ರಾಜ್ಯದ ಮೊದಲ ‘ವಿದೇಶ ಅಧ್ಯಯನ ಎಕ್ಸ್‌ ಪೋ’ ಯಶಸ್ವಿ: 10,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗಿ

ಬೆಂಗಳೂರು, ಆಗಸ್ಟ್ , 18,2025 (www.justkannada.in):  ಕರ್ನಾಟಕ ವೃತ್ತಿಪರ ತರಬೇತಿ ಮತ್ತು ಕೌಶಲ್ಯ ಅಭಿವೃದ್ಧಿ ನಿಗಮ (ಕೆವಿಟಿಎಸ್‌ಡಿಸಿ) ಆಯೋಜಿಸಿದ್ದ ರಾಜ್ಯದ ಮೊದಲ ‘ವಿದೇಶ ಅಧ್ಯಯನ ಎಕ್ಸ್‌ಪೋ’ಗೆ ಅಭೂತಪೂರ್ವ ಸ್ಪಂದನೆ ದೊರೆತಿದ್ದು, 10,000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ಪೋಷಕರು ಭಾಗಿಯಾಗಿದ್ದರು.

65 ಪ್ರತಿಷ್ಠಿತ ವಿದೇಶಿ ವಿಶ್ವವಿದ್ಯಾಲಯಗಳಲ್ಲಿನ ಉನ್ನತ ಶಿಕ್ಷಣದ ಅವಕಾಶಗಳನ್ನು ತೆರದಿಟ್ಟಿದ್ದ ಎಕ್ಸ್‌ಪೋದಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರು ತಮ್ಮ ತಮ್ಮ ಆಸಕ್ತಿಯ ವಿಭಾಗಗಳಲ್ಲಿ ಇರುವ ಅವಕಾಶಗಳ ಬಗ್ಗೆ ಮಾಹಿತಿ ಪಡೆದರು.

ಭಾಗವಹಿಸಿದ್ದ ಎಲ್ಲರೂ ವಿದೇಶಿ ವಿ.ವಿಗಳಿಗೆ ದಾಖಲಾಗುತ್ತಾರೆ ಎಂಬ ಖಾತ್ರಿ ಇಲ್ಲದಿದ್ದರೂ, ಕನಿಷ್ಠ ಶೇ.50ರಷ್ಟು ಮಂದಿಯಾದರೂ ಉತ್ತಮ ಅವಕಾಶ ಗಿಟ್ಟಿಸಿಕೊಳ್ಳುತ್ತಾರೆ ಎಂದು ಅಭಿಪ್ರಾಯಪಟ್ಟಿರುವ ವಿಶ್ವವಿದ್ಯಾಲಯ ಪ್ರತಿನಿಧಿಗಳು,’ರಾಜ್ಯ ಸರ್ಕಾರದ ಈ ಉಪಕ್ರಮವು ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿ ಹೊಸ ಭರವಸೆ ಹುಟ್ಟುಹಾಕಿದೆ,’ ಎಂದಿದ್ದಾರೆ.

ಕರ್ನಾಟಕ ಸರ್ಕಾರದ ಕೌಶಲ್ಯ ಅಭಿವೃದ್ಧಿ ಇಲಾಖೆಯ ಅಡಿಯಲ್ಲಿ ನಡೆದ ಎಕ್ಸ್‌ಪೋದಲ್ಲಿ, ವಿದೇಶದಲ್ಲಿ ಅಧ್ಯಯನ ಮಾಡುವ ಕನಸು ಹೊತ್ತ ಸಾವಿರಾರು ವಿದ್ಯಾರ್ಥಿಗಳು ಬೆಳಗ್ಗೆ 9 ಗಂಟೆಯಿಂದಲೇ ಸಾಲುಗಟ್ಟಿ ನಿಂತಿದ್ದರು. ವಿಶ್ವವಿದ್ಯಾಲಯದ ಪ್ರತಿನಿಧಿಗಳ ಜತೆಗಿನ ಸಂವಾದದ ಹೊರತಾಗಿ, ಅನೇಕ ವಿದ್ಯಾರ್ಥಿಗಳು ಶಿಕ್ಷಣ ಸಾಲ ಸೌಲಭ್ಯಗಳನ್ನು ಬಗ್ಗೆ ಮಾಹಿತಿ ಪಡೆಯಲು ಉತ್ಸುರಾಗಿದ್ದರು.   ಉನ್ನತ ಶಿಕ್ಷಣದ ಆಕಾಂಕ್ಷಿಗಳಿಗಾಗಿ ಇರುವ ವಿಶೇಷ ಸಾಲ ಸೌಲಭ್ಯದ ಆಯ್ಕೆಗಳನ್ನು ಕರ್ನಾಟಕ ಬ್ಯಾಂಕ್ ಪ್ರತಿನಿಧಿಗಳು ವಿವರಿಸಿದರು.

ಹಲವಾರು ವಿಶ್ವವಿದ್ಯಾಲಯಗಳು ಎಕ್ಸ್‌ ಪೋದಲ್ಲೇ ಕೆವಿಟಿಎಸ್‌ಡಿಸಿ ವಿದ್ಯಾರ್ಥಿಗಳಿಗೆ ವಿಶೇಷ ವಿದ್ಯಾರ್ಥಿವೇತನವನ್ನು ಘೋಷಿಸಿದವು. ವಿಶ್ವದ ಅಗ್ರ  100 ವಿ.ವಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ವೆಸ್ಟರ್ನ್ ಆಸ್ಟ್ರೇಲಿಯಾ ವಿಶ್ವವಿದ್ಯಾಲಯ (ಯುಡಬ್ಲ್ಯುಎ)ವು ಪದವಿಪೂರ್ವ ವಿದ್ಯಾರ್ಥಿಗಳಿಗೆ 48,000 ಆಸ್ಟ್ರೇಲಿಯಾ ಡಾಲರ್‌ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ  24,000 ಆಸ್ಟ್ರೇಲಿಯಾ ಡಾಲರ್‌ ವರೆಗೆ ವಿದ್ಯಾರ್ಥಿವೇತನವನ್ನು ಘೋಷಿಸಿದೆ. ಯನಿರ್ವಸಿಟಿ ಆಫ್‌ ಈಸ್ಟ್‌ ಆಂಗ್ಲಿಯಾ ಅರ್ಹ ಇಬ್ಬರು ವಿದ್ಯಾರ್ಥಿಗಳಿಗೆ  ಶೇ.50ರಷ್ಟು ವಿದ್ಯಾರ್ಥಿ ವೇತನವನ್ನು ಘೋಷಿಸಿದೆ. 1884ರಲ್ಲಿ ಸ್ಥಾಪನೆಯಾದ ಬ್ಯಾಂಗೋರ್ ಯೂನಿವರ್ಸಿಟಿ ಸಹ ಇಬ್ಬರಿಗೆ ಶೇ.50 ವಿದ್ಯಾರ್ಥಿ ವೇತನವನ್ನು ಘೋಷಿಸಿದೆ.

ಜಾಗತಿಕ ಮಟ್ಟದ ವಿಶ್ವವಿದ್ಯಾಲಯಗಳಿಗೆ ನೇರ ಪ್ರವೇಶಾವಕಾಶ ಕಲ್ಪಿಸುವ ಈ ಎಕ್ಸ್‌ ಪೋ  ಬಗ್ಗೆ ವಿದ್ಯಾರ್ಥಿಗಳು ಅಪಾರ ಮೆಚ್ಚುಗೆ ವ್ಯಕ್ತಪಡಿಸಿದರು. “ಈ ಎಕ್ಸ್‌ ಪೋದಲ್ಲಿ ಭಾಗಿಯಾಗಿದ್ದರಿಂದ ವಿದೇಶದಲ್ಲಿರುವ ಶೈಕ್ಷಣಿಕ ಅವಕಾಶಗಳು ಹಾಗೂ ಆಯ್ಕೆಗಳ ಬಗ್ಗೆ ನನಗೆ ಸ್ಪಷ್ಟತೆ ಸಿಕ್ಕಿತು,” ಎಂದು ಅಂತಿಮ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿನಿ ಲಕ್ಷ್ಮಿ ಹೇಳಿದರು.

ಪಿಯು ವಿದ್ಯಾರ್ಥಿ ಹುಮೇರಾ ಮಾತನಾಡಿ, “ವಿದ್ಯಾರ್ಥಿ ವೇತನ ಮತ್ತು ಸಾಲ ಸೌಲಭ್ಯದ ಕುರಿತು ಇಲ್ಲಿ ಮಾಹಿತಿ ದೊರೆತ ನಂತರ ವಿದೇಶಿ ಶಿಕ್ಷಣ ಸಾಧ್ಯ ಎಂಬ ವಿಶ್ವಾಸ ಮೂಡಿಸಿತು,”ಎಂದರೆ, ವಾಣಿಜ್ಯ ವಿಭಾಗದ ವಿದ್ಯಾರ್ಥಿ ವಿನೋದ್ , “ಅಧ್ಯಯನದ ನಂತರ ಉದ್ಯೋಗಾವಕಾಶಗಳ ಬಗ್ಗೆ ನನಗೆ ಹಲವು ಪ್ರಶ್ನೆಗಳಿದ್ದವು. ವಿಶ್ವವಿದ್ಯಾಲಯ ಪ್ರತಿನಿಧಿಗಳಿಂದಲೇ ನೇರ ಮಾಹಿತಿ ಪಡೆದದ್ದು ಖುಷಿ ಆಯಿತು,” ಎಂದು ಸಂತಸ ಹಂಚಿಕೊಂಡರು.

“ಹೆಚ್ಚಿನ ವಿದ್ಯಾರ್ಥಿಗಳು ಅಮೆರಿಕದಲ್ಲಿ ಇಂಜಿನಿಯರಿಂಗ್, ಕೃತಕ ಬುದ್ಧಿಮತ್ತೆ (ಎಐ) ಮತ್ತು ಫಾರ್ಮಸಿ ಕಾರ್ಯಕ್ರಮಗಳ ಬಗ್ಗೆ ವಿಚಾರಿಸಿಕೊಂಡರು.  ಪದವಿ, ಸ್ನಾತಕೋತ್ತರ ಮತ್ತು ಸಂಶೋಧನಾ ಹಂತಗಳಲ್ಲಿನ ಕೋರ್ಸ್‌ ಗಳು ಹಾಗೂ ನಮ್ಮ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡುವುದರಿಂದಾಗುವ ಅನುಕೂಲಗಳು ಮತ್ತು ಸುರಕ್ಷತೆಯ ಬಗ್ಗೆ ತಿಳಿದುಕೊಳ್ಳಲು ಉತ್ಸುಕರಾಗಿದ್ದರು” ಎಂದು ಅಮೆರಿಕದ ನಾರ್ತ್ ಟೆಕ್ಸಾಸ್ ವಿಶ್ವವಿದ್ಯಾಲಯದ ಪ್ರತಿನಿಧಿ ಗೀತಾ ಕುರುಬ ಹೇಳಿದರು.

ಕೌಶಲ್ಯಾಭಿವೃದ್ಧಿ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಮತ್ತು ಕೆವಿಟಿಎಸ್‌ ಡಿಸಿ ಅಧ್ಯಕ್ಷೆ ಶಿವಕಾಂತಮ್ಮ ನಾಯಕ್ ಅವರು, ರಾಜ್ಯದ ವಿದ್ಯಾರ್ಥಿಗಳು ವಿದೇಶಕ್ಕೆ ತೆರಳಿದ ನಂತರವೂ ಉಚಿತ ಮಾರ್ಗದರ್ಶನ ಮತ್ತು ನಿರಂತರ ಬೆಂಬಲ ಒದಗಿಸುವ ಭರವಸೆ ನೀಡಿದರು.

Key words: ‘Study Abroad Expo, success, 10,000 students, participated