ಧರ್ಮಸ್ಥಳ ಕೇಸ್: SIT ಮಧ್ಯಂತರ ವರದಿ ನೀಡಲಿ- ಸಂಸದ ಯದುವೀರ್ ಆಗ್ರಹ

ಮೈಸೂರು,ಆಗಸ್ಟ್,15,2025 (www.justkannada.in):  ಧರ್ಮಸ್ಥಳ ಪ್ರಕರಣ ತನಿಖೆ ನಡೆಸುತ್ತಿರುವ ಎಸ್ಐಟಿ ಈ ಕುರಿತು ಮಧ್ಯಂತರ ವರದಿ ನೀಡಲಿ ಎಂದು ಮೈಸೂರು-ಕೊಡಗು  ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಆಗ್ರಹಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಂಸದ ಯದುವೀರ್, ಈಗ ಧರ್ಮಸ್ಥಳ ಪ್ರಕರಣಗಳ ಕುರಿತು ತನಿಖೆ ನಡೆಯುತ್ತಿದೆ. ಈ ವೇಳೆ ಒಬ್ಬ ಜನಪ್ರತಿನಿಧಿಯಾಗಿ ಏನೇನೋ ಹೇಳಿಕೆ ಕೊಡುವುದು ಸೂಕ್ತ ಅಲ್ಲ. ಇದುವರೆಗೂ ಏನೆಲ್ಲಾ ತನಿಖೆ ನಡೆದಿದೆ ಅದರ ಮಧ್ಯಂತರ ವರದಿ ಬಿಡುಗಡೆ ಮಾಡಬೇಕು.. ಅದು ಜನರಿಗೆ ಗೊತ್ತಾಗಬೇಕು

ಅದನ್ನ ಹೊರತುಪಡಿಸಿ ಅಪಪ್ರಚಾರ ಮಾಡುವವರ ಮೇಲೆ ಸರ್ಕಾರ ಕ್ರಮ ಕೈಗೊಳ್ಳಬೇಕು. ಸಾಮಾಜಿಕ ಜಾಲತಾಣಗಳು, ಯೂಟ್ಯೂಬ್ ಗಳ ವಿರುದ್ಧ ಕಠಿಣ ಕ್ರಮ ಆಗಬೇಕು ಎಂದು ಸಂಸದ ಯದುವೀರ್ ಒಡೆಯರ್ ಒತ್ತಾಯಿಸಿದರು.

ಕೊಲೆ ಆರೋಪಿ ನಟ ದರ್ಶನ್ ಜಾಮೀನು ರದ್ದು ವಿಚಾರ ಕುರಿತು ಪ್ರತಿಕ್ರಿಯಿಸಿದ ಸಂಸದ ಯದುವೀರ್, ಕಾನೂನಿನ ಮುಂದೆ ಎಲ್ಲರೂ ಒಂದೇ. ಕಾನೂನಿಗೆ ಯಾರು ದೊಡ್ಡವರು ಚಿಕ್ಕವರು ಇಲ್ಲ. ಸುಪ್ರೀಂ ಕೋರ್ಟ್ ತೀರ್ಪುನ್ನು ಎಲ್ಲರೂ ಒಪ್ಪಬೇಕು ಎಂದರು.

ಸಚಿವ ಸ್ಥಾನದಿಂದ ರಾಜಣ್ಣ ವಜಾ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಂಸದ ಯದುವೀರ್,  ಸತ್ಯ ಹೇಳಿದ್ರೆ ಕಾಂಗ್ರೆಸ್ ನಲ್ಲಿ ವಜಾ ಮಾಡ್ತಾರೆ. ಕಾಂಗ್ರೆಸ್ ಆಳ್ವಿಕೆ ಇರುವ ಕಡೆ ಇದೇ ಪರಿಸ್ಥತಿ. ರಾಜಣ್ಣಗೆ ಅನ್ಯಾಯ ಆಯ್ತಾ ಇಲ್ವಾ ಅವರೇ ಹೇಳಬೇಕು. ಈ ಹಿಂದೆ ಸತ್ಯ ಹೇಳಿದ ಮಹಿಳಾ ಅಧಿಕಾರಿಯನ್ನು ಸಹ ಕಾಂಗ್ರೆಸ್ ಹೀಗೆ ನಡೆಸಿಕೊಂಡಿತ್ತು. ಈಗ ರಾಜಣ್ಣಗೂ ಅದೇ ಮಾಡಿದೆ. ವೋಟ್ ಚೋರಿ ವಿಚಾರದಲ್ಲಿ ರಾಜಣ್ಣ ಸತ್ಯ ಹೇಳಿದ್ರು ಮತ ಚೋರಿ ಆಗಿದ್ರೆ 45 ದಿನ ಕಾಲವಕಾಶ ಇದೆ. ದಾಖಲೆ ನೀಡಿ ಕಾನೂನು ಹೋರಾಟ ಮಾಡಲಿ. ಅದನ್ನು ಬಿಟ್ಟು ಈ ರೀತಿ ಹೇಳಿಕೆಗಳು ಸರಿಯಲ್ಲ ಎಂದರು.

Key words: Dharmasthala case,  SIT,  interim report, MP, Yaduveer