ಮೈಸೂರು,ಆಗಸ್ಟ್,7,2025 (www.justkannada.in): ಶೈಕ್ಷಣಿಕ ಕ್ಷೇತ್ರದ ಚಟುವಟಿಕೆಗಳನ್ನು ವೀಕ್ಷಿಸಲು ಇತರೆ ಇಲಾಖೆಯ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನಿಯುಕ್ತಿಗೊಳಿಸಿರುವ ಕ್ರಮ ಸರಿಯಲ್ಲ. ಈ ಆದೇಶವನ್ನು ಹಿಂಪಡೆಯಿರಿ ಎಂದು ವಿಧಾನಪರಿಷತ್ ಸದಸ್ಯ ಕೆ.ವಿವೇಕಾನಂದ ಆಗ್ರಹಿಸಿದ್ದಾರೆ.
ಈ ಕುರಿತು ಸರ್ಕಾರದ ಪ್ರಧಾನ ಕಾರ್ಯದರ್ಶಿ(ಶಾಲಾ ಶಿಕ್ಷಣ ಇಲಾಖೆ) ಅವರಿಗೆ ಪತ್ರ ಬರೆದಿರುವ ಎಂಎಲ್ ಸಿ ವಿವೇಕಾನಂದ, ಶೈಕ್ಷಣಿಕ ಕೇತ್ರ ಅಭಿವೃದ್ಧಿ ದೃಷ್ಟಿಯಿಂದ ಹೊಸ ಹೊಸ ಆಲೋಚನೆಗಳನ್ನು ಅನುಷ್ಠಾನಗೊಳಿಸಲು ಹಲವು ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿರುವುದು ಸರಿಯಷ್ಟೇ. ಅದರಲ್ಲಿ ಕೆಲವು ಆಲೋಚನೆಗಳಿಗೆ ನಮ್ಮ ಸಮ್ಮತಿ ಇದೆ. ತಮ್ಮ ಇಲಾಖೆಯ ಹೊಸ ಆಲೋಚನೆಗಳನ್ನು ಅನುಷ್ಟಾನ ಮಾಡುವ ಮೊದಲು ಶಿಕ್ಷಣ ತಜ್ಞರ, ಶಿಕ್ಷಕರ ಕ್ಷೇತ್ರದ, ಪದವೀಧರ ಕ್ಷೇತ್ರದ ಶಾಸಕರುಗಳ, ಶಿಕ್ಷಕರ ಸಂಘಟನೆಯ ಪದಾಧಿಕಾರಿಗಳ ಸಭೆ ಕರೆದು ಸಾಧಕ ಭಾಧಕಗಳ ಬಗ್ಗೆ ಚರ್ಚಿಸಿ ಶಿಕ್ಷಕ ಸ್ನೇಹಿ ನಿರ್ಧಾರವನ್ನು ತೆಗೆದುಕೊಳ್ಳುವಂತೆ ಈ ಮೊದಲು ಹಲವು ಬಾರಿ ತಮಗೆ ಖುದ್ದು ಸಿ ಪತ್ರದ ಮೂಲಕ ಕೋರಲಾಗಿತ್ತು.
ಆದರೂ ಇಲಾಖೆಯು ಈ ರೀತಿಯ ಸಭೆಯನ್ನು ಕರೆಯದೆ ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿರುವುದು ಶೈಕ್ಷಣಿಕ ಕೇತ್ರದ ಹಿತ ದೃಷ್ಟಿಯಿಂದ ಸರಿಯಲ್ಲವೆಂದು ನನ್ನ ಅಭಿಪ್ರಾಯವಾಗಿದೆ ಎಂದು ತಿಳಿಸಿದ್ದಾರೆ.
ತಾವುಗಳು ಉಲ್ಲೇಖಿತ ಆದೇಶದಲ್ಲಿ ಶಾಲೆಯ, ಮುಖ್ಯ ಶಿಕ್ಷಕರ-ಸಹಶಿಕ್ಷಕರ ಕಾರ್ಯಚಟುವಟಿಕೆಗಳ ವೀಕ್ಷಣೆಗೆ ಇತರೆ ಇಲಾಖೆಯ ಅಧಿಕಾರಿಗಳನ್ನು ನೋಡಲ್ ಅಧಿಕಾರಿಯನ್ನಾಗಿ ನಿಯುಕ್ತಗೊಳಿಸಿರುವುದು ಸರಿಯಾದ ಕ್ರಮವಲ್ಲ, ಏಕೆಂದರೆ ಇದರಿಂದ ಶಿಕ್ಷಕರ ಮನೋಸ್ಥೆರ್ಯ ಕುಗ್ಗಿಸಿದಂತಾಗುತ್ತದೆ. ಅಲ್ಲದೆ ಇತರೆ ಇಲಾಖೆಯ ನೋಡಲ್ ಅಧಿಕಾರಿಗಳಿಗೆ ಶಿಕ್ಷಣ ಇಲಾಖೆಯ ಕಾರ್ಯವ್ಯಾಪ್ತಿ ಗೊತ್ತಿರುವುದಿಲ್ಲ. ಆಗ ಇವರುಗಳ ನಡುವೆ ಮನಸ್ತಾಪವಾಗುವ ಸಂಭವ ಹೆಚ್ಚಿರುತ್ತದೆ. ತಮ್ಮ ಇಲಾಖೆಯಲ್ಲಿಯೇ ವಿವಿಧ ಸ್ತರದ ಶಿಕ್ಷಣಾಧಿಕಾರಿಗಳು, ಸಂಪನ್ಮೂಲ ವ್ಯಕ್ತಿಗಳು ಇರುವಾಗ ಇತರೆ ಇಲಾಖೆಯ ಅಧಿಕಾರಿಗಳನ್ನು ನೋಡಲ್‌ಗಳನ್ನಾಗಿ ನಿಯುಕ್ತಿಗೊಳಿಸಿರುವುದು ಸರಿಯಾದ ಕ್ರಮವಲ್ಲವೆಂದು ಮತ್ತೊಮ್ಮೆ ತಮಗೆ ಈ ಮೂಲಕ ತಿಳಿಸಿ. ಈ ಉಲ್ಲೇಖಿತ ಆದೇಶವನ್ನು ಮಾರ್ಪಾಡು ಮಾಡಿ ಅನುಷ್ಟಾನ ಗೊಳಿಸುವಂತೆ ಮನವಿ ಮಾಡುವುದಾಗಿ ಪತ್ರದಲ್ಲಿ ವಿವೇಕಾನಂದ ತಿಳಿಸಿದ್ದಾರೆ.
Key words: other department, officials , activities , educational sector, MLC Vivekananda