ಬೆಂಗಳೂರು,ಆಗಸ್ಟ್,7,2025 (www.justkannada.in): ಶಾಲಾ ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಗೂ ಇತರೆ ಇಲಾಖೆಯ ನೋಡಲ್ ಅಧಿಕಾರಿಗಳು ಶಾಲಾ ಭೇಟಿ ಸಂದರ್ಭದಲ್ಲಿ ಪರಿವೀಕ್ಷಣಾ ಮಾಹಿತಿಯನ್ನು ಇಂದೀಕರಿಸಲು ಅಭಿವೃದ್ಧಿಪಡಿಸಿರುವ ಪರಿವೀಕ್ಷಣಾ ಆಪ್ ಬಳಕೆಗೆ ಸರ್ಕಾರ ಅನುಮತಿ ನೀಡಿದೆ.
ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಶಾಲಾ ಮಟ್ಟದಲ್ಲಿ ನಿರಂತರ ಸಮೀಕ್ಷೆ, ಮೇಲುಸ್ತುವಾರಿ ಹಾಗೂ ಕಾರ್ಯಕ್ಷಮತೆಯ ಮೌಲ್ಯಮಾಪನವನ್ನು ಸುಧಾರಿಸುವ ಉದ್ದೇಶದಿಂದ ಶಾಲಾ ಭೇಟಿಗಳ ಮಾಹಿತಿಯನ್ನು ಇಂದೀಕರಿಸಲು ಪರಿವೀಕ್ಷಣಾ ಆಪ್ (Inspection App) ಅನ್ನು ಅಭಿವೃದ್ಧಿಪಡಿಸಲಾಗಿದ್ದು ಈ ಪರಿವೀಕ್ಷಣಾ ಆಪ್ ಬಳಕೆ ರಾಜ್ಯಾದ್ಯಂತ ಅನುಷ್ಟಾನಗೊಳಿಸಲು ಅನುಮತಿ ನೀಡಲಾಗಿದೆ.
ವಿಶೇಷ ಅಧಿಕಾರಿ ಹಾಗೂ ಪದನಿಮಿತ್ತ ಸರ್ಕಾರ ಅಧೀನ ಕಾರ್ಯದರ್ಶಿ (ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ) ಶುಭಮಂಗಳ ಆರ್.ವಿ ಅವರು ರಾಜ್ಯಪಾಲರ ಆಜ್ಞಾನುಸಾರ, ಅವರ ಹೆಸರಿನಲ್ಲಿ ಈ ಕುರಿತು ಆದೇಶಿಸಿದ್ದಾರೆ.
2025-26ನೇ ಶೈಕ್ಷಣಿಕ ಸಾಲಿನಿಂದ ಶಾಲಾ ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಗೂ ಇತರೆ ಇಲಾಖೆಗಳಿಂದ ಶಾಲಾ ಶಿಕ್ಷಣ ಇಲಾಖೆಗೆ ನೇಮಿಸಿರುವ ನೋಡಲ್ ಅಧಿಕಾರಿಗಳು ಶಾಲಾ ಭೇಟಿ ಸಂದರ್ಭದಲ್ಲಿ ಪರಿವೀಕ್ಷಣಾ ಮಾಹಿತಿಯನ್ನು ಇಂದೀಕರಿಸಲು ಇಲಾಖೆಯಿಂದ ಅಭಿವೃದ್ಧಿಪಡಿಸಲಾಗಿರುವ ಪರಿವೀಕ್ಷಣಾ ಆಪ್ (Inspection App) ಅನ್ನು ರಾಜ್ಯದಾದ್ಯಂತ ಅನುಷ್ಠಾನಗೊಳಿಸಲು ಈ ಮುಂದಿನ ಷರತ್ತುಗಳಿಗೊಳಪಟ್ಟು ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ, ಬೆಂಗಳೂರು ಇವರಿಗೆ ಅನುಮತಿಸಿ ಆದೇಶಿಸಿದೆ.
ಷರತ್ತುಗಳು ಹೀಗಿವೆ..
- ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ, ಬೆಂಗಳೂರು ಇವರು ಸದರಿ ಯೋಜನೆಯ ಅನುಷ್ಠಾನಾಧಿಕಾರಿಯಾಗಿ ಕಾರ್ಯನಿರ್ವಹಿಸತಕ್ಕದ್ದು.
- ಪರಿವೀಕ್ಷಣಾ ಸಂದರ್ಭದಲ್ಲಿ ಕಾಲಕಾಲಕ್ಕೆ ಉದ್ಭವಿಸಬಹುದಾದ ಸವಾಲುಗಳನ್ನು ನಿಭಾಯಿಸುವ ಸಂಬಂಧ ಅವಶ್ಯವಿರುವಂತೆ ಪ್ರಶ್ನಾವಳಿಗಳನ್ನು ರೂಪಿಸಿ ಸದರಿ ಆಪ್ (App)ನಲ್ಲಿ ಸಂಯೋಜಿಸಲು ನಿರಂತರವಾಗಿ ಅಗತ್ಯ ಕ್ರಮವಹಿಸತಕ್ಕದ್ದು.
- ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ, ಬೆಂಗಳೂರು ಇವರು ಸದರಿ ಕಾರ್ಯಕ್ರಮದ ಅನುಷ್ಠಾನದ ಬಗ್ಗೆ ವಿಸ್ತ್ರತವಾದ ಮಾರ್ಗಸೂಚಿಯನ್ನು ಹೊರಡಿಸತಕ್ಕದ್ದು.
- ಪರಿವೀಕ್ಷಣಾ ಆಪ್ (Inspection App)ನಲ್ಲಿ ಇಂದೀಕೃತವಾದ ಮಾಹಿತಿಯು Dash Board ಹಾಗೂ ವರದಿ ರೂಪದಲ್ಲಿ ಎಲ್ಲಾ ಮೇಲಾಧಿಕಾರಿಗಳ SATS ಲಾಗಿನ್‌ನಲ್ಲಿ (ಮುಖ್ಯ ಶಿಕ್ಷಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಉಪನಿರ್ದೇಶಕರು (ಆಡಳಿತ), ಡಯಟ್ ಪ್ರಾಂಶುಪಾಲರು, ಜಿಲ್ಲಾ ಪಂಚಾಯತ್‌ನ ಮುಖ್ಯಕಾರ್ಯನಿರ್ವಹಣಾಧಿಕಾರಿಗಳು, ಜಿಲ್ಲಾಧಿಕಾರಿಗಳು, ಶಾಲಾ ಶಿಕ್ಷಣ ಇಲಾಖೆಯ ಎಲ್ಲಾ ಇಲಾಖಾ ಮುಖ್ಯಸ್ಥರು, ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ಮಾನ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರು ಇವರುಗಳ ಡ್ಯಾಶ್‌ಬೋರ್ಡ್) ಪೂರ್ಣ ಪ್ರಮಾಣದಲ್ಲಿ ಲಭ್ಯಗೊಳಿಸಲು ಕ್ರಮವಹಿಸತಕ್ಕದ್ದು.
- ಶಾಲಾ ಪರಿವೀಕ್ಷಣಾ ವರದಿಯನ್ನು Single-Line Report ರೂಪದಲ್ಲಿ SATS ತಂತ್ರಾಂಶದಲ್ಲಿ ಪಡೆಯಲು ಅಗತ್ಯ ಕ್ರಮವಹಿಸತಕ್ಕದ್ದು.
- ಪರಿವೀಕ್ಷಣಾ ಆಪ್ (Inspection App) ಪರಿಣಾಮಕಾರಿ ಬಳಕೆಗೆ ಅಧಿಕಾರಿಗಳಿಗೆ ಆನ್‌ಲೈನ್ ಮೂಲಕ ಅಗತ್ಯ ತರಬೇತಿ ಒದಗಿಸತಕ್ಕದ್ದು.
- ಪರಿವೀಕ್ಷಣಾ ಆಪ್ (Inspection App)ನ ಅಭಿವೃದ್ಧಿಗೆ ಸರ್ಕಾರದಿಂದ ಯಾವುದೇ ಅನುದಾನ ಕೋರತಕ್ಕದ್ದಲ್ಲ.
- ಪರಿವೀಕ್ಷಣಾ ಆಪ್ (Inspection App)ನಲ್ಲಿ ಲಭ್ಯವಿರುವ ದತ್ತಾಂಶಗಳನ್ನು ತಾಲ್ಲೂಕು, ಜಿಲ್ಲೆ ಹಾಗೂ ರಾಜ್ಯ ಹಂತದಲ್ಲಿ ವಿಶ್ಲೇಷಿಸಿ, ಸದರಿ ವಿಶ್ಲೇಷಣಾ ವರದಿಗಳಿಗೆ ಅನುಪಾಲನೆ ಕೈಗೊಳ್ಳಲು ಸೂಕ್ತ ಸುತ್ತೋಲೆಯನ್ನು ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ, ಬೆಂಗಳೂರು ಇವರು ಹೊರಡಿಸಲು ಕ್ರಮವಹಿಸತಕ್ಕದ್ದು.
- ಸದರಿ ಕಾರ್ಯಕ್ರಮದ ಆದೇಶದ ಪ್ರತಿಯನ್ನು ಆಯುಕ್ತರ ಕಛೇರಿ, ಶಾಲಾ ಶಿಕ್ಷಣ ಇಲಾಖೆ, ಬೆಂಗಳೂರು ಇವರ ಜಾಲತಾಣದಲ್ಲಿ ಪ್ರಕಟಿಸತಕ್ಕದ್ದು.
Key words: Inspection App, School Visit, Permissions , implementation