ದಾವಣಗೆರೆ ಜುಲೈ.18, ೨೦೨೫: ಆರ್.ಟಿ.ಐ. ಕಾಯಿದೆಯಡಿ ಸಲ್ಲಿಕೆಯಾಗುವ ಎರಡನೇ ಮೇಲ್ಮನವಿ ಪ್ರಕರಣಗಳನ್ನು ಗಣನೀಯವಾಗಿ ತಗ್ಗಿಸಲು ಮಾಹಿತಿ ಹಕ್ಕು ಆಯೋಗ ಮುಂದಾಗಿದ್ದು ನವೆಂಬರ್ ವೇಳೆಗೆ ಜಿಲ್ಲಾ ಹಂತದಲ್ಲಿ ಕಲಾಪ ನಡೆಸುವ ಮೂಲಕ ಅದಾಲತ್ ಮಾದರಿಯಲ್ಲಿ ಪ್ರಕರಣಗಳನ್ನು ಶೀಘ್ರ ಇತ್ಯರ್ಥಕ್ಕೆ ಕ್ರಮವಹಿಸಲಾಗುತ್ತದೆ.
ಜಿಲ್ಲಾಧಿಕಾರಿಗಳ ಕಚೇರಿ ತುಂಗಭದ್ರಾ ಸಭಾಂಗಣದಲ್ಲಿ ಜಿಲ್ಲೆಯಲ್ಲಿನ ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಮತ್ತು ಮೊದಲ ಮೇಲ್ಮನವಿ ಪ್ರಾಧಿಕಾರಗಳಿಗೆ ಏರ್ಪಡಿಸಲಾದ ತರಬೇತಿ ಕಾರ್ಯಗಾರದ ನಂತರ ಮಾಹಿತಿ ಹಕ್ಕು ಆಯೋಗ ಆಯುಕ್ತರಾದ ರುದ್ರಣ್ಣ ಹರ್ತಿಕೋಟೆ ಮತ್ತು ರಾಜಶೇಖರ್ ಅವರು ಜಂಟಿಯಾಗಿ ಮಾತನಾಡಿದರು.
ರುದ್ರಣ್ಣ ಹರ್ತಿಕೋಟೆ ಮಾತನಾಡಿ ರಾಜ್ಯ ಮಾಹಿತಿ ಹಕ್ಕು ಆಯೋಗದಲ್ಲಿ 10 ಆಯುಕ್ತರು, ಒಬ್ಬರು ಮುಖ್ಯ ಆಯುಕ್ತರು ಇರುತ್ತಾರೆ. ರಾಜ್ಯದಲ್ಲಿ ಎರಡನೇ ಮೇಲ್ಮನವಿಗೆ ಸಂಬಂಧಿಸಿದ 56 ಸಾವಿರ ಪ್ರಕರಣಗಳಿದ್ದು ಸತತ ಕಲಾಪಗಳನ್ನು ನಡೆಸುವ ಮೂಲಕ ಇವುಗಳನ್ನು 46446 ಕ್ಕೆ ಇಳಿಕೆ ಮಾಡಲಾಗಿದೆ. ಹೆಚ್ಚು ಪ್ರಕರಣಗಳು ಬೆಂಗಳೂರು ನಗರ ಜಿಲ್ಲೆಯ 11428 ಇದ್ದರೆ ಅತೀ ಕಡಿಮೆ ಪ್ರಕರಣಗಳು ಕೊಡಗು ಜಿಲ್ಲೆಯ 75 ಎರಡನೇ ಮೇಲ್ಮನವಿ ಪ್ರಕರಣಗಳಿವೆ. ದಾವಣಗೆರೆಯಲ್ಲಿ 559 ಪ್ರಕರಣಗಳಿದ್ದು ಕಡಿಮೆ ಇರುವ ಜಿಲ್ಲೆಗಳಲ್ಲಿ ಆರನೇ ಸ್ಥಾನದಲ್ಲಿದ್ದು ಹೆಚ್ಚಿನ ಪ್ರಕರಣಗಳಿರುವುದಿಲ್ಲ ಎಂದರು.
ಮಾಹಿತಿ ಹಕ್ಕು ಕಾಯಿದೆಯಡಿ ಸಲ್ಲಿಸುವ ಅರ್ಜಿಗಳಿಗೆ ಲಭ್ಯವಿರುವ ದಾಖಲೆಗಳನ್ನು ಒದಗಿಸಬೇಕು. ಅರ್.ಟಿ.ಐ ರಡಿ ಸಲ್ಲಿಸುವ ಅರ್ಜಿಗಳನ್ನು ತಗ್ಗಿಸಲು 4(1) ಎ.ಬಿ ಘೋಷಣೆಯನ್ನು ಮಾಡಿಕೊಳ್ಳಬೇಕು. ಮತ್ತು ಯೋಜನೆಗಳ ಮಾಹಿತಿಯನ್ನು ಸ್ವಯಂಪ್ರೇರಿತವಾಗಿ ಪ್ರದರ್ಶನ ಮಾಡಿಕೊಂಡಲ್ಲಿ ಅರ್ಜಿಗಳ ಸಂಖ್ಯೆ ಕಡಿಮೆಯಾಗಲಿದೆ. ಕಾಯಿದೆಯಡಿ ನಿಗದಿ ಮಾಡಿದ ಸಮಯದಲ್ಲಿಯೇ ಮಾಹಿತಿಯನ್ನು ನೀಡಬೇಕು, ಇಲ್ಲವಾದಲ್ಲಿ ಅದಕ್ಕೆ ಸಂಬಂಧಿಸಿದ ಹಿಂಬರಹವನ್ನು ನೀಡಬೇಕು. ಸಾರ್ವಜನಿಕ ಮಾಹಿತಿ ಅಧಿಕಾರಿ ಮಾಹಿತಿ ನೀಡದಿದ್ದಲ್ಲಿ ಪ್ರಥಮ ಮೇಲ್ಮನವಿ ಪ್ರಾಧಿಕಾರಕ್ಕೆ ಸಲ್ಲಿಸಬೇಕು. ಇಲ್ಲಿಯೂ ಸರಿಯಾದ ನ್ಯಾಯ ಸಿಗದಿದ್ದಲ್ಲಿ ಎರಡನೇ ಮೇಲ್ಮನವಿ ಪ್ರಾಧಿಕಾರವಾದ ಮಾಹಿತಿ ಹಕ್ಕು ರಾಜ್ಯ ಆಯೋಗಕ್ಕೆ ಮೇಲ್ಮನವಿ ಸಲ್ಲಿಸಬೇಕು ಎಂದರು.
ಎರಡನೇ ಮೇಲ್ಮನವಿ ಪ್ರಾಧಿಕಾರಕ್ಕೆ ಹೆಚ್ಚು ಪ್ರಕರಣಗಳು ಬಾರದಿರಲು ಸಾರ್ವಜನಿಕ ಮಾಹಿತಿ ಅಧಿಕಾರಿ ಮತ್ತು ಪ್ರಥಮ ಮೇಲ್ಮನವಿ ಪ್ರಾಧಿಕಾರಕ್ಕೆ ತರಬೇತಿ ಮೂಲಕ ಜಾಗೃತಿ ಮೂಡಿಸುವ ಮೂಲಕ ಪ್ರಕರಣಗಳನ್ನು ಗಣನೀಯವಾಗಿ ತಗ್ಗಿಸಬೇಕೆಂಬ ಉದ್ದೇಶ ಆಯೋಗ ಹೊಂದಿದೆ. ಈ ಹಿನ್ನಲೆಯಲ್ಲಿ ಮುಂದಿನ ದಿನಗಳಲ್ಲಿ ಅದಾಲತ್ ಮಾದರಿಯಲ್ಲಿ ಆಯಾ ಜಿಲ್ಲೆಗಳಲ್ಲಿ ಆಯೋಗ ಕಲಾಪ ನಡೆಸುವ ಮೂಲಕ ಇಲಾಖೆ ಅಧಿಕಾರಿಗಳಿಗೆ ಮತ್ತು ಅರ್ಜಿದಾರರಿಗೆ ಅನುಕೂಲ ಮಾಡಿಕೊಡಲು ಉದ್ದೇಶಿಸಲಾಗಿದೆ ಎಂದರು.
ಮಾಹಿತಿ ಹಕ್ಕು ಆಯೋಗದ ಆಯುಕ್ತ ರಾಜಶೇಖರ್ ಮಾತನಾಡಿ ಮಾಹಿತಿ ಹಕ್ಕು ಕಾಯಿದೆ ಎರಡನೇ ಸ್ವಾತಂತ್ರ್ಯ ಹಕ್ಕು ಎಂದರೆ ತಪ್ಪಾಗಲಾರದು. ಕಾಯಿದೆ ಬರುವುದಕ್ಕೂ ಮುಂಚೆ ಜನಸಾಮಾನ್ಯರಿಗೆ ಅಫಿಸಿಯಲ್ ಸೀಕ್ರೆಸಿ ಕಾಯಿದೆ ಅನ್ವಯ ಕೇಳಿದ ಮಾಹಿತಿಯನ್ನು ನೀಡಲಾಗುತ್ತಿರಲಿಲ್ಲ. ಮಾಹಿತಿ ಹಕ್ಕು ಕಾಯಿದೆ ಬಂದಾಗಿನಿಂದ ಆಡಳಿತದಲ್ಲಿ ಪಾರದರ್ಶಕತೆ ಹೆಚ್ಚಳ ಮತ್ತು ಆಡಳಿತದಲ್ಲಿ ಶಿಸ್ತು ಮೂಡಿದೆ. ಆದರೆ ಕೆಲವರು ಮಾಹಿತಿ ಕೇಳುವುದನ್ನು ಕಸುಬನ್ನಾಗಿ ಮಾಡಿಕೊಂಡಿದ್ದಾರೆ. ಮಾಹಿತಿ ಹಕ್ಕು ಕಾಯಿದೆಯಡಿ ಪಡೆಯುವ ದಾಖಲೆಗಳು ಸಾರ್ವಜನಿಕ ಹಿತಾಸಕ್ತಿ ಮತ್ತು ಸ್ವ ಹಿತಾಸಕ್ತಿಯಿಂದ ಕೂಡಿರಬೇಕು, ಆದರೆ ಅವ್ಯವಹಾರಕ್ಕೆ ಅವಕಾಶ ಮಾಡಿಕೊಡಬಾರದು ಎಂದರು.
ಮಾಹಿತಿ ಹಕ್ಕು ಕಾಯಿದೆಯಡಿ ಕೇವಲ 30 ಸೆಕ್ಷನ್‍ಗಳಿದ್ದು ಅಧಿಕಾರಿಗಳು ಮತ್ತು ಸಿಬ್ಬಂದಿಯವರು ಸರಿಯಾಗಿ ಅರ್ಥಮಾಡಿಕೊಂಡು ಅನುಷ್ಟಾನ ಮಾಡಬೇಕು. ಯಾವುದೇ ವೇದಿಕೆ, ಸಮಿತಿ ಎಂಬ ಹೆಸರಿನಲ್ಲಿ ಕಾಯಿದೆ ಹೆಸರು ಇರುವಂತಿಲ್ಲ ಮತ್ತು ಇದರ ಲಾಂಛನವನ್ನು ದುರ್ಬಳಕೆ ಮಾಡಿಕೊಳ್ಳುವಂತಿಲ್ಲ. ಒಂದೇ ಮಾಹಿತಿಗೆ ಸಂಬಂಧಿಸಿದಂತೆ ಎರಡನೇ ಮೇಲ್ಮನವಿ ಪ್ರಾಧಿಕಾರಕ್ಕೆ ಹಲವು ಅರ್ಜಿ ಸಲ್ಲಿಸಿದವರನ್ನು ಕಪ್ಪುಪಟ್ಟಿಗೆ ಸೇರಿಸಲು ಆಯೋಗ ಪರಿಶೀಲಿಸಲಿದೆ. ಅವರು ಮಾಹಿತಿ ಹಕ್ಕು ಕಾಯಿದೆಯನ್ನು ದುರ್ಬಳಕೆ ಮಾಡಿಕೊಂಡಲ್ಲಿ ಅಂತಹ ಅರ್ಜಿದಾರರನ್ನು ನಿರ್ಬಂಧಿಸಲಾಗುತ್ತದೆ. ಇಲ್ಲಿಯವರೆಗೆ ಆಯೋಗ 26 ಅರ್ಜಿದಾರರ ಮೇಲೆ ನಿರ್ಬಂಧ ಹಾಕಲಾಗಿದೆ ಎಂದರು.
ಮಾಹಿತಿ ಹಕ್ಕು ಕಾಯಿದೆಯಡಿ ಮಾಹಿತಿ ನೀಡದ ಅಧಿಕಾರಿಗಳಿಗೆ ದಿನಕ್ಕೆ 250 ರಂತೆ ಗರಿಷ್ಠ ರೂ.25000 ಗಳವರೆಗೆ ದಂಡ ವಿಧಿಸಲು ಮತ್ತು ಅರ್ಜಿದಾರರಿಗೆ ಪರಿಹಾರ ನೀಡಲು ಗರಿಷ್ಠ 1 ಲಕ್ಷದವರೆಗೆ ಮತ್ತು ಶಿಸ್ತುಕ್ರಮಕ್ಕೆ ಶಿಫಾರಸು ಮಾಡುವ ಅಧಿಕಾರ ಆಯೋಗಕ್ಕಿದೆ ಎಂದರು.
ಆರ್.ಟಿ.ಐ ಪ್ರಗತಿಯನ್ನು ಕೆಡಿಪಿ ಸಭೆಯಲ್ಲಿ ಪರಿಶೀಲಿಸಲು ಸರ್ಕಾರಕ್ಕೆ ಆಯೋಗ ಶಿಫಾರಸು ಮಾಡಿದೆ. ಮತ್ತು ಈಗಿರುವ ಅರ್ಜಿ ಶುಲ್ಕ, ಮಾಹಿತಿ ಶುಲ್ಕ, ಸಿಡಿಯಲ್ಲಿ ಹಾಕಿ ನೀಡುವ, ಭೌತಿಕವಾಗಿ ಪರಿಶೀಲಿಸುವ ಅವಧಿಯ ಶುಲ್ಕ ಪರಿಶೀಲನೆಗೆ ವಿಜಯಭಾಸ್ಕರ್ ಆಡಳಿತ ಸುಧಾರಣಾ ಆಯೋಗದಲ್ಲಿ ಪ್ರಸ್ತಾಪಿಸಲಾಗಿದೆ ಎಂದರು.
ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಮಾತನಾಡಿ ಜಿಲ್ಲೆಯಲ್ಲಿ ವಿವಿಧ ಇಲಾಖೆಗಳಿಗೆ ಸಲ್ಲಿಕೆಯಾಗುವ ಮಾಹಿತಿ ಹಕ್ಕು ಕಾಯಿದೆ ಅರ್ಜಿಗಳ ಸಂಖ್ಯೆಯನ್ನು ಕಡಿಮೆ ಮಾಡುವುದು ನಮ್ಮ ಗುರಿಯಾಗಿದ್ದು ಎರಡನೇ ಮೇಲ್ಮನವಿ ಅರ್ಜಿಗಳ ಸಂಖ್ಯೆಯನ್ನು ಗಣನೀಯವಾಗಿ ತಗ್ಗಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ದಾವಣಗೆರೆ ಜಿಲ್ಲೆಗೆ ಸಂಬಂಧಿಸಿದ ಎರಡನೇ ಮೇಲ್ಮನವಿ ಅರ್ಜಿಗಳ ವಿವರ; ಕಂದಾಯ ಇಲಾಖೆ 161, ಪಂಚಾಯತ್ ರಾಜ್ ಇಲಾಖೆ 90, ನಗರಾಭಿವೃದ್ದಿ ಇಲಾಖೆ 75, ಜಲಸಂಪನ್ಮೂಲ 53, ಲೋಕೋಪಯೋಗಿ ಇಲಾಖೆ 35, ಶಿಕ್ಷಣ ಇಲಾಖೆ 31, ಸಮಾಜ ಕಲ್ಯಾಣ 30, ಗೃಹ ಇಲಾಖೆ 13, ಅಲ್ಪಸಂಖ್ಯಾತರ ಇಲಾಖೆ 11, ಅರಣ್ಯ ಇಲಾಖೆ 11, ಆರೋಗ್ಯ 10, ಇಂಧನ 9, ಸಹಕಾರ 8, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ 7, ಕೈಗಾರಿಕೆ ಮತ್ತು ವಾಣಿಜ್ಯ 4, ಕೃಷಿ 2, ಸಾರಿಗೆ 2, ವಸತಿ 2 ಸೇರಿ ಇತರೆ 5 ಅರ್ಜಿಗಳು ಬಾಕಿ ಇವೆ.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಿತ್ತೆ ಮಾಧವ ವಿಠ್ಠಲರಾವ್ ಉಪಸ್ಥಿತರಿದ್ದರು.
key words: Right to Information Commission, Model court, session, resolve pending cases
SUMMARY:
Right to Information Commission: Model court session in November to resolve pending cases
RTI The Right to Information Commission has taken steps to significantly reduce the number of second appeal cases filed under the RTI Act and by November, the cases will be disposed of on the Adalat model by holding sessions at the district level.
Right to Information Commission Commissioners Rudranna Hartikote and Rajashekar jointly spoke after a training workshop organized for Public Information Officers and First Appellate Authorities in the district.