತಿಯ ವರದಿಯಲ್ಲಿನ ಶಿಫಾರಸ್ಸಿನಂತೆ ಸರ್ಕಾರವು ಕೈಗೊಂಡ ತೀರ್ಮಾನಗಳು ಬಗ್ಗೆ ಸದನದಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿದ್ದಿಷ್ಟು…

ಉಪ ಸಮಿತಿಯ ಶಿಫಾರಸ್ಸಿನಂತೆ, ಅಕ್ರಮ ಗಣಿಗಾರಿಕೆಯಿಂದ ಸರ್ಕಾರಕ್ಕೆ ಉಂಟಾದ ಆರ್ಥಿಕ ನಷ್ಟವನ್ನು ವಸೂಲಿ ಮಾಡಲು, ಕರ್ನಾಟಕ ಅಕ್ರಮ ಗಣಿಗಾರಿಕೆ ಮತ್ತು ಅಪರಾಧದ ಉತ್ಪತ್ತಿಗಳಿಂದಾದ ಸ್ವತ್ತನ್ನು ವಶಪಡಿಸಿಕೊಳ್ಳುವುದಕ್ಕಾಗಿ ಮತ್ತು ಜಪ್ತಿಗಾಗಿ ವಸೂಲಾತಿ ಆಯುಕ್ತರನ್ನು (Recovery Commissioner) ನೇಮಿಸಲು ರೂಪಿಸಲಾದ ಹೊಸ ಕರಡು ಮಸೂದೆಯನ್ನು ಸಚಿವ ಸಂಪುಟವು ಅಂಗೀಕರಿಸಿದೆ.

ಲೋಕಾಯುಕ್ತರ ವರದಿಯ ಪ್ರಕಾರ, ಕ್ರಮವಾಗಿ ರಫ್ತಾಗಿರುವ 2.98 ಕೋಟಿ ಮೆಟ್ರಿಕ್ ಟನ್ ಅದಿರಿನ ಮೌಲ್ಯವು ರೂ. 12,228 ಕೋಟಿ ಎಂದು ಅಂದಾಜಿಸಲಾಗಿದೆ. ಅದರಂತೆ, ಸರಾಸರಿ ಬೆಲೆ ಪ್ರತಿ ಟನ್‌ಗೆ ರೂ.4,103 ಆಗಿರುತ್ತದೆ. ಅಕ್ರಮವಾಗಿ ರಫ್ತಾಗಿರುವ ಉಳಿದ 16.09 ಕೋಟಿ ಮೆಟ್ರಿಕ್ ಟನ್ ಅದಿರಿಗೆ ಲೋಕಾಯುಕ್ತ ವರದಿಯಲ್ಲಿ ಅಂದಾಜಿಸಿದಂತೆ,  ಒಟ್ಟು ರೂ.66,017 ಕೋಟಿ ರೂ. ಸರ್ಕಾರಕ್ಕೆ ನಷ್ಟ ಆಗಲಿದೆ. ಒಟ್ಟಾರೆಯಾಗಿ, 19.07 ಮೆಟ್ರಿಕ್ ಟನ್ ಅಕ್ರಮವಾಗಿ ರಫ್ತಾಗಿರುವ ಅದಿರಿನಿಂದ ಸರ್ಕಾರಕ್ಕೆ ರೂ.78,245 ಕೋಟಿ ರೂ. ನಷ್ಟವಾಗಿರುವುದಾಗಿ ಅಂದಾಜಿಸಲಾಗಿದೆ.

ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆ ಕುರಿತು ಎಸ್ ಐಟಿ ತಂಡ ಅಥವಾ ಇನ್ನಿತರೆ ತನಿಖಾ ಸಂಸ್ಥೆಗಳಿಂದ ದಾಖಲಿಸುವ ಪ್ರಕರಣಗಳ ವಿಚಾರಣೆಗೆ ತ್ವರಿತ ನ್ಯಾಯಾಲಯಗಳನ್ನು ((Fast Track Court) ಸ್ಥಾಪಿಸಲು ತೀರ್ಮಾನಿಸಲಾಗಿದೆ.

ವಿಶೇಷ ತನಿಖಾ ತಂಡವು ಮಾನ್ಯ ನ್ಯಾಯಾಲಯಕ್ಕೆ 29 ಪ್ರಕರಣಗಳಲ್ಲಿ ʼಬಿʼ ರಿಪೋರ್ಟ್ ಸಲ್ಲಿಸಿರುವುದನ್ನು ಸಚಿವ ಸಂಪುಟದ ಉಪ ಸಮಿತಿಯು ಪರಿಶೀಲಿಸಿದೆ. ಹಲವು ಪ್ರಕರಣಗಳಲ್ಲಿ ʼಬಿʼ ರಿಪೋರ್ಟ್ನಲ್ಲಿ ದಾಖಲಿಸಿದ ಕಾರಣಗಳು ಮೇಲ್ನೋಟಕ್ಕೆ ಸಮಂಜಸವಾಗಿರುವುದಿಲ್ಲವೆಂದು ಗಮನಿಸಿ, ಈ 29 ಪ್ರಕರಣಗಳಲ್ಲಿನ ʼಬಿʼ ರಿಪೋರ್ಟ್ ಅನ್ನು ಮರುಪರಿಶೀಲಿಸಲು ಸಚಿವ ಸಂಪುಟದ ಉಪ ಸಮಿತಿಯ ಶಿಫಾರಸ್ಸನ್ನು ಒಪ್ಪಿದೆ.

ವಿಶೇಷ ತನಿಖಾ ತಂಡವು ಮಾನ್ಯ ನ್ಯಾಯಾಲಯಕ್ಕೆ 8 ಪ್ರಕರಣಗಳಲ್ಲಿ   ʼಬಿʼ ರಿಪೋರ್ಟನ್ನು ಸಲ್ಲಿಸಿದೆ. ಇನ್ನೂ ನ್ಯಾಯಾಲಯದ ಅನುಮತಿ ದೊರಕದಿರುವ ಈ  8 ಪ್ರಕರಣಗಳ ʼಬಿʼ ರಿಪೋರ್ಟನ್ನು ನ್ಯಾಯಾಲಯದಿಂದ ಹಿಂಪಡೆಯಲು ತೀರ್ಮಾನಿಸಲಾಗಿದೆ.

.ಅರಣ್ಯ ಇಲಾಖೆಗೆ ಉಂಟಾದ ನಷ್ಟವನ್ನು ಅಂದಾಜಿಸಲು, ಅರಣ್ಯ ಇಲಾಖೆಯಲ್ಲಿ ಪ್ರಕರಣವಾರು ತನಿಖಾ ತಂಡವನ್ನು ರಚಿಸಲಾಗುವುದು.

ಸಚಿವ ಸಂಪುಟ ಉಪಸಮಿತಿಯ ಶಿಫಾರಸ್ಸಿನಂತೆ, ಸಿ.ಬಿ.ಐ. ನಿಂದ 10 ವರ್ಷಗಳ ನಂತರವೂ ತನಿಖೆ ನಡೆಸದೆ ಇರುವಂತಹ ಪ್ರಕರಣಗಳ ತನಿಖೆಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಿ ಕ್ರಮ ತೆಗೆದುಕೊಳ್ಳುವಂತೆ ಅಥವಾ ವಿಶೇಷ ತನಿಖಾ ತಂಡದ (SIT) ಮೂಲಕ ತನಿಖೆಗೆ ಒಳಪಡಿಸಲು ಸಿಬಿಐಗೆ ವಹಿಸಲಾದ ಪ್ರಕರಣಗಳನ್ನು ವಾಪಸ್ಸು ಕಳುಹಿಸುವಂತೆ ಕೇಂದ್ರ ಸರ್ಕಾರವನ್ನು ಕೋರಲು ತೀರ್ಮಾನಿಸಲಾಗಿದೆ.

ಕಬ್ಬಿಣದ ಅದಿರಿನ ಅನಧಿಕೃತ ಗಣಿಗಾರಿಕೆಗೆ, ಸಾಗಾಣಿಕೆಗೆ ಸಂಬಂಧಿಸಿದಂತೆ ಸ್ಥಳೀಯ ಪೊಲೀಸ್ ಠಾಣೆಗಳಲ್ಲಿ ದಾಖಲಾದ ಎಫ್.ಐ.ಆರ್.ಗಳಲ್ಲಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿ, ತ್ವರಿತವಾಗಿ ಪ್ರಕರಣಗಳನ್ನು ಇತ್ಯರ್ಥಪಡಿಸಲು ಕ್ರಮವಹಿಸುವಂತೆ ಪೊಲೀಸ್ ಇಲಾಖೆಗೆ ನಿರ್ದೇಶನ ನೀಡಲಾಗಿದೆ.

CEC ಯು ʼಬಿʼ ವರ್ಗದ ಗಣಿ ಗುತ್ತಿಗೆಗಳಿಂದ ಹೊರತೆಗೆದ ಕಬ್ಬಿಣದ ಅದಿರಿನ ಪ್ರಮಾಣವನ್ನು ಅಂದಾಜಿಸುವ ಮಾನದಂಡಗಳ ಅನುಮೋದನೆಗಾಗಿ 2019 ರಲ್ಲಿ   ಸರ್ವೋಚ್ಛ ನ್ಯಾಯಾಲಯಕ್ಕೆ ಸಲ್ಲಿಸಿರುತ್ತದೆ. ವಿಷಯವು ಇತ್ಯರ್ಥಕ್ಕೆ ಬಾಕಿಯಿದ್ದು, ಮಾನ್ಯ ಸರ್ವೋಚ್ಛ ನ್ಯಾಯಾಲಯದಿಂದ ಸದರಿ ಮಾನದಂಡಗಳಿಗೆ ಶೀಘ್ರವಾಗಿ ಅನುಮೋದನೆಯನ್ನು ಪಡೆಯಲು ಸಂಬಂಧಿಸಿದ ಅಧಿಕಾರಿಗಳಿಗೆ ಅಗತ್ಯ ಕ್ರಮವಹಿಸುವಂತೆ ಸೂಚಿಸಲಾಗಿದೆ.

ನ್ಯಾಯಾಲಯಗಳಲ್ಲಿ (ಬೆಂಗಳೂರು ಹಾಗೂ ನವದೆಹಲಿ) ದಾಖಲಾಗುವ ಪ್ರಕರಣಗಳನ್ನು ಸಮರ್ಪಕವಾಗಿ ನಿರ್ವಹಿಸಲು ಗಣಿಗಾರಿಕೆ ವಿಷಯದಲ್ಲಿ ಪರಿಣಿತಿ ಹೊಂದಿರುವ ಕಾನೂನು ಅಧಿಕಾರಿಗಳ ತಂಡವನ್ನು ರೂಪಿಸಲು ತೀರ್ಮಾನಿಸಲಾಗಿದೆ.

ಅಕ್ರಮ ಗಣಿಗಾರಿಕೆಗೆ ಸಹಕರಿಸಿದ ಸರ್ಕಾರಿ ಅಧಿಕಾರಿಗಳು / ಸಿಬ್ಬಂದಿ ವರ್ಗ ಮತ್ತು ಮಧ್ಯವರ್ತಿಗಳು / ಖಾಸಗಿ ವ್ಯಕ್ತಿಗಳ ವಿರುದ್ಧ ಲೋಕಾಯುಕ್ತ ಶಿಫಾರಸ್ಸಿನಂತೆ ಸೂಕ್ತ   ಕ್ರಮ ಜರುಗಿಸಲಾಗುವುದು.

Key words: Illegal mining,  Decisions, government, Cabinet Sub-Committee Report