ಮೈಸೂರು,ಜುಲೈ25,2025 (www.justkannada.in): ಗಾಂಜಾ ವ್ಯಸನಿಗಳ ವಿರುದ್ದ ಕಾರ್ಯಾಚರಣೆಗೆ ಮುಂದಾದ ಮೈಸೂರಿನ ಮೇಟಗಳ್ಳಿ ಠಾಣಾ ಪೊಲೀಸರಿಗೆ ಕತ್ತಲು ಅಡ್ಡಿಯಾಗಿದ್ದು, ಬೀದಿ ದೀಪಗಳು ಕೆಟ್ಟಿದ್ದ ಪರಿಣಾಮ ಕಾರ್ಯಾಚರಣೆಗೆ ಅಡ್ಡಿಯಾಗುತ್ತಿದೆ.
ಹೌದು ಮೇಟಗಳ್ಳಿಯ ಸ್ಮಶಾನದಲ್ಲಿ ಗಾಂಜಾ ವ್ಯಸನಿಗಳ ಕಾಟಕ್ಕೆ ಬ್ರೇಕ್ ಹಾಕಲು ನಿರಂತರವಾಗಿ ಕಾರ್ಯಾಚರಣೆ ನಡೆಸುತ್ತಿರುವ ಪೊಲೀಸರ ಕಾರ್ಯಾಚರಣೆಗೆ ಕೆಟ್ಟುನಿಂತಿರುವ ಬೀದಿದೀಪಗಳೇ ಅಡ್ಡಿಯಾಗಿವೆ. ಬೀದಿದೀಪಗಳ ಸರಿಪಡಿಸಲು ನಗರ ಪಾಲಿಕೆ ಅಧಿಕಾರಿಗಳು ಮುಂದಾಗುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ.
ಸ್ಮಶಾನದಲ್ಲಿ ಗಾಂಜಾ ಸೇವನೆ ಮಾಡುದ್ದ ಬಗ್ಗೆ ಮಾಹಿತಿ ತಿಳಿದ ಕೂಡಲೇ ಮೇಟಗಳ್ಳೀ ಠಾಣಾ ಇನ್ಸ್ ಪೆಕ್ಟರ್ ಅರುಣ್ ಅವರು ತಮ್ಮ ಸಿಬ್ಬಂದಿಗಳ ಸಮೇತ ಸ್ಮಶಾನಕ್ಕೆ ಎಂಟ್ರಿ ಕೊಟ್ಟಿದ್ದು ಆದರೆ ದಾಳಿ ನಡೆಸಿದ ಸಮಯದಲ್ಲಿ ಬೀದಿ ದೀಪಗಳು ಕೆಟ್ಟಿದ್ದ ಪರಿಣಾಮ ಗಾಂಜಾ ವ್ಯಸನಿಗಳು ಕತ್ತಲೆಯಲ್ಲೇ ಪರಾರಿಯಾಗಿದ್ದಾರೆ.
ಸ್ಮಶಾನದಲ್ಲಿ ಯುವಕರು ಗುಂಪು ಕಟ್ಟಿಕೊಂಡು ಅನೈತಿಕ ಚಟುವಟಿಕೆಗಳಲ್ಲಿ ಭಾಗಿಯಾಗಿ ಭಯದ ವಾತಾವರಣ ಮೂಡಿಸುತ್ತಿದ್ದಾರೆ. ಇದರಿಂದ ಕಾನೂನು ಬಾಹಿರ ಚಟುವಟಿಕೆಗಳು ನಡೆಯುವ ಸಾಧ್ಯತೆ ಹೆಚ್ಚಾಗಿದೆ. ಹೀಗಾಗಿ ಬೀದಿ ದೀಪಗಳನ್ನ ಸರಿಪಡಿಸುವಂತೆ ಮೇಟಗಳ್ಳಿ ಠಾಣೆ ನಿರೀಕ್ಷಕರು ಫೆಬ್ರವರಿ ತಿಂಗಳಿನಲ್ಲೇ ವಲಯ ಕಚೇರಿ 5ಕ್ಕೆ ಪತ್ರ ಬರೆದು ಮನವಿ ಮಾಡಿದ್ದರು.
ಆದರೆ ಪೊಲೀಸರ ಮನವಿ ಪತ್ರಕ್ಕೆ ಕ್ಯಾರೆ ಎನ್ನದ ಪಾಲಿಕೆ ಅಧಿಕಾರಿಗಳು ನಿರ್ಲಕ್ಷ ವಹಿಸಿದ್ದಾರೆ ಎನ್ನಲಾಗುತ್ತಿದೆ. ಪೊಲೀಸರ ಕಾರ್ಯಚರಣೆಗೆ ಪಾಲಿಕೆ ಅಧಿಕಾರಿಗಳೇ ಸ್ಪಂದಿಸದಿದ್ದಲ್ಲಿ ಗಾಂಜಾ ವ್ಯಸನಿಗಳ ಕಾಟ ತಪ್ಪಿಸುವುದು ಹೇಗೆ ಎಂದು ಸ್ಥಳೀಯರು ಪ್ರಶ್ನಿಸುತ್ತಿದ್ದಾರೆ.
ಸ್ಮಶಾನ ಶವಗಳ ಅಂತ್ಯಕ್ರಿಯೆಗಿಂತ ಹೆಚ್ಚಾಗಿ ಗಾಂಜಾ ವ್ಯಸನಿಗಳ ತಾಣವಾಗುತ್ತಿದ್ದು, ಮೃದೇಹಗಳ ಅಂತ್ಯಕ್ರಿಯೆಗೆ ಬರುವ ಜನರಿಗೆ ಗಾಂಜಾ ವ್ಯಸನಿಗಳ ವರ್ತನೆ ತೀವ್ರ ಮುಜುಗರಕ್ಕೆ ಕಾರಣವಾಗುತ್ತಿದೆ. ಗಾಂಜಾ ವ್ಯಸನಿಗಳ ಕಾಟಕ್ಕೆ ಬ್ರೇಕ್ ಹಾಕಬೇಕಿದ್ದಲ್ಲಿ ಪಾಲಿಕೆ ಅಧಿಕಾರಿಗಳು ಸಹ ಪೊಲೀಸರ ಜೊತೆ ಕೈ ಜೋಡಿಸಬೇಕಿದೆ.
Key words: Mysore, marijuana, addicts, Police, operations, street lights