ಮೈಸೂರು,ಜುಲೈ,26,2025 (www.justkannada.in): ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ ಓವಲ್ ಮೈದಾನದಲ್ಲಿ ಇಂದಿನಿಂದ ಎರಡು ದಿನಗಳ ಕಾಲ ಆಯೋಜಿಸಿರುವ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ ನೀಡಲಾಯಿತು.
ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊಫೆಸರ್ ಎನ್ ಕೆ ಲೋಕನಾಥ್, ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ನ ಮೈಸೂರು ವಲಯದ ಸಂಯೋಜಕ ಆರ್ ಕೆ ಹರಿಕೃಷ್ಣ ಕುಮಾರ್, ಮೈಸೂರು ವಿವಿ ದೈಹಿಕ ಶಿಕ್ಷಣ ವಿಭಾಗದ ಮುಖ್ಯಸ್ಥ ಡಾ. ಸಿ ವೆಂಕಟೇಶ್ ಸೇರಿದಂತೆ ಮತ್ತಿತರ ಗಣ್ಯರು ಬಲೂನ್ ಗಳನ್ನು ಹಾರಿಬಿಡುವುದರ ಜೊತೆಗೆ ಕ್ರಿಕೆಟ್ ಬ್ಯಾಟ್ ಬೀಸುವ ಮೂಲಕ ಪತ್ರಕರ್ತರ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.
ಇದೇ ವೇಳೆ ಮೈಸೂರು ವಿವಿಯ ಕುಲಪತಿ ಲೋಕನಾಥ್ ಮಾತನಾಡಿ, ಮನೋ ವಿಕಾಸ ಮತ್ತು ಬುದ್ದಿ ಚುರುಕುಗೊಳ್ಳಲು ಕ್ರೀಡೆ ಪ್ರತಿಯೊಬ್ಬರಿಗೂ ಅಗತ್ಯ, ಹಾಗೆಯೇ ದೈಹಿಕ ಮಾನಸಿಕ ಆರೋಗ್ಯಕ್ಕೂ ಸಹಕಾರಿಯಾಗಿದೆ. ಕೆಲಸದ ಒತ್ತಡದ ನಡುವೆಯೂ ಪತ್ರಕರ್ತರು ಒಂದೆಡೆ ಸೇರಿ ಕ್ರೀಡೆಯಲ್ಲಿ ಪಾಲ್ಗೊಂಡಿರುವುದು ಸಂತಸದ ಸಂಗತಿಯಾಗಿದೆ. ಕೇವಲ ಗೆಲುವು ಮುಖ್ಯವಲ್ಲ ಸ್ಪರ್ಧೆಯಲ್ಲಿ ಭಾಗವಹಿಸುವುದು ಮುಖ್ಯವಾಗಿದ್ದು, ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಿ ಎಂದರು. ಈ ರೀತಿಯ ಚಟುವಟಿಕೆಗಳು ಸಂಘದ ಸದಸ್ಯರ ಸೌಹಾರ್ದತೆಯ ವೃದ್ದಿಗೆ ಸಹಕಾರಿಯಾಗಲಿದೆ ಎಂದರು.
ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ ದೀಪಕ್ ಮಾತನಾಡಿ, ಮೈಸೂರು ಪತ್ರಿಕೋದ್ಯಮಕ್ಕೆ ಕೆಬಿಜಿ ಮತ್ತು ಕೋಟಿ ಅವರು ಎರಡು ಕಣ್ಣುಗಳಂತೆ ಇದ್ದು, ಕೆಬಿಜಿ ಅವರಿಗೆ ಕ್ರೀಡೆಯ ಬಗ್ಗೆ ಸಾಕಷ್ಟು ಒಲವಿತ್ತು. ಈ ಹಿನ್ನೆಲೆಯಲ್ಲಿ ಈ ಬಾರಿಯ ಕ್ರೀಡಾ ಕೂಟದಲ್ಲಿ ನಡೆಯುತ್ತಿರುವ ಕ್ರಿಕೆಟ್ ಕಪ್ ಗೆ ಕೆಬಿಜಿ ಕಪ್ ಎಂದು ಹೆಸರಿಡಲಾಗಿದೆ, ಈ ಮೂಲಕ ಅವರಿಗೆ ಗೌರವ ಸಲ್ಲಿಸುವುದು ನಮ್ಮ ಕರ್ತವ್ಯ ಎಂದರು.
ಜಿಲ್ಲಾ ಪತ್ರಕರ್ತರ ಸಂಘದ ಉಪಾಧ್ಯಕ್ಷ ರವಿ ಪಾಂಡವಪುರ, ಪ್ರಧಾನ ಕಾರ್ಯದರ್ಶಿ ಧರ್ಮಾಪುರ ನಾರಾಯಣ್ ಹಾಗೂ ಪದಾಧಿಕಾರಿಗಳು ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.
Key words: Mysore District Journalists Association, journalists, annual sports