ವ್ಹೀಲಿಂಗ್ ಪ್ರೇರೆಪಿಸುವ ಜಾಹೀರಾತು: ಕ್ರಮಕ್ಕೆ ಆಗ್ರಹ.

ಮೈಸೂರು,ಆಗಸ್ಟ್,21,2025 (www.justkannada.in): ವ್ಹೀಲಿಂಗ್ ಮಾಡುವುದು ಹೇಗೆ ಶಿಕ್ಷಾರ್ಹ ಅಪರಾಧವೋ ಅಂತೆಯೇ ಇಂತಹ ಅಪರಾಧ ಮಾಡಲು ಪ್ರೇರೇಪಿಸುವುದೂ ಸಹ ಭಾರತೀಯ ನ್ಯಾಯ ಸಂಹಿತೆ, 2023 ಸೆಕ್ಷನ್ 45 ರ ಪ್ರಕಾರ ಶಿಕ್ಷಾರ್ಹ ಅಪರಾಧವಾಗಿದೆ.

ಯಾವುದೇ ವಾಹನ ಸವಾರ, ಚಾಲಕ ಮಾನವ ಜೀವಕ್ಕೆ ಅಪಾಯ ಉಂಟು ಮಾಡುವ ರೀತಿಯಲ್ಲಿ ವ್ಹೀಲಿಂಗ್ ಮಾಡುತ್ತಾ ವಾಹನ ಸವಾರಿ, ಚಾಲನೆ ಮಾಡುವುದು ಭಾರತೀಯ ನ್ಯಾಯ ಸಂಹಿತೆ 2023 ಸೆಕ್ಷನ್ 125 ರ ಅನ್ವಯ ಶಿಕ್ಷಾರ್ಹ ಅಪರಾಧ.

ಈ ರೀತಿ ವ್ಹೀಲಿಂಗ್ ಮಾಡುವ ಸಂದರ್ಭದಲ್ಲಿ ಅಪಘಾತ ಸಂಭವಿಸದಿದ್ದರೂ/ ಯಾವುದೇ ಸಾರ್ವಜನಿಕರಿಗೆ ಗಾಯ ಆಗದಿದ್ದರೂ ಸಹ ನ್ಯಾಯಾಲಯವು ಅಂತಹ ಸವಾರ, ಚಾಲಕನಿಗೆ 3 ತಿಂಗಳ ಸೆರೆವಾಸ ಹಾಗೂ 2,500 ರೂ ದಂಡ ವಿಧಿಸುತ್ತದೆ. ವ್ಹೀಲಿಂಗ್ ಮಾಡಿ ಅಪಘಾತ ಸಂಭವಿಸಿ ಯಾವುದೇ ವ್ಯಕ್ತಿಗೆ  ಗಾಯ ಉಂಟಾದರೆ ಅಂತಹ ಸವಾರ, ಚಾಲಕನಿಗೆ ನ್ಯಾಯಾಲಯವು 6 ತಿಂಗಳ ಸೆರೆವಾಸ ಹಾಗೂ 5000 ರೂ. ದಂಡ ವಿಧಿಸುತ್ತದೆ. ವ್ಹೀಲಿಂಗ್ ಮಾಡಿ ಅಪಘಾತ ಸಂಭವಿಸಿ ಯಾವುದೇ ವ್ಯಕ್ತಿಗೆ ಗಂಭೀರ ಸ್ವರೂಪದ ಗಾಯ ಉಂಟಾದರೆ ಅಂತಹ ಸವಾರ, ಚಾಲಕನಿಗೆ ನ್ಯಾಯಾಲಯವು 3 ವರ್ಷ ಸೆರೆವಾಸ ಹಾಗೂ ₹10,000  ದಂಡ ವಿಧಿಸುತ್ತದೆ.

ವ್ಹೀಲಿಂಗ್ ಮಾಡುವುದು ಸಂಜ್ಞೇಯ ಅಪರಾಧ(cognizable offence).ವ್ಹೀಲಿಂಗ್ ಮಾಡಿದ ವಾಹನ ಸವಾರ/ಚಾಲಕನನ್ನು ಪೊಲೀಸರು ಯಾವುದೇ ವಾರಂಟ್ ಇಲ್ಲದೇ ಬಂಧಿಸಬಹುದು. ವ್ಹೀಲಿಂಗ್ ಮಾಡಿದ ಪ್ರಕರಣದಲ್ಲಿ ಅಂತಹ ವಾಹನಗಳನ್ನು ಪೊಲೀಸರು ತಕ್ಷಣ ಜಪ್ತಿ ಮಾಡಬೇಕಾಗುತ್ತದೆ.

ವ್ಹೀಲಿಂಗ್ ಮಾಡುವುದು ಇತ್ತೀಚೆಗೆ ಟ್ರೆಂಡಿಂಗ್ ಆಗಿದೆ. ಇದರಿಂದ ವ್ಹೀಲಿಂಗ್ ಮಾಡುವ ಸವಾರ ಹಾಗೂ ಸಾರ್ವಜನಿಕರ ಜೀವಕ್ಕೂ ಅಪಾಯ ಉಂಟಾಗುತ್ತದೆ ಎಂದು ಕರ್ನಾಟಕ ಉಚ್ಚ ನ್ಯಾಯಾಲಯವೇ ಕಳವಳ ವ್ಯಕ್ತಪಡಿಸಿದೆ. ವ್ಹೀಲಿಂಗ್ ಮಾಡುವುದು ಭಂಡತನದ ಪ್ರದರ್ಶನ ಮಾತ್ರವಲ್ಲ ಇದು ಮಾನವ ಜೀವಕ್ಕೆ ಎರವಾಗುವ ಕೃತ್ಯ ಎಂದು ಹೈಕೋರ್ಟ್ ಎಚ್ಚರಿಸಿದೆ. ಈ ವಿಚಾರವಾಗಿ ಸರಕಾರವು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ನಿರ್ದೇಶನವನ್ನೂ ನೀಡಿದೆ.

ಈ ವಿಚಾರವಾಗಿ ಪೊಲೀಸರು ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕೆಂದೂ ಕೋರ್ಟ್ ಸಲಹೆ ನೀಡಿದೆ. ಪೊಲೀಸರೂ ಸಹ ವ್ಹೀಲಿಂಗ್ ಕೃತ್ಯವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ವ್ಹೀಲಿಂಗ್ ಮಾಡುವುದು ಹೇಗೆ ಶಿಕ್ಷಾರ್ಹ ಅಪರಾಧವೋ ಅಂತೆಯೇ ಇಂತಹ ಅಪರಾಧ ಮಾಡಲು ಪ್ರೇರೇಪಿಸುವುದೂ ಸಹ ಭಾರತೀಯ ನ್ಯಾಯ ಸಂಹಿತೆ,2023 ಸೆಕ್ಷನ್ 45 ರ ಪ್ರಕಾರ ಶಿಕ್ಷಾರ್ಹ ಅಪರಾಧ.

ಯಾವುದೇ ವ್ಯಕ್ತಿ,ಸಂಸ್ಥೆ ಅಥವಾ ಕಂಪನಿಗಳು ವ್ಹೀಲಿಂಗ್ ಮಾಡಲು ಪ್ರೇರೇಪಿಸಿದರೆ ಅದೂ ಕೂಡಾ ಶಿಕ್ಷಾರ್ಹ ಅಪರಾಧ. ಹತ್ತು ಅಥವಾ ಅದಕ್ಕಿಂತ ಹೆಚ್ಚು ಜನರನ್ನು ಯಾವುದೇ ಅಪರಾಧ ಮಾಡಲು ಪ್ರೇರೇಪಿಸುವುದು, ಪ್ರೋತ್ಸಾಹ ನೀಡುವುದು ಹಾಗೂ ದುಷ್ಪ್ರೇರಣೆ ನೀಡುವುದು ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 57 ರ ಪ್ರಕಾರ ಶಿಕ್ಷಾರ್ಹ ಅಪರಾಧ.ಈ ಅಪರಾಧ ಎಸಗಿದವರಿಗೆ ನ್ಯಾಯಾಲಯವು ಏಳು ವರ್ಷಗಳವರೆಗೆ ಸೆರೆವಾಸ ಶಿಕ್ಷೆಯ ಜೊತೆಗೆ ದಂಡವನ್ನೂ ವಿಧಿಸಬಹುದು.

ವೃತ್ತಪತ್ರಿಕೆಗಳ ಮುಖಪುಟದಲ್ಲಿ ಪ್ರಕಟವಾಗಿರುವ ದ್ವಿಚಕ್ರ ವಾಹನದ ಈ ಜಾಹೀರಾತಿನಲ್ಲಿ ವಾಹನ ಸವಾರ ವ್ಹೀಲಿಂಗ್ ಮಾಡುವ ಚಿತ್ರವನ್ನು ಪ್ರಕಟಿಸಿ ವ್ಹೀಲಿಂಗ್ ಮಾಡಲು ಪ್ರೇರೇಪಿಸುವ ಮತ್ತು ಪ್ರಚೋದಿಸುವ ಮೂಲಕ ಈ ವಾಹನದ ಕಂಪನಿಯೂ ಅಪರಾಧ ಎಸಗಿದೆ.

“ಜಗ ನೋಡುತ್ತೆ.ನೀನೂ ತೋರ್ಸು” ಎಂಬ ಘೋಷಣೆಯ ಮೂಲಕ ‘ನೀನೂ ವ್ಹೀಲಿಂಗ್ ಮಾಡು. ಅದನ್ನು ಜಗತ್ತು ನೋಡಲಿ” ಎಂದು ವಾಹನ ಸವಾರರನ್ನು  ವ್ಹೀಲಿಂಗ್ ಮಾಡಲು ಪ್ರಚೋದನೆ ನೀಡುವ ಜೊತೆಗೆ ದುಷ್ಪ್ರೇರಣೆಯನ್ನೂ ನೀಡುತ್ತಿದೆ. ವ್ಹೀಲಿಂಗ್ ಮಾಡಲು ಪ್ರೋತ್ಸಾಹವನ್ನೂ ನೀಡಿದೆ.

ಇದು ಭಾರತೀಯ ನ್ಯಾಯ ಸಂಹಿತೆ,2023 ಸೆಕ್ಷನ್ 57ರ ಪ್ರಕಾರ ಶಿಕ್ಷಾರ್ಹ ಅಪರಾಧ. ಇಂತಹ ಜಾಹೀರಾತನ್ನು ವೃತ್ತ ಪತ್ರಿಕೆಯ ಮುಖಪುಟದಲ್ಲಿಯೇ ಪ್ರಕಟಿಸಿದರೆ ಅದೂ ಸಹ ವ್ಹೀಲಿಂಗ್ ಮಾಡಲು ಪ್ರಚೋದನೆ ಹಾಗೂ ಪ್ರೋತ್ಸಾಹ ಹಾಗೂ ದುಷ್ಪ್ರೇರಣೆ ನೀಡುತ್ತದೆ.

ಈ ಕೂಡಲೇ ಕರ್ನಾಟಕ ಪೊಲೀಸರು ಎಚ್ಚೆತ್ತು ವ್ಹೀಲಿಂಗ್ ಮಾಡಲು ಪ್ರೇರೇಪಿಸುವ ಜಾಹೀರಾತು ನೀಡಿದ ಮತ್ತು ಆ ಜಾಹೀರಾತನ್ನು ಪ್ರಕಟಿಸಿದವರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ,2023 ಸೆಕ್ಷನ್ 57 ರ ಅನ್ವಯ ಪ್ರಕರಣ ದಾಖಲಿಸಿ ಅಪಾಯಕಾರಿ ವ್ಹೀಲಿಂಗ್ ಕೃತ್ಯಕ್ಕೆ ಬ್ರೇಕ್ ಹಾಕಬೇಕಾಗಿದೆ.

-ಪಿ.ಜೆ.ರಾಘವೇಂದ್ರ

 ನ್ಯಾಯವಾದಿ ಮೈಸೂರು

Key words: Advertisement, encourages, wheeling, Crime, action