ಕಾಲ್ತುಳಿತದಲ್ಲಿ 11 ಜನ ಸಾವು ಪ್ರಕರಣ: ವಿಷಾದ ವ್ಯಕ್ತಪಡಿಸಿ ಬಿಜೆಪಿ ಆರೋಪಕ್ಕೆ ತಿರುಗೇಟು ಕೊಟ್ಟ ಸಿಎಂ ಸಿದ್ದರಾಮಯ್ಯ

ಬೆಂಗಳೂರು, ಆಗಸ್ಟ್,​ 22,2025 (www.justkannada.in):  ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಐಪಿಎಲ್ ವಿಜಯೋತ್ಸವದ ಸಂದರ್ಭದಲ್ಲಿ ಕಾಲ್ತುಳಿತ 11 ಮಂದಿ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ವಿಷಾದ ವ್ಯಕ್ತಪಡಿಸಿ ಬಿಜೆಪಿ ಆರೋಪಕ್ಕೆ ತಿರುಗೇಟು ನೀಡಿದರು.

ಈ ಕುರಿತು ವಿಧಾನಸಭೆಯಲ್ಲಿ ಚರ್ಚೆ  ನಡೆದಿದ್ದು ಈ ವೇಳೆ ದುರಂತಕ್ಕೆ ಸರ್ಕಾರವೇ ನೇರ ಹೊಣೆ, ಸಿಎಂ ಸಿದ್ದರಾಮಯ್ಯ ಘಟನೆ ಬಗ್ಗೆ ಕ್ಷಮೆಯಾಚಿಸಬೇಕು ಎಂದು ವಿಪಕ್ಷ ನಾಯಕ ಆರ್.ಅಶೋಕ್ ಆಗ್ರಹಿಸಿದರು.

ಸದನದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ,  ಕಾಲ್ತುಳಿತ ದುರಂತದಲ್ಲಿ 11 ಆರ್ ಸಿಬಿ ಅಭಿಮಾನಿಗಳು ಮೃತಪಟ್ಟಿದ್ದಾರೆ.  ಆದರೆ ಸೂಕ್ತ ದಾಖಲೆ ಇಟ್ಟುಕೊಂಡು ಮಾತಾಡಬೇಕು. ಪ್ರಕರಣ ಬಗ್ಗೆ ಗೃಹ ಸಚಿವರು ಸೂಕ್ತ ಉತ್ತರ ನೀಡಿದ್ದಾರೆ . ದುರಂತದ ಬಗ್ಗೆ ನನಗೆ ಈಗಲೂ ದುಃಖವಿದೆ ಮಕ್ಕಳನ್ನು ಕಳೆದುಕೊಂಡ ತಂದೆ ತಾಯಿಯರಿಗೆ ದುಃಖವಿದೆ. ಅಂದು ಸಂಜೆ 5.3 0ರವರೆಗೂ ನನಗೆ ಕಾಲ್ತುಳಿತದ ವಿಚಾರ ಗೊತ್ತಾಗಲಿಲ್ಲ. ಆ ಸಮಯದಲ್ಲಿ ದೋಸೆ ತಿನ್ನಲು ಹೋಗಿದ್ರು ಅಂತಾರೆ ಜನಾರ್ದನ್ ಹೋಟೆಲ್ ಗೆ ದೋಸೆ ತಿನ್ನಲು ಹೋಗಿದ್ರು  ಅಂತಾರೆ ಅದು ನಿಜ ಸುಳ್ಳಲ್ಲ ನನ್ನ ಮೊಮ್ಮಗ ಲಂಡನ್ ನಿಂದ ಬಂದಿದ್ದ.  ಅವನು ದೋಸೆ ತಿನ್ನಬೇಕು ಅಂದಾಗ ಕರೆದುಕೊಂಡು ಹೋಗಿದ್ದೆ . ಆ ಸಂದರ್ಭದಲ್ಲಿ ನನಗೆ ಕಾಲ್ತುಳಿತದಿಂದ ಜನ ಮೃತಪಟ್ಟಿರುವುದು ಗೊತ್ತಿರಲಿಲ್ಲ. ಕಾಲ್ತುಳಿತ ಸಂಭವಿಸಿದೆ ಎಂಬ ಸುದ್ದಿ ನೋಡಿದ ಕೂಡಲೇ ಅಂದಿನ ಪೊಲೀಸ್ ಆಯುಕ್ತ ಬಿ ದಯಾನಂದ ಅವರಿಗೆ ಕರೆ ಮಾಡಿ ಮಾತನಾಡಿದ್ದೆ. ಒಂದು ಸಾವು ಸಂಭವಿಸಿದೆ ಎಂದು ಹೇಳಿದ್ದರು. ಆದರೆ ಅಷ್ಟರಲ್ಲಿ 11 ಮಂದಿ ಮೃತಪಟ್ಟಿದ್ದರು ಎಂದು ಹೇಳಿದರು.

ಇದಾದ ಬಳಿಕ ನಾನು ಆಸ್ಪತ್ರೆಗೆ ಭೇಟಿ ನೀಡಿದ್ದೆ. ಅಮಾಯಕರ ಶವಗಳನ್ನು ನೋಡಿ ದುಃಖ ಆಗಿತ್ತು. ಇಂಥ ಘಟನೆ ನಡೆಯಬಾರದಿತ್ತು. ಗುಜರಾತ್​​ನಲ್ಲಿ ಏರ್ ಇಂಡಿಯಾ ವಿಮಾನ ಅಪಘಾತ ಸಂಭವಿಸಿದಾಗ ಎನ್‌ಡಿಎ ಅಥವಾ ಬಿಜೆಪಿಯ ಯಾರಾದರೂ ರಾಜೀನಾಮೆ ನೀಡಿದ್ದಾರೆಯೇ? ಅಲ್ಲಿ ಜನ ಸತ್ತಿಲ್ಲವೇ? ಹಾಗಾದರೆ, ಈ ಕಾಲ್ತುಳಿತದ ಸಂದರ್ಭದಲ್ಲಿ ಬಿಜೆಪಿ ನಮ್ಮ ರಾಜೀನಾಮೆಯನ್ನು ಏಕೆ ಕೇಳುತ್ತಿದೆ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಇನ್ನು ಇಷ್ಟು ದೊಡ್ಡ ಘಟನೆಯಾದರೂ ಯಾರೂ ಕ್ಷಮಾಪಣೆ ಕೇಳಿಲ್ಲ ಎಂದು ಆರ್ ಅಶೋಕ್ ಆಕ್ರೋಶ ವ್ಯಕ್ತಪಡಿಸಿದರು.  ಸಿಎಂ ಕ್ಷಮೆಯಾಚನೆಗೆ ಒತ್ತಾಯಿಸಿ ಬಿಜೆಪಿ, ಜೆಡಿಎಸ್ ಸದಸ್ಯರು​ ಸಭಾತ್ಯಾಗ ಮಾಡಿದರು.

Key words: 11 people, died, stampede, CM Siddaramaiah