ಪೊಲೀಸ್ ಇಲಾಖೆಯಿಂದ ‘ಕನ್ನಡ’ ಕಡೆಗಣನೆ: ಸೂಚನಾ ಫಲಕಕ್ಕೆ ಮಸಿ ಬಳಿದು ಪ್ರತಿಭಟನೆ

ಮೈಸೂರು,ಜುಲೈ,10,2025 (www.justkannada.in): ಪೊಲೀಸ್ ಇಲಾಖೆ ಇಂಗ್ಲಿಷ್ ನಲ್ಲಿ ಮಾತ್ರ ರಸ್ತೆ ಸೂಚನಾ ಫಲಕಗಳನ್ನ ಹಾಕಿ ಈ ಮೂಲಕ ಕನ್ನಡವನ್ನ ಕಡಗಣಿಸಿದೆ ಎಂದು ಆರೋಪಿಸಿ ಸೂಚನಾ ಫಲಕಕ್ಕೆ ಮಸಿ ಬಳಿದು ಕನ್ನಡ ಕ್ರಿಯಾ ಸಮಿತಿಯ ಕಾರ್ಯರ್ತರು ಪ್ರತಿಭಟನೆ ನಡೆಸಿದರು.

ಮೈಸೂರಿನಲ್ಲಿ ಕನ್ನಡ ಕ್ರಿಯಾ ಸಮಿತಿಯ ಕಾರ್ಯಕರ್ತರಾದ  ಸ.ರ ಸುದರ್ಶನ ಮತ್ತು ಅರವಿಂದ ಶರ್ಮ  ಅವರು ರಸ್ತೆ ಸೂಚನಾ ಫಲಕಕ್ಕೆ  ಮಸಿ ಬಳಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ಹೊಸದಾಗಿ ಹುಣಸೂರು ರಸ್ತೆಯಲ್ಲಿ ಪೊಲೀಸರು ಇಂಗ್ಲಿಷ್ ನಲ್ಲಿ ಮಾತ್ರ ಇರುವ ರಸ್ತೆ ಸೂಚನಾ ಫಲಕವನ್ನು ಹಾಕಿರುವುದು ಖಂಡನೀಯ. ಸರಕಾರಿ ಆಡಳಿತದಲ್ಲಿ ಕನ್ನಡವನ್ನು ಬಳಸಬೇಕೆಂದು ನೂರಾರು ಆದೇಶಗಳು ಬಂದಿವೆ.  ಆದಾಗಿಯೂ ಪೊಲೀಸ್ ಇಲಾಖೆ ಅದನ್ನು ಕಡೆಗಣಿಸುತ್ತಾ ಬಂದಿದೆ.

ಈ ಹಿಂದೆ ನಗರದ ಹಲವಾರು ಕಡೆ ರಸ್ತೆ ಸೂಚನಾ ಫಲಕಗಳಲ್ಲಿ ಕನ್ನಡವನ್ನು ಕೈಬಿಟ್ಟ ಬಗ್ಗೆ ಕನ್ನಡ ಕ್ರಿಯಾ ಸಮಿತಿ ಆಕ್ಷೇಪಿಸಿತ್ತು. ಆಗಿನ ಪೊಲೀಸ್ ಕಮಿಷನರ್ ಅದನ್ನು ಬದಲಿಸುವ ಆಶ್ವಾಸನೆ ಕೊಟ್ಟಿದ್ದರು. ಆದರೆ ಈವರೆಗೆ ಇಂಗ್ಲಿಷ್ ನಲ್ಲಿ ಮಾತ್ರ ಇರುವ ಸೂಚನಾ ಫಲಕಗಳು ನಗರದ ವಿವಿಧ ಕಡೆಗಳಲ್ಲಿ ರಾರಾಜಿಸುತ್ತಿವೆ. ಪೊಲೀಸ್ ವಾಹನಗಳ ಮೇಲೆ, ಮುಂದೆ ಇಂಗ್ಲಿಷ್ ಈಗಲೂ ರಾರಾಜಿಸುತ್ತಿದೆ. ಮುಖ್ಯಮಂತ್ರಿಗಳ ಹಿಂದೆ ಮುಂದೆ ಬರುವ ಪೊಲೀಸ್ ವಾಹನಗಳಲ್ಲೂ ಇಂಗ್ಲೀಷ್ ನಲ್ಲೇ ನಾಮ ಫಲಕ ಹಾಕಲಾಗಿದೆ.

ಈ ನಾಮಫಲಕಕ್ಕೆ ಕಾರಣರಾದ ಪೊಲೀಸ್ ಅಧಿಕಾರಿಗಳ ಮೇಲೆ ಹೊಸದಾಗಿ ಬಂದಿರುವ ಆದೇಶದಂತೆ ಶಿಸ್ತಿನ ಕ್ರಮ ಕೈಗೊಂಡು, ಸಾರ್ವಜನಿಕರಿಗೆ ಅದನ್ನು ತಿಳಿಯಪಡಿಸಬೇಕು ಮೈಸೂರು ಪೊಲೀಸ್ ಕಮಿಷನರ್ ಗೆ ಸ.ರ ಸುದರ್ಶನ ಮತ್ತು ಅರವಿಂದ ಶರ್ಮ  ಆಗ್ರಹಿಸಿದ್ದಾರೆ.

ಹಾಗೆಯೇ  ನಾಮಫಲಕಕ್ಕೆ ಮಸಿ ಬಳಿದಿರುವುದು ತಪ್ಪಾಗಿದ್ದರೆ ‘ನಮ್ಮನ್ನು ಬಂಧಿಸಿ, ಕನ್ನಡಕ್ಕಾಗಿ ಜೈಲಿಗೆ ಹೋಗುತ್ತೇವೆ’ ಎಂದು  ತಿಳಿಸಿದ್ದಾರೆ.vtu

Key words: Police Department, Kannada, Protest, Mysore