ಬೆಂಗಳೂರು,ಆಗಸ್ಟ್,22,2025 (www.justkannada.in): ಶಿಕ್ಷಣ ಇಲಾಖೆಯಲ್ಲಿ ಶಿಕ್ಷಕರು ವಿದ್ಯಾರ್ಥಿಗಳಿಗೆ ಬೋಧನೆ ಮಾಡುವುದನ್ನು ಹೊರತುಪಡಿಸಿ ಬೇರೆ ಕಾರ್ಯಕ್ಕೆ ನಿಯೋಜಿಸಬಾರದೆಂದು ಸುಪ್ರೀಂ ಕೋರ್ಟ್ ಆದೇಶವೇ ಇದೆ. ಆದರೆ ಇದೀಗ ಬೋಧಕೇತರ ಹುದ್ದೆಗೆ ಪ್ರೌಢಶಾಲಾ ಶಿಕ್ಷಕರನ್ನ ನೇಮಕ ಮಾಡಿ ಶಿಕ್ಷಣ ಇಲಾಖೆ ಹೊರಡಿಸಿರುವ ಆದೇಶ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಇತ್ತೀಚಿಗೆ ಇಲಾಖೆಗೆ ಪ್ರಧಾನ ಕಾರ್ಯದರ್ಶಿಯಾಗಿ ಬಂದಿರುವ ರಶ್ಮಿ ಮಹೇಶ್ ಅವರು ಶಿಕ್ಷಕರನ್ನು ಬೋಧನೆಯಲ್ಲಿ ತೊಡಗಿಸುವಲ್ಲಿ ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ಆದರೆ ದಿನಾಂಕ 20/08/2025 ರಂದು ಶಿಕ್ಷಣ ಇಲಾಖೆಯಿಂದ ಹೊರಡಿಸಿರುವ ವರ್ಗಾವಣೆ ಆದೇಶ ಸುಪ್ರೀಂ ಕೋರ್ಟ್ ಆದೇಶವನ್ನೂ ಪ್ರಧಾನ ಕಾರ್ಯದರ್ಶಿ ರಶ್ಮಿ ಮಹೇಶ್ ಅವರ ಆಶಯವನ್ನೂ ಗಾಳಿಗೆ ತೂರಿದಂತೆ ಕಾಣುತ್ತಿದೆ.
ಜಿಲ್ಲೆಗಳ ಡಯಟ್ ಹಾಗೂ ಸಿಟಿಇ ಗಳಲ್ಲಿರುವ ತಂತ್ರಜ್ಞರು, ತಾಂತ್ರಿಕ ಸಹಾಯಕರು, ಕಾರ್ಯಕ್ರಮ ಸಹಾಯಕರು , ಅಂಕಿ ಸಂಖ್ಯಾ ಸಹಾಯಕರು, ಮುಂತಾದ ಬೋಧಕೇತರ ಹುದ್ದೆಗಳಿಗೆ ರಾಜ್ಯದ ವಿವಿಧ ಪ್ರೌಢಶಾಲಾ ಸಹ ಶಿಕ್ಷಕರನ್ನು ವರ್ಗಾವಣೆ ಮಾಡಿಲಾಗಿದ್ದು, ಶೈಕ್ಷಣಿಕ ವರ್ಷದ ಮಧ್ಯದಲ್ಲಿ ಈ ವರ್ಗಾವಣೆಗಳು ಪ್ರಸ್ತುತ SSLC ವಿದ್ಯಾರ್ಥಿಗಳು ಅರ್ಧ ವಾರ್ಷಿಕ ಪರೀಕ್ಷೆಗಳು ಸಮೀಪಿಸುತ್ತಿರುವ ಸಂದರ್ಭದಲ್ಲಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಾರಕವಲ್ಲವೇ? ಈ ಬಗ್ಗೆ ಇಲಾಖೆಯ ಮಂತ್ರಿಗಳು , ಪ್ರಧಾನ ಕಾರ್ಯದರ್ಶಿಗಳು ಗಮನಹರಿಸುವರೇ? ಎಂದು ಕಾದು ನೋಡಬೇಕಿದೆ.
Key words: High school, teachers, non-teaching, positions