ಮೈಸೂರು,ಜುಲೈ,18,2025 (www.justkannada.in): ಬರ್ತ್ ಡೇ ಸೆಲೆಬ್ರೇಷನ್ ಗೆ ಕರೆಸಿಕೊಂಡು ಸ್ನೇಹಿತರೇ ಚಾಕು ಇರಿದ ಪರಿಣಾಮ ತೀವ್ರ ರಕ್ತಸ್ರಾವದಿಂದ ನರಳಾಡುತ್ತಿದ್ದ ಯುವಕ ಸಾವನ್ನಪ್ಪಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕು ಕೆಂಪಿಸಿದ್ದನಹುಂಡಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕಿರಣ್ ಎಂಬ ಯುವಕನೇ ಸ್ನೇಹಿತರಿಂದ ಚಾಕು ಇರಿತಕ್ಕೊಳಗಾಗಿ ಮೃತಪಟ್ಟಿರುವುದು.
ಸ್ನೇಹಿತ ರವಿಚಂದ್ರ ಎಂಬವನ ಬರ್ತ್ ಡೇಗೆ ಕಿರಣ್ ತೆರಳಿದ್ದನು. ಈ ವೇಳೆ ಯುವತಿ ವಿಚಾರಕ್ಕೆ ವಸಂತ, ಮಧು, ಅಭಿ, ಸಿದ್ದರಾಜು ಎಂಬವವರು ಕಿರಣ್ ನನ್ನು ಮನಸೋ ಇಚ್ಛೆ ಥಳಿಸಿ, ಚಾಕುವಿನಿಂದ ಇರಿದಿದ್ದಾರೆ. ಬರ್ತ್ ಡೇ ಬಾಯ್ ರವಿಚಂದ್ರನಿಂದಲೂ ಹಲ್ಲೆಯಾಗಿದೆ. ಮನೆಗೆ ವಾಪಸ್ ಹೋಗಲು ಬಿಡದೆ ಬೈಕ್ ಗೆ ಡಿಕ್ಕಿ ಹೊಡೆದು ಕೊಲೆಗೆ ಯತ್ನಿಸಿದ್ದು, ಕಿರಣ್ ತಮ್ಮನಿಗೆ ಕರೆ ಮಾಡಲು ಮುಂದಾದಾಗ ಮತ್ತಷ್ಟು ಕ್ರೂರತ್ವ ತೋರಿದ್ದು, ಮೊಬೈಲ್ ಕಸಿದುಕೊಂಡು ದೊಣ್ಣೆಯಿಂದ ಹಲ್ಲೆ ನಡೆಸಿದ್ದಾರೆ.
ತಕ್ಷಣ ಕಿರಣ್ ನನ್ನ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆಸ್ಪತ್ರೆಯ ಐಸಿಯುನಲ್ಲಿ ಸಾವು- ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಕಿರಣ್ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾನೆ.
Key words: friends, Murder, Boy, stabbed, Mysore