ಮೈಸೂರು,ಜುಲೈ,10,2025 (www.justkannada.in): ರಾಜ್ಯದಲ್ಲಿ ಕಳೆದ ನಾಲ್ಕು ದಿನಗಳಿಂದ ಮಹಾನಗರ ಪಾಲಿಕೆಗಳ ನೌಕರರು, ಪೌರಕಾರ್ಮಿಕರು, ಯುಜಿಡಿ ಕಾರ್ಮಿಕರು ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಹೀಗಾಗಿ ಸಿಎಂ ಸಿದ್ದರಾಮಯ್ಯನವರೇ ಪಾಲಿಕೆ ಕಾರ್ಮಿಕರತ್ತ ಗಮನಹರಿಸಿ ಅವರ ಬೇಡಿಕೆಗಳನ್ನ ಈಡೇರಿಸಿ ಎಂದು ಮೈಸೂರು ಮಹಾನಗರ ಪಾಲಿಕೆ ಮಾಜಿ ಮೇಯರ್ ಶಿವಕುಮಾರ್ ಆಗ್ರಹಿಸಿದರು.
ಮೈಸೂರಿನಲ್ಲಿ ಪಾಲಿಕೆ ಕಾರ್ಮಿಕರು ನಡೆಸುತ್ತಿರುವ ಪ್ರತಿಭಟನೆಗೆ ಬೆಂಬಲಿಸಿ ಸ್ವತಃ ಪಾಲ್ಗೊಂಡು ಮಾತನಾಡಿದ ಮಾಜಿ ಮೇಯರ್ ಶಿವಕುಮಾರ್ ಅವರು, ಪಾಲಿಕೆ ನೌಕರರು ಮತ್ತು ಯುಜಿಡಿ ಕಾರ್ಮಿಕರು ಮೂಲಭೂತ ಸೌಕರ್ಯಗಳನ್ನ ಕೊಡವಂತಹ ಸಂಸ್ಥೆಯ ನೌಕರರಾಗಿದ್ದಾರೆ. ಯುಜಿಡಿ ನೌಕರರು ಪೌರಕಾರ್ಮಿಕರು ಎಲ್ಲರೂ ಕೂಡ ಬೇಡಿಕೆಗಳನ್ನ ಈಡೇರಿಸಲು ಆಗ್ರಹಿಸಿ ಧರಣಿ ಕುಳಿತಿದ್ದಾರೆ. ವಿಶೇಷವಾಗಿ ಯುಜಿಡಿ ನೌಕರರು ಸೇವೆ ಖಾಯಂಗೆ ಒತ್ತಾಯಿಸಿದ್ದಾರೆ. ಹೀಗಾಗಿ ಸಿಎಂ ಇವರತ್ತ ಗಮನ ಹರಿಸಬೇಕು ಎಂದರು.
ಸಾಮಾಜಿಕ ನ್ಯಾಯ ಕೊಡುತ್ತೇವೆ. ಡಾ.ಬಿ.ಆರ್ ಅಂಬೇಡ್ಕರ್ ಮತ್ತು ಸಂವಿಧಾನದ ಆಶಯದಂತೆ ಆಡಳಿತ ನಡೆಸುತ್ತೇವೆ ಎಂದು ಅಧಿಕಾರಕ್ಕೆ ಬಂದಂತಹ ಕಾಂಗ್ರೆಸ್, ಸಿಎಂ ಸಿದ್ದರಾಮಯ್ಯ ಈಗ ಕಾರ್ಮಿಕರ ಬಗ್ಗೆ ತಾತ್ಸಾರ ಮನೋಭಾವನೆ ತೋರುತ್ತಿದ್ದಾರೆ. ಅಂಬೇಡ್ಕರ್ ಅವರು ಕಾರ್ಮಿಕರ ಬಗ್ಗೆ ಹಲವಾರು ಧ್ವನಿಗಳನ್ನ ಎತ್ತಿದವರು. ಹಿಂದೆ ಕಾರ್ಮಿಕರು 16ರಿಂದ 17 ಗಂಟೆ ಕೆಲಸ ಮಾಡುತ್ತಿದ್ದರು. ಅದನ್ನ 8 ಗಂಟೆಗೆ ಇಳಿಸಿದವರು ಅಂಬೇಡ್ಕರ್ ರವರು. ಕಾರ್ಮಿಕರಿಗೆ ರಜೆ ಘೋಷಣೆ ಮಾಡಿದವರು ಅಂಬೇಡ್ಕರ್ ಅವರು . ಕಾರ್ಮಿಕರಿಗೆ ವಿಶೇಷ ಸವಲತ್ತುಗಳನ್ನ ಕೊಡಬೇಕು ಎಂದವರು ಅಂಬೇಡ್ಕರ್ ಅವರು. ಹೀಗೆ ಅಂಬೇಡ್ಕರ್ ಅವರು ಕಾರ್ಮಿಕರ ಬಗ್ಗೆ ಕಾಳಜಿ ಇಟ್ಟುಕೊಂಡಿದ್ದರು.
ಆದರೆ ಅಂಬೇಡ್ಕರ್ ಮತ್ತು ಸಂವಿಧಾನದ ಆಶಯದಂತೆ ಕೆಲಸ ಮಾಡುತ್ತೇವೆ ಎನ್ನುವ ಕಾಂಗ್ರೆಸ್ ನವರು ಈ ನೌಕರರ ಬಗ್ಗೆ ಗಮನ ಹರಿಸಬೇಕಲ್ಲವೇ..? ಅದನ್ನ ಬಿಟ್ಟು ಸಿಎಂ ಸಿದ್ದರಾಮಯ್ಯ ಕುರ್ಚಿ ಉಳಿಸಿಕೊಳ್ಳಲು ದೆಹಲಿಯಲ್ಲಿ ಹೋರಾಟ ಮಾಡುತ್ತಿದ್ದಾರೆ. ನಾನೇ ಸಿಎಂ ಅಂತಾ ಹೇಳಿ ತಿರುಗಾಡುತ್ತಿದ್ದಾರೆ. ಅವರೇ ಐದು ವರ್ಷ ಸಿಎಂ ಆಗಲಿ. ಆದರೆ ನಾಲ್ಕು ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವ ನೌಕರರ ಕಡೆ ಗಮನ ಹರಿಸಿ ಅವರ ಬೇಡಿಕೆಗಳನ್ನ ಈಡೇರಿಸಲಿ ಎಂದು ಶಿವಕುಮಾರ್ ಒತ್ತಾಯಿಸಿದರು.
Key words: Mysore city corporation, Employees, Protest, Former Mayor, Shivakumar