ಮೈಸೂರು,ಆಗಸ್ಟ್,20,2025 (www.justkannada.in): ಮೈಸೂರಿನಲ್ಲಿ ಪರಿಸರ ಬಳಗದ ವತಿಯಿಂದ ಶಾಲಾ ವಿದ್ಯಾರ್ಥಿಗಳಿಗೆ ಮಣ್ಣಿನ ಗಣಪತಿ ಮೂರ್ತಿ ಮಾಡುವ ಕಾರ್ಯಾಗಾರವನ್ನು ಆಯೋಜನೆ ಮಾಡಲಾಗಿದೆ.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಪ್ರಾದೇಶಿಕ ಕಛೇರಿ – 1, ಮೈಸೂರು ನಗರ ಮತ್ತು ಎಚ್ ವಿ ರಾಜೀವ್ ಸ್ನೇಹ ಬಳಗ, ಮೈಸೂರು ಇವರ ಸಹಯೋಗದೊಂದಿಗೆ ಈ ವರ್ಷದ ಕಾರ್ಯಾಗಾರ ದಿನಾಂಕ 22-8-2025 ಮತ್ತು 23-8-2025 ರಂದು ಶ್ರೀ ಬಸವೇಶ್ವರ ಯೋಗ ಪಾರ್ಕ್, ಆಲನಹಳ್ಳಿ ಇಲ್ಲಿ ನಡೆಯಲಿದೆ. ಈ ಕಾರ್ಯಾಗಾರದಲ್ಲಿ ಜೆಎಸ್ಎಸ್ ಸಂಸ್ಥೆಯ ಶಾಲೆಗಳು, ಮಹಾವೀರ ಜೈನ್ ವಿದ್ಯಾಲಯ, ವಿವೇಕು ವಿದ್ಯಾಲಯ , ಈಶ್ವರ ವಿದ್ಯಾಲಯ ಮತ್ತು ಆಲನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸತ್ತಾರೆ. ಎರಡು ದಿನದ ಈ ಕಾರ್ಯಾಗಾರ ಬೆಳಿಗ್ಗೆ 9.30 ರಿಂದ ಸಂಜೆ 5.30 ರವರೆಗೆ ನಡೆಯಲಿದ್ದು, ನುರಿತ ಶಿಲ್ಪಿಗಳು ಮಕ್ಕಳು ಮಣ್ಣಿನಿಂದ ಗಣಪತಿ ಮಾಡುವುದನ್ನು ಕಲಿಸಿಕೊಡುತ್ತಾರೆ.
ಪಿಓಪಿ ಮತ್ತು ಬಣ್ಣದ ಗಣಪತಿ ಮೂರ್ತಿಗಳನ್ನು ಪೂಜಿಸಿ, ನಂತರ ಇವನ್ನು ಕೆರೆ ಕಟ್ಟೆ , ಹೊಳೆ ನದಿಗಳಲ್ಲಿ ವಿಸರ್ಜನೆ ಮಾಡುವುದು ಬಹಳ ಅಪಾಯಕಾರಿ. ಜಿಪ್ಸಮ್ ನಿಂದ ಮಾಡಿದ ಪಿಓಪಿಯಲ್ಲಿ ಕ್ಯಾಲ್ಸಿಯಂ ಸಲ್ಫೇಟ್ ಹೆಮಿಹೈಡ್ರೇಟ್ ಎಂಬ ರಾಸಾಯನಿಕ ವಸ್ತುವಿದ್ದು ಪಿಓಪಿ ಗಣಪತಿ ಮೂರ್ತಿಗಳು ನೀರಿನಲ್ಲಿ ಕರಗುವುದಿಲ್ಲ. ಇದರಿಂದ ಹಲವು ಸಮಸ್ಯೆಗಳು ಉಂಟಾಗುತ್ತವೆ. ಬಣ್ಣದ ಗಣಪತಿ ಮೂರ್ತಿಗಳಿಗೆ ಬಳಸುವ ಬಣ್ಣದಲ್ಲಿ ಸೀಸ, ಪಾದರಸ ಮತ್ತು ಕ್ಯಾಡ್ಮಿಯಂ ರಾಸಾಯನಿಕಗಳಿದ್ದು, ಇಂತಹ ಮೂರ್ತಿಗಳನ್ನು ಕೆರೆ ಕಟ್ಟೆ, ಹೊಳೆ ನದಿಗಳಲ್ಲಿ ವಿಸರ್ಜನೆ ಮಾಡುವುದರಿಂದ ನೀರು ವಿಷಮಯವಾಗುತ್ತದೆ. ಇದನ್ನು ಕುಡಿಯುವ ಜನ ಜಾನುವಾರುಗಳ ಆರೋಗ್ಯಕ್ಕೆ ಹಾನಿಯುಂಟಾಗುತ್ತದೆ. ಆದುದರಿಂದ ಮಣ್ಣು, ಗೋಧಿ, ಅಕ್ಕಿ ಹಿಟ್ಟು, ಅರಿಶಿನ ಅಥವಾ ಬೆಲ್ಲ ಮುಂತಾದ ನೈಸರ್ಗಿಕ ವಸ್ತುವಿನಿಂದ ಮಾಡಿದ ಗಣಪತಿ ಮೂರ್ತಿಗಳನ್ನು ಪೂಜಿಸಬೇಕು. ಸಾರ್ವಜನಿಕರು ಮುಖ್ಯವಾಗಿ ಗೃಹಿಣಿಯರು ಮತ್ತು ಮಕ್ಕಳಲ್ಲಿ ಇಂತಹ ಜಾಗೃತಿ ಮೂಡಿಸುವ ಸಲುವಾಗಿ ಈ ಕಾರ್ಯಾಗಾರ ಆಯೋಜಿಸಲಾಗಿದೆ ಎಂದು ಪರಿಸರ ಬಳಗದ ಸಂಸ್ಥಾಪಕ ಸದಸ್ಯ ಪರಶುರಾಮೇಗೌಡ ತಿಳಿಸಿದ್ದಾರೆ.
ಸಾರ್ವಜನಿಕರು ಈ ಕೆಳಗಿನ ನಂಬರ್ ನಲ್ಲಿ ನೋಂದಣಿ ಮಾಡಿಸಿ 10 ವರ್ಷಕ್ಕೆ ಮೇಲ್ಪಟ್ಟ ಮಕ್ಕಳನ್ನು ಕಾರ್ಯಾಗಾರಕ್ಕೆ ಕರೆದುಕೊಂಡು ಬರಬಹುದಾಗಿದೆ.
ಗಂಟಯ್ಯ : 9538732852
ಭಾಗ್ಯ ಶಂಕರ್ : 8867481635
Key words: Workshop, Ganpati idols, school children, Mysore