ಮೈಸೂರು,ಜುಲೈ,31,2025 (www.justkannada.in): ಮೈಸೂರಿನ ಹೆಚ್.ಡಿ ಕೋಟೆಯಲ್ಲಿ ಕೆಂಪೇಗೌಡ ಸಿನಿಮಾದ ಆರ್ಮುಗಂ ಸ್ಟೈಲ್ ನಲ್ಲಿ ಕಿಡಿಗೇಡಿಗಳು ವ್ಯಕ್ತಿಯೊಬ್ಬರ ಭೂಮಿ ಕಬ್ಜಾ ಮಾಡಲು ಯತ್ನಿಸುತ್ತಿರುವ ಆರೋಪ ಕೇಳಿ ಬಂದಿದೆ.
ಮೈಸೂರು ಜಿಲ್ಲೆ ಎಚ್.ಡಿ.ಕೋಟೆ ತಾಲೂಕಿನ ಕ್ಯಾತನಹಳ್ಳಿ ಗ್ರಾಮದಲ್ಲಿ ಈ ಮನಕಲಕುವ ಘಟನೆ ನಡೆದಿದೆ. ಗ್ರಾಮದ ರೈತ ರಾಜೇಗೌಡ ಎಂಬುವವರ ಜಮೀನಿಗೆ ಏಕಾಏಕಿ ನುಗ್ಗುವ ವ್ಯಕ್ತಿಗಳು ಭೂಮಿ ಕೊಟ್ಟು ಜೀವ ಉಳಿಸಿಕೊಳ್ಳಿ, ಕೊಟ್ಟಷ್ಟು ಹಣ ತೆಗೆದುಕೊಂಡು ಊರು ಬಿಡಿ ಎಂದು ಧಮ್ಕಿ ಹಾಕಿದ್ದಾರೆ. ಹೀಗೆ ರೈತರ ಜಮೀನಿಗೆ ಅಮಾಯಕರನ್ನ ನುಗ್ಗಿಸಿ ಭೂಮಿ ಕಸಿದುಕೊಳ್ಳುವ ಕುತಂತ್ರ ನಡೆಸಿದ್ದಾರೆ. 1978 ರಿಂದ ತಂದೆ ಕಾಲದಿಂದಲೂ ಉಳುಮೆ ಮಾಡಿಕೊಂಡು ಬಂದ ರಾಜೇಗೌಡರ ಭೂಮಿಯನ್ನ ಲಪಟಾಯಿಸಲು ಕೆಲವರು ಪ್ಲಾನ್ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಎಂಟು ಎಕರೆ ಜಮೀನಿನಲ್ಲಿ ನಾಲ್ವರು ಅಣ್ಣ ತಮ್ಮಂದಿರು ಕೃಷಿ ಕಾರ್ಯ ನಡೆಸುತ್ತಿದ್ದಾರೆ. ಆದರೆ ಪ್ರಭಾವಿಗಳಿಗೆ ಜಮೀನು ಬೇಕು ಬಿಟ್ಟುಕೊಡಿ ಎಂದು ಕಿಡಿಗೇಡಿಗಳು ರೈತ ರಾಜೇಗೌಡರಿಗೆ ಒತ್ತಡ ಹೇರಿ ಆವಾಜ್ ಹಾಕಿದ್ದು ಈ ಬಗ್ಗೆ ಹಲವು ಬಾರಿ ಪೊಲೀಸ್ ಠಾಣೆಗೆ ದೂರು ನೀಡಿದರೂ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ ಎಂಬ ಆರೋಪ ಕೇಳಿ ಬಂದಿದೆ.
ಪಕ್ಕದ ಜಮೀನಿನ ಪತ್ರಕ್ಕೆ ಅಗ್ರಿಮೆಂಟ್ ತಂದು ಜಮೀನು ಬಿಡಿ ಅಂತ ಕಿಡಿಗೇಡಿಗಳು ಕಿರಿಕ್ ಮಾಡಿದ್ದು, ನ್ಯಾಯಾಲಯದಲ್ಲಿ ಪ್ರಕರಣ ಇತ್ಯರ್ಥವಾದರೂ ಕಿರಿಕಿರಿ ಮಾಡುತ್ತಿದ್ದಾರೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದರೇ ಇದು ಸಿವಿಲ್ ವಿಚಾರ ಅಂತ ಹೇಳಿ ಕಳುಹಿಸುತ್ತಿದ್ದಾರೆ. ಈ ಮಧ್ಯೆ ನ್ಯಾಯಾಲಯವೇ ಆದೇಶ ನೀಡಿ ಪೊಲೀಸರಿಗೆ ನಿರ್ದೇಶನ ಕೊಟ್ಟರೂ ಯಾವುದೇ ಪ್ರಯೋಜನವಾಗಿಲ್ಲ. ಇದು ಸಿವಿಲ್ ವಿಚಾರ ಅಂತ ಸರ್ವೆಯರ್ ಗೆ ಬರೆದರೆ ಫೈಲ್ ಗಳೇ ಮಾಯ ಎಂದು ಸರ್ವೇಯರ್ ಸಬೂಬು ಹೇಳುತ್ತಿದ್ದಾರೆ ಎಂದು ರೈತ ರಾಜೇಗೌಡ ಆರೋಪಿಸಿದ್ದಾರೆ.
ರಾಜೇಗೌಡರ ಕೊಲೆಗೆ ಯತ್ನ
ರೈತ ರಾಜೇಗೌಡ ಹತ್ಯೆಗೆ ಯತ್ನಿಸಿದ ಘಟನೆ ನಡೆದಿದ್ದು ಈ ಕುರಿತು ಹೆಚ್.ಡಿ.ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರಾಜೇಗೌಡರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ ವಾಪಸ್ ಊರಿಗೆ ತೆರಳುವಾಗ ಈ ಘಟನೆ ನಡೆದಿದೆ.
ಮೈಸೂರಿನಿಂದ ಕ್ಯಾತನಹಳ್ಳಿ ಗ್ರಾಮಕ್ಕೆ ತೆರಳುವಾಗ ಜಿ.ಬಿ.ಸರಗೂರು ಬಳಿ ಬೈಕ್ ಅಪಘಾತ ಮಾಡಿ ರೈತ ರಾಜೇಗೌಡರ ಕೊಲೆಗೆ ಯತ್ನಿಸಿದ್ದಾರೆ ಎಂಬ ಆರೋಪಿಸಲಾಗಿದೆ. ಹೆಚ್.ಡಿ.ಕೋಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ರಾಜೇಗೌಡರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು ಆಸ್ಪತ್ರೆಯಲ್ಲಿ ಪೊಲೀಸರಿಗೆ ಹೇಳಿಕೆ ನೀಡಿ, ಎಫ್ ಐಆರ್ ದಾಖಲಿಸಲಾಗಿದೆ. ರಾಜೇಗೌಡರ ಕೈ, ಕಾಲು, ಹೊಟ್ಟೆ ಭಾಗಕ್ಕೆ ಗಾಯಗಳಾಗಿದೆ.
Key words: Mysore, Allegations, land, grab ,cinematic style.