ಬೆಂಗಳೂರು,ಆಗಸ್ಟ್,14,2025 (www.justkannada.in): ವಿಧಾನಸೌಧ ಮತ್ತು ವಿಕಾಸಸೌಧದಲ್ಲಿ ಪ್ರವೇಶ ಮಾಡಲು ಇನ್ಮುಂದೆ ಆನ್ ಲೈನ್ ನಲ್ಲಿ ಪಾಸ್ ಸಿಗಲಿದೆ.
ಹೌದು, ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಸರ್ಕಾರ, ವಿಧಾನಸೌಧ, ವಿಕಾಸಸೌಧ ಕಟ್ಟಡಗಳಿಗೆ ಸಂದರ್ಶಕರು ಭೇಟಿ ನೀಡುವ ಸಲುವಾಗಿ ನಿಗದಿಪಡಿಸಲಾಗಿರುವ ಸಂದರ್ಶಕರ ಸಮಯದಲ್ಲಿ ಪ್ರವೇಶ ಪಡೆಯಲು ವಿಧಾನಸೌಧದ ಗೋಪಾಲಗೌಡ ವೃತ್ತ ಮತ್ತು ದೇವರಾಜಅರಸು ಪುತ್ಥಳಿ ಬಳಿ ಇರುವ ಸ್ವಾಗತ ಕೇಂದ್ರಗಳಿಂದ ಪ್ರವೇಶಪತ್ರವನ್ನು ಭೌತಿಕವಾಗಿ ನೀಡಲಾಗುತ್ತಿತ್ತು. ಸಾರ್ವಜನಿಕರು, ಸಂದರ್ಶಕರಿಗೆ ಪ್ರವೇಶಪತ್ರ ನೀಡುವ ವಿಧಾನವನ್ನು ಸುಲಲಿತಗೊಳಿಸುವ ದೃಷ್ಠಿಯಿಂದ ಆನ್ ಲೈನ್ ಮೂಲಕ ಪ್ರವೇಶ ಪತ್ರವಿತರಿಸುವ ಪ್ರಕ್ರಿಯೆಯನ್ನುಈಗಾಗಲೇ ಜಾರಿಗೊಳಿಸಲಾಗಿದೆ.
ಇನ್ನುಮುಂದೆ ಸಾರ್ವಜನಿಕರು, ಸಂದರ್ಶಕರು ಈ ನೂತನ ಆನ್ ಲೈನ್ ವ್ಯವಸ್ಥೆ ಮೂಲಕ ವಿಧಾನಸೌಧ, ವಿಕಾಸಸೌಧ ಕಟ್ಟಡಗಳಿಗೆ ಪ್ರವೇಶವನ್ನು ಪಡೆಯಬಹುದಾಗಿದೆ ಎಂದು ಸರ್ಕಾರ ತಿಳಿಸಿದೆ.
ಸಾರ್ವಜನಿಕರು/ಸಂದರ್ಶಕರು ತಮ್ಮ ಮೊಬೈಲ್ ನಲ್ಲಿ ಈ ರೀತಿ ಅರ್ಜಿ ಸಲ್ಲಿಸಬಹುದು…
1 )ಗೂಗಲ್ ಪ್ಲೇಸ್ಟೋರ್ ಆಪ್‌ನಲ್ಲಿ (Google Play Store App) ಕರ್ನಾಟಕ ಒನ್ ಆಪ್ (Karnataka One App)ಡೌನ್ ಲೋಡ್ ಮಾಡಿಕೊಳ್ಳಬೇಕು.
2.) ಸದರಿ ಆಪ್ ನಲ್ಲಿ ಒದಗಿಸಲಾಗಿರುವ ʻವಿಧಾನಸೌಧ ಪಾಸ್ (Vidhana SoudhaPass)ʼಎಂಬದನ್ನು ತೆರೆದುʻ ಪಾಸ್ ಗಾಗಿ ವಿನಂತಿʼ ಎಂಬುದನ್ನು ಕ್ಲಿಕ್ ಮಾಡಿದ ನಂತರ ಸಂದರ್ಶಕರು ತಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ʻಒಟಿಪಿ ಪಡೆಯಿರಿʼಎಂಬುದನ್ನು ಕ್ಲಿಕ್ ಮಾಡಬೇಕು.
3) ತಮ್ಮ ಮೊಬೈಲ್ ನ SMS ಮೂಲಕ ಸ್ವೀಕರಿಸಿದ ಒಟಿಪಿ ಅನ್ನು ನಮೂದಿಸಿ ನಂತರʻಒಟಿಪಿ ಪರಿಶೀಲಿಸಿ ʼಬಟನ್ ಕ್ಲಿಕ್ ಮಾಡಬೇಕು.
ನಂತರ ತೆರೆದುಕೊಳ್ಳುವ ʻಫಾರ್ಮ್ ಭರ್ತಿಮಾಡಿʼ ಎಂಬ ಪುಟದಲ್ಲಿ ಸಂದರ್ಶಕರು ತಮ್ಮ ಹೆಸರು, ಭೇಟಿ ನೀಡಬೇಕಾದ ಕಟ್ಟಡ, ಇಲಾಖೆ, ಉದ್ದೇಶ, ದಿನಾಂಕ ಮತ್ತು ಸಮಯ ಭರ್ತಿ ಮಾಡಿ, ನಂತರ ಯಾವುದಾದರೊಂದು ವಿಳಾಸದ ಧೃಡೀಕರಣವನ್ನು ನಮೂದಿಸಿ (ಆಧಾರ್/ಚಾಲನಾಪರವಾನಗಿ/ಪಾನ್/ಪಾಸ್ ಪೋರ್ಟ್/ಮತದಾರರ ಗುರುತಿನ ಚೀಟಿ) ʻಪೋಟೋ ಅಪ್ ಲೋಡ್ ಮಾಡಿʼ ಎಂಬ ಕಡೆ ತಮ್ಮ ಭಾವಚಿತ್ರವನ್ನು ಅಪ್ ಲೋಡ್ ಮಾಡಿʻ ಡ್ಯಾಕ್ಯುಮೆಂಟ್ ಅಪ್ ಲೋಡ್ ಮಾಡಿ ʼಎಂಬ ಕಡೆ ಸಂಬಂಧ ಪಟ್ಟ ದಾಖಲೆಗಳನ್ನು ಅಪ್‌ಲೋಡ್ ಮಾಡಿ ನಂತರ ʻಸಲ್ಲಿಸಿʼ ಎನ್ನುವ ಬಟನ್ ಕ್ಲಿಕ್ ಮಾಡಿದಲ್ಲಿ ʻವಿಧಾನಸೌಧ ಗೇಟ್ ಪಾಸ್ ಗಾಗಿ ನಿಮ್ಮಅರ್ಜಿಯನ್ನುನಾವು ಯಶಸ್ವಿಯಾಗಿ ಸ್ವೀಕರಿಸಿದ್ದೇವೆ, ಭೇಟಿಯು ಅನುಮೋದನೆಗೆ ಒಳಪಟ್ಟಿರುತ್ತದೆʼ ಎಂದು ತಮ್ಮ ಮೊಬೈಲ್ ನಲ್ಲಿ ನಮೂದಾಗುತ್ತದೆ.
ಈ ರೀತಿ ಆನ್ ಲೈನ್ ಮೂಲಕ ಸ್ವೀಕೃತಗೊಂಡ ಅರ್ಜಿಯನ್ನು ಸಿಆಸುಇ (ಕಾರ್ಯಕಾರಿ) ವಿಭಾಗ ಪರಿಶೀಲಿಸಿ ಎಲ್ಲಾ ದಾಖಲೆಗಳು ಸರಿಯಿದ್ದಲ್ಲಿ ಆನ್ ಲೈನ್ ಮೂಲಕವೇ ಅನುಮತಿ ನೀಡುತ್ತದೆ. ಅನುಮತಿ ನೀಡಿದ ನಂತರ QR Code ಸೃಜನೆಗೊಂಡು ಅರ್ಜಿದಾರನ ಮೊಬೈಲ್ ಗೆ ರವಾನೆ ಆಗುತ್ತದೆ.
ಒಂದು ವೇಳೆ ದಾಖಲೆಗಳು ತಾಳೆ ಹೊಂದದಿದ್ದಲ್ಲಿಅನುಮತಿ ನಿರಾಕರಿಸಲಾಗುವುದು. ಸಂದರ್ಶಕರು ಅನುಮತಿ ನೀಡಿದ ದಿನಾಂಕ ಮತ್ತು ಸಮಯದಂದು ತಮ್ಮ ಮೊಬೈಲ್ ಗೆ ಬಂದಿರುವ QR Code ಅನ್ನು ವಿಧಾನಸೌಧ/ವಿಕಾಸಸೌಧ ಪ್ರವೇಶ ದ್ವಾರಗಳಲ್ಲಿ ಪೋಲೀಸ್ ಸಿಬ್ಬಂದಿಗಳಿಗೆ ತೋರಿಸಬೇಕು.
ಪೋಲೀಸ್ ಸಿಬ್ಬಂದಿಗಳು QR Code ಅನ್ನುಸ್ಕ್ಯಾನ್ ಮಾಡಿ, ಸಂದರ್ಶಕ ಪೋಟೋ ಐಡಿಯನ್ನು ದೃಢೀಕರಿಸಿದ ನಂತರ ಸಂದರ್ಶಕರಿಗೆ ವಿಧಾನಸೌಧ/ ವಿಕಾಸಸೌಧ ಪ್ರವೇಶಿಸಲು ಅನುಮತಿ ನೀಡುತ್ತಾರೆ.
ವಿಧಾನಸೌಧ ಮತ್ತು ವಿಕಾಸಸೌಧಕ್ಕೆ ಭೇಟಿ ನೀಡಲು ಇಚ್ಚಿಸುವ ಸಂದರ್ಶಕರು ದಿನದ ಯಾವುದೇ ಸಮಯದಲ್ಲಿ (24×7) ಯಾವು ದೇಸ್ಥಳದಲ್ಲಿ ವಿಧಾನಸೌಧ ಪಾಸ್‌ಗೆ ವಿನಂತಿಯನ್ನುಆನ್ ಲೈನ್ ಮೂಲಕ ಸಲ್ಲಿಸಬಹುದು.
ಸಚಿವ ಸಂಪುಟದ ಸಭೆ ನಡೆಯುವ ದಿನ ಮತ್ತು ಸರ್ಕಾರಿ ರಜಾದಿನಗಳನ್ನು ಹೊರತು ಪಡಿಸಿ ಉಳಿದ ದಿನಗಳಲ್ಲಿ ನಿಗದಿ ಪಡಿಸಲಾಗಿರುವ ಸಂದರ್ಶಕರ ಸಮಯದಲ್ಲಿ ಭೇಟಿಗೆ ಆಯ್ಕೆ ಮಾಡಿಕೊಳ್ಳಬಹುದು.
ಆದ ಕಾರಣ, ಕಾರ್ಯ ನಿಮಿತ್ತ ವಿಧಾನಸೌಧ/ ವಿಕಾಸಸೌಧ ಕಟ್ಟಡಕ್ಕೆ ಪ್ರವೇಶಿಸಲು ಕರ್ನಾಟಕ ಒನ್ ಆನ್ ಲೈನ್ ಆಪ್ ಮೂಲಕ ಪ್ರವೇಶಪತ್ರ ಪಡೆಯುವ ನೂತನ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳುವಂತೆ ಸರ್ಕಾರ ಕೋರಿದೆ.
Key words: Vidhana Soudha, Entry, ONLINE Pass, implemented