SIT ದಿಕ್ಕು ತಪ್ಪಿಸುವ ಕೆಲಸ: ಪಾರದರ್ಶಕತೆ ತನಿಖೆಗೆ ಬಿಡಬೇಕು- ಒಡನಾಡಿ ಮುಖ್ಯಸ್ಥ ಸ್ಟಾನ್ಲಿ ಆಗ್ರಹ

ಮೈಸೂರು,ಆಗಸ್ಟ್,22,2025 (www.justkannada.in): ಧರ್ಮಸ್ಥಳ ಪ್ರಕರಣದಲ್ಲಿ ಎಸ್ ಐಟಿಯ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಸ್ ಐಟಿ ತನಿಖೆ ಪಾರದರ್ಶಕತೆಯಿಂದ ನಡೆಯಲು ಬಿಡಬೇಕು ಎಂದು ಮೈಸೂರಿನಲ್ಲಿ ಜನಪರ ಸಂಘಟನೆಗಳ ವೇದಿಕೆ ಸದಸ್ಯರು ಆಗ್ರಹಿಸಿದ್ದಾರೆ.

ಇಂದು ಈ ಕುರಿತು ಮಾತನಾಡಿದ ಒಡನಾಡಿ ಸಂಸ್ಥೆಯ ಪರಶುರಾಮ್, ಸ್ಟಾನ್ಲಿ ಅವರು, ಎಸ್.ಐ.ಟಿ ಯಾವುದೋ ಬೀದಿ ನಾಯಿ ಅಲ್ಲ. ರಣಬೇಟೆ ಆಡಲು ಬಂದಿರುವ ಬೇಟೆಗಾರ. ಕೆಲವು ರಾಜಕಾರಣಿಗಳು, ಮಾಧ್ಯಮಗಳು, ಯೂಟ್ಯೂಬ್ ಗಳು ಸೇರಿ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಅದು ಖಂಡಿತ ಫಲ ಕೊಡುವುದಿಲ್ಲ ಎಂದರು.

ಮಾಸ್ಕ್ ಮ್ಯಾನ್ ಯಾರೆಂದು ಬಹಿರಂಗ ಪಡಿಸುವುದು ಅಪರಾಧ. ಆತನಿಗೆ ಜೀವ ಭಯವಿದೆ ಅಂತ ಆತನೇ ಹೇಳಿ ರಕ್ಷಣೆ ಪಡೆದುಕೊಂಡಿದ್ದಾನೆ. ಅಂತಹದರಲ್ಲಿ ಆತನ ಹೆಸರು ಊರು ಆತನ ಕುಟುಂಬದವರನ್ನು ಮುನ್ನಲೆಗೆ ತರುವುದು ಸರಿಯಲ್ಲ. ಅಂತವರಿಗೆ ಕಾನೂನಿನಲ್ಲಿ ಕಠಿಣ ಶಿಕ್ಷೆ ಇದೆ. ಇದನ್ನರಿತು ನಾಗರಿಕ ಸಮಾಜ ಸರಿಯಾಗಿ ವರ್ತಿಸಬೇಕು ಎಂದರು.

ಧರ್ಮಸ್ಥಳದ ಬಗ್ಗೆ ಎಲ್ಲರಿಗೂ ಗೌರವವಿದೆ. ಆದರೆ ಅಲ್ಲಿ ನಡೆದಿರುವ ಅಸಹಜ ಸಾವು, ಅನಾಥ ಶವಗಳ ಬಗ್ಗೆ ತನಿಖೆ ನಡೆಯಲಿ. ಸತ್ಯಾತ್ಯತೆ ಹೊರ ಬರಲಿ ಅನ್ನೋದು ಎಲ್ಲರ ಆಶಯ. ಹೋರಾಟಗಾರರನ್ನು ಬಂಧಿಸುವಂತ ಪ್ರಕ್ರಿಯೆ ನಡೆಯುತ್ತಿದೆ. ಸತ್ಯಕ್ಕಾಗಿ ನಾವು ಜೈಲಿಗೆ ಹೋಗಲು ಸಿದ್ದ. ಎಸ್ ಐಟಿ ತನಿಖೆ ವರದಿ ಬರುವವರೆಗೂ ಎಲ್ಲರೂ ಕಾಯಬೇಕು. ಅದನ್ನು ಬಿಟ್ಟು ನಾವೇ ಜಡ್ಜ್ ಗಳಂತೆ ಮಾತನಾಡಿ ಯಾರನ್ನು ಎತ್ತಿ ಕಟ್ಟುವ ಕೆಲಸ ಮಾಡಬಾರದು ಎಂದು ಒಡನಾಡಿ ಪರಶು, ಸ್ಟಾನ್ಲಿ ಹೇಳಿದರು.

Key words: Dharmasthala, SIT, misleading, work, investigation, Mysore, odanadi