ಮೈಸೂರು, ಆಗಸ್ಟ್,7,2025 (www.justkannada.in): 50 ವರ್ಷಗಳ ಹಿಂದೆ ನಾವು ಸಹಜ ಪ್ರಪಂಚದಲ್ಲಿ ಬದುಕುತಿದ್ದೆವು, ಇದರ ಜೊತೆಗೆ 20 ವರ್ಷಗಳ ಹಿಂದೆ ಸ್ಪರ್ಧಾತ್ಮಕ ಪ್ರಪಂಚ ಒಳಗೊಂಡಿತು. ಈಗ ಡಿಜಿಟಲ್ ಪ್ರಪಂಚವೂ ಸೇರ್ಪಡೆಗೊಂಡಿದೆ. ಹಾಗಾಗಿ ಇಂದಿಯು ಯುವ ಪೀಳಿಗೆ ಈ ಮೂರೂ ಪ್ರಪಂಚವನ್ನು ಗೆಲ್ಲಬೇಕಾದ ಒತ್ತಡ ಎದುರಾಗಿದೆ ಎಂದು ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ದೀಪಕ್ ಅಭಿಪ್ರಾಯಪಟ್ಟರು.
ಮೈಸೂರಿನ ಬೋಗಾದಿಯ ರೂಪಾನಗರದಲ್ಲಿರುವ ದೀಪಾ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಇಂದು ಹಮ್ಮಿಕೊಳ್ಳಲಾಗಿದ್ದ ಪ್ರಥಮ ಪಿಯು ವಿದ್ಯಾರ್ಥಿಗಳಿಗೆ ಸ್ವಾಗತ ಮತ್ತು ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರಸ್ತುತ ಸ್ಪರ್ಧಾತ್ಮಕ ಮತ್ತು ಡಿಜಿಟಲ್ ಪ್ರಪಂಚದ ಸಾಧಕ-ಬಾಧಕಗಳನ್ನು ವಿವರಿಸಿದರು.
ಸಹಜ ಪ್ರಪಂಚದಲ್ಲಿ ನಾವು ನಾಲ್ಕು ಅಕ್ಷರ ಕಲಿತರೆ ಸಾಕು ಸಹಜ ಬದುಕು ನಡೆಸಬಹುದಿತ್ತು. ಸ್ಪರ್ಧಾತ್ಮಕ ಜಗತ್ತು ಸೃಷ್ಟಿಯಾಗುತ್ತಿದ್ದಂತೆಯೇ ವಿದ್ಯಾರ್ಥಿಗಳು ಅತ್ಯುನ್ನತ ಸಾಧನೆ ಮಾಡಲೇಬೇಕಾಗಿತ್ತು. ಈಗ ಡಿಜಿಟಲ್ ಪ್ರಪಂಚದಲ್ಲಿ ಶಿಕ್ಷಣ, ಶ್ರಮದ ಜೊತೆಗೆ ಕೌಶಲ್ಯ ವೃದ್ಧಿಗೆ ಆದ್ಯತೆ ನೀಡದಿದ್ದರೆ ವಿದ್ಯಾರ್ಥಿಗಳು ಅಸ್ಥಿತ್ವ ಉಳಿಸಿಕೊಳ್ಳಲು ಸಾಧ್ಯವಾಗದ ಸ್ಥಿತಿ ನಿರ್ಮಾಣಗೊಂಡಿದೆ ಎಂದು ತಿಳಿಸಿದರು.
ಪ್ರತಿಯೊಬ್ಬ ವಿದ್ಯಾರ್ಥಿಗಳೂ ಸಹ ಸಹಜ ಶಿಕ್ಷಣದ ಜೊತೆಗೆ ಕೌಶಲ್ಯ ವೃದ್ಧಿಗೆ ಸಮೂಹ ಕಲೆ, ಸಮಯ ನಿರ್ವಹಣೆ, ವಿಭಿನ್ನ ಚಿಂತನೆ, ನಾಯಕತ್ವದ ಗುಣ ಮತ್ತು ತಂತ್ರಜ್ಞಾನದ ಜ್ಞಾನವನ್ನು ಬೆಳೆಸಿಕೊಳ್ಳಬೇಕು. ಇದರ ಜೊತೆಗೆ ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಂಡರೆ ಸುಂದರ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯ ಎಂದು ಹೇಳಿದರು.
ಇಂದಿನ ಯುವ ಜನಾಂಗಕ್ಕೆ ಮೊಬೈಲ್ ವರವೂ ಹೌದು, ಶಾಪವೂ ಹೌದು. ಮೊಬೈಲ್ ಒಳ್ಳೆಯ ಜಗತ್ತನ್ನು ಪರಿಚಯಿಸುವುದರ ಜೊತೆಗೆ ಕೆಟ್ಟ ಜಗತ್ತನ್ನೂ ತೋರಿಸುತ್ತಿದೆ. ಆದರೆ, ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಅನುಕೂಲವಾಗುವ ಅಂಶಗಳನ್ನು ಮಾತ್ರ ಪರಿಗಣಿಸಬೇಕು. ಏಕೆಂದರೆ, ಮೊಬೈಲ್ ಯುವ ಪೀಳಿಗೆಯ ಖಾಸಗಿ ತನಕ್ಕೆ ದೊಡ್ಡ ಮಾರಕವಾಗಿದೆ. ಇದರಿಂದ ಸೈಬರ್ ಕ್ರೈಂ ಪ್ರಕರಣಗಳು ಹೆಚ್ಚಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ದೀಪಾ ಶಿಕ್ಷಣ ಮತ್ತು ಸೇವಾ ಸಂಸ್ಥೆಯ ಅಧ್ಯಕ್ಷರಾದ ಎಂ. ರಾಮಪ್ಪ ಮಾತನಾಡಿ, ವಿದ್ಯಾರ್ಥಿಗಳು ಯಾವುದೇ ಸಮಸ್ಯೆ ಎದುರಾದರೂ ಪೋಷಕರು ಮತ್ತು ಉಪನ್ಯಾಸಕರ ಮುಂದೆ ಮುಕ್ತವಾಗಿ ಹಂಚಿಕೊಳ್ಳುವ ಮನೋಭಾವ ಬೆಳೆಸಿಕೊಳ್ಳಬೇಕು. ಎಲ್ಲ ಸಮಸ್ಯೆಗಳಿಗೂ ಪರಿಹಾರ ಇದ್ದೇ ಇರುತ್ತದೆ. ಅದನ್ನು ಬಿಟ್ಟು ಮನಸ್ಸಿನಲ್ಲೇ ಇಟ್ಟುಕೊಂಡು ಕೆಟ್ಟ ನಿರ್ಧಾರಗಳನ್ನು ಕೈಗೊಳ್ಳಬಾರದು ಎಂದು ಕಿವಿಮಾತು ಹೇಳಿದರು.
ಇದಕ್ಕು ಮುನ್ನ ಮೊದಲ ಪಿಯು ವಿದ್ಯಾರ್ಥಿಗಳನ್ನು ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು. ಹಾಗೂ ಈ ಸಾಲಿನ ವಿದ್ಯಾರ್ಥಿ ಸಂಘದ ನೂತನ ಪದಾಧಿಕಾರಿಗಳಿಗೆ ಪದಗ್ರಹಣ ಮತ್ತು ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿ ಸುಂದರ್, ನಿರ್ದೇಶಕರಾದ ಬಾಲಕೃಷ್ಣ, ಕಾಲೇಜಿನ ಪ್ರಾಂಶುಪಾಲರಾದ ಪ್ರನೀತಾ ಎರ್ಮಾಳ್, ದೀಪಾ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಶಿಲ್ಪಾ ಜಗದೀಶ್ ಹಾಗೂ ಉಪನ್ಯಾಸಕರಾದ ಪುರುಷೋತ್ತಮ್, ಕೀರ್ತಿ, ಶಿವಕುಮಾರ್, ಎ.ಎಸ್. ಗೋವಿಂದೇಗೌಡ, ಸುಮತಿ, ಸ್ವಾಮಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
key words: students, pressure, conquer, three worlds, K. Deepak, Mysore