ಮೈಸೂರು,ಜುಲೈ,19,2025 (www.justkannada.in): ರಾಜ್ಯದ ಪ್ರತಿಷ್ಠಿತ ಪೊಲೀಸ್ ಅಧಿಕಾರಿಗಳ ತರಬೇತಿ ಸಂಸ್ಥೆ ಮೈಸೂರಿನ ಕರ್ನಾಟಕ ಪೊಲೀಸ್ ಅಕಾಡೆಮಿ, ಮತ್ತು ಮೈಸೂರಿನ ಪೋಸ್ಟಲ್‍ತರಬೇತಿ ಸಂಸ್ಥೆ ನಡುವೆ ತರಬೇತಿ, ಸಂಪನ್ಮೂಲ ವ್ಯಕ್ತಿಗಳ ವಿನಿಮಯ ಹಾಗೂ ನವೀನ ಮಾದರಿಯ ಕೋರ್ಸ್ ಗಳನ್ನು ಅಭಿವೃದ್ಧಿಪಡಿಸುವ ವಿಷಯಗಳಿಗೆ ಸಂಬಂಧಿಸಿದಂತೆ ಒಪ್ಪಂದದ ಜ್ಞಾಪಕ ಪಾತ್ರ ಮತ್ತು ಒಡಂಬಡಿಕೆಗೆ ಇಂದು ಸಹಿ ಹಾಕಿ ವಿನಿಮಯ ಮಾಡಿಕೊಳ್ಳಲಾಯಿತು.
ಈ ಒಡಂಬಡಿಕೆಯ ಭಾಗವಾಗಿ, ಎರಡೂ ಸಂಸ್ಥೆಗಳಲ್ಲಿ ತರಬೇತಿ ಪಡೆಯುವ ಅಧಿಕಾರಿಗಳು, ಎರಡೂ ಇಲಾಖೆಗಳಿಗೆ ಸಂಬಂಧಪಟ್ಟ ವಿಷಯಗಳಿಗೆ ಸಂಬಂಧಿಸಿದಂತೆ ಹೆಚ್ಚಿನಜ್ಞಾನ ಪಡೆಯುವುದು ಅಲ್ಲದೇ, ಸದರಿ ವಿಷಯಗಳಲ್ಲಾಗುವ ಸಂಶೋಧನೆ ಮತ್ತುಅಭಿವೃದ್ಧಿ ಕುರಿತಂತೆ ಹೆಚ್ಚಿನ ಮಾಹಿತಿ ಹಾಗೂ ಜ್ಞಾನ ಪಡೆದು ತಮ್ಮ ಕಾರ್ಯ ವ್ಯಾಪ್ತಿಯಲ್ಲಿ ಅಳವಡಿಸಿಕೊಳ್ಳಬಹುದಾಗಿದೆ. ಅಂಚೆ ಇಲಾಖೆಯ ಅಧಿಕಾರಿಗಳು, ಪೊಲೀಸ್ ಇಲಾಖೆಗೆ ಸಂಬಂದಿಸಿದ ಸೈಬರ್ ಭದ್ರತೆ, ಬೆರಳಚ್ಚು ಹಾಗೂ ಮಾದಕ ವಸ್ತುಗಳ ಸಾಗಾಣಿಕೆ ವಿಷಯಗಳ ಬಗ್ಗೆ ತಿಳಿದುಕೊಂಡರೆ, ಪೊಲೀಸ್ ಇಲಾಖೆಯ ಅಧಿಕಾರಿಗಳು , ಅಂಚೆ ಇಲಾಖೆಗೆ ಸಂಬಂಧಿಸಿದ ಸಣ್ಣ ಹೂಡಿಕೆ ಅವಕಾಶಗಳು, ಹಣಕಾಸು ನಿರ್ವಹಣೆ ಹಾಗೂ ಮಾಹಿತಿ ಮತ್ತುತಂತ್ರಜ್ಞಾನ ವಿಷಯಗಳ ಮೇಲೆ ಪರಿಣಿತಿ ಹೊಂದಬಹುದಾಗಿದೆ.
ಈ ಒಪ್ಪಂದ ಜ್ಞಾಪಕ ಪತ್ರ ಹಾಗೂ ಒಡಂಬಡಿಕೆ ಸಹಿ ಮತ್ತು ವಿನಿಮಯ ಕಾರ್ಯಕ್ರಮದಲ್ಲಿ ಮಾತನಾಡಿದ ಅಂಚೆ ತರಬೇತಿ ಸಂಸ್ಥೆ, ಮೈಸೂರಿನ ನಿರ್ದೇಶಕ ಡಾ.ಆಶಿಶ್ ಸಿಂಗ್ ಠಾಕೂರ್ ಅವರು ‘ಅಂಚೆ ತರಬೇತಿ ಸಂಸ್ಥೆ, ಮೈಸೂರಿಗೆ ಇದೊಂದು ಹೆಮ್ಮೆಯ ಕ್ಷಣವಾಗಿದ್ದು, ಎರಡೂ ಸಂಸ್ಥೆಗಳ ಅಧಿಕಾರಿಗಳಿಗೆ ಜ್ಞಾನ ಮತ್ತುಅನುಭವದ ವಿನಿಮಯವಾಗಿ, ಅವರ ಕಾರ್ಯಕ್ಷೇತ್ರದಲ್ಲಿ ಮೌಲ್ಯವರ್ಧನೆಯಾಗಲಿದೆ’ ಎಂದರು.
ಕರ್ನಾಟಕ ಪೊಲೀಸ್ ಅಕಾಡೆಮಿ, ಮೈಸೂರಿನ ನಿರ್ದೇಶಕ ಚೆನ್ನಬಸವಣ್ಣ ಎಸ್‍ಎಲ್, ಅವರು ಮಾತನಾಡಿ, ‘ಈ ದಿನ ಕರ್ನಾಟಕ ಪೊಲೀಸ್ ಅಕಾಡೆಮಿ ಹಾಗೂ ಪೊಲೀಸ್ ಇಲಾಖೆಗೆ ಅವಿಸ್ಮರಣೀಯ ದಿನ. ಈ ಎರಡು ಐತಿಹಾಸಿಕ ಸಂಸ್ಥೆಗಳ ನಡುವಿನ ಒಡಂಬಡಿಕೆ ಬಹಳ ವಿಶೇಷವಾದದ್ದು. ಈ ಎರಡು ಸಂಸ್ಥೆಗಳಲ್ಲಿ ತರಬೇತಿ ಪಡೆಯುವ ಮುಂದಿನ ಪೀಳಿಗೆಯ ಅಧಿಕಾರಿಗಳಿಗೆ ಹಾಗೂ ಅವರ ಮೂಲಕ ಸಮಾಜಕ್ಕೆ ಉತ್ತಮ ಸೇವೆ ಕೊಡುವುದಕ್ಕೆ ಈ ಒಡಂಬಡಿಕೆ ನಾಂದಿಯಾಗಲಿದೆ. ಎರಡೂ ಸಂಸ್ಥೆಗಳು ತಮ್ಮಲ್ಲಿರುವ ಉತ್ತಮ ಅಭ್ಯಾಸಗಳ್ಳನು ಹಂಚಿಕೊಳ್ಳುವುದರ ಮೂಲಕ ಪರಸ್ಪರ ಅಭಿವೃದ್ಧಿಗೆ ಶ್ರಮಿಸಲಿವೆ’ ಎಂದರು.
ಒಡಂಬಡಿಕೆ ಸಹಿ ಮತ್ತು ವಿನಿಮಯ ಕಾರ್ಯಕ್ರಮದಲ್ಲಿ, ಕರ್ನಾಟಕ ಪೊಲೀಸ್ ಅಕಾಡೆಮಿಯ ವತಿಯಿಂದ ಅಕಾಡೆಮಿಯ ಸಹಾಯಕ ನಿರ್ದೇಶಕರುಗಳಾದ ರೇಣುಕಾರಾಧ್ಯ ಎಚ್‍ಎಸ್, ಸುದರ್ಶನ ಎನ್ ಮತ್ತು. ವೆಂಕಟೇಶ್. ಎಸ್, ಹಾಗೂ ಕ್ರಾಂತಿರಾಜ್ ಒಡೆಯರ್ ಎಂ, ಅಂಚೆ ತರಬೇತಿ ಸಂಸ್ಥೆ ವತಿಯಿಂದ, ಸಹಾಯಕ ನಿರ್ದೇಶಕರುಗಳಾದ, ಬಾಲರಾಜ್, ಶ್ರೀಧರ್, ಶ್ರದ್ಧಾ ವಿ ಗೋಕರ್ಣ, ಮಂಜುನಾಥರಾವ್. ಕೆ ಹಾಗೂ ಇತರೆ ಸಿಬ್ಬಂದಿವರ್ಗದವರು ಹಾಜರಿದ್ದರು.
Key words: Mysore, Signature, Karnataka Police Academy, Postal Training Institute