ಹಿಂದೂ ಸಂಘಟನೆ ಮುಖಂಡ ಮಹೇಶ್ ತಿಮರೋಡಿ ಪೊಲೀಸರ ವಶಕ್ಕೆ

ದಕ್ಷಿಣ ಕನ್ನಡ,ಆಗಸ್ಟ್,21,2025 (www.justkannada.in):  ಆರ್ ಎಸ್ ಎಸ್ ಮುಖಂಡ ಬಿಎಲ್ ಸಂತೋಷ್ ವಿರುದ್ದ ಅವಹೇಳನಕಾರಿ ಹೇಳಿಕೆ ಆರೋಪದ ಮೇಲೆ ಹಿಂದೂ ಸಂಘಟನೆ ಮುಖಂಡ ಮಹೇಶ್ ತಿಮರೋಡಿ ಅವರನ್ನ ಬ್ರಹ್ಮಾವರ ಠಾಣಾ  ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬಿಎಲ್ ಸಂತೋಷ್ ಅವರನ್ನ ಫೇಸ್ ಬುಕ್ ನಲ್ಲಿ ತೇಜೋವಧೆ ಮಾಡಿದ ಆರೋಪದ ಮೇಲೆ ಬ್ರಹ್ಮಾವರ ಪೊಲೀಸ್ ಠಾಣೆಗೆ ಬಿಜೆಪಿ ಕಾರ್ಯಕರ್ತರೊಬ್ಬರು ದೂರು ನೀಡಿದ್ದರು. ಈ ಕುರಿತು  ಮಹೇಶ್ ತಿಮರೋಡಿ ವಿರುದ್ದ ಪ್ರಕರಣ ದಾಖಲಾಗಿತ್ತು. ವಿಚಾರಣೆಗೆ ಹಾಜರಾಗುವಂತೆ ಮಹೇಶ್ ತಿಮರೋಡಿ ಅವರಿಗೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದರು.

ಆದರೆ ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ಇಂದು ಉಜಿರೆಯಲ್ಲಿರುವ ಮಹೇಶ್ ತಿಮರೋಡಿ ನಿವಾಸಕ್ಕೆ ಆಗಮಿಸಿದ ಪೊಲೀಸರು ಅವರನ್ನ ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Key words:  Hindu organization, leader, Mahesh Timarodi , police, custody