ಮೈಸೂರು,ಜುಲೈ,7,2025 (www.justkannada.in): ನಾಲ್ಕು ಸಾವಿರಕ್ಕೂ ಹೆಚ್ಚು ಶಾಲೆಗಳಲ್ಲಿ ಇಂಗ್ಲೀಷ್ ಮಾಧ್ಯಮ ತೆರೆಯಲು ಮುಂದಾಗಿರುವ ರಾಜ್ಯ ಸರ್ಕಾರದ ದ್ವಂದ್ವ ನೀತಿಯನ್ನು ಕನ್ನಡ ಕ್ರಿಯಾ ಸಮಿತಿ ಖಂಡಿಸಿದೆ.
ಈ ಕುರಿತು ಸಿಎಂ ಸಿದ್ದರಾಮಯ್ಯಗೆ ಕನ್ನಡ ಕ್ರಿಯಾ ಸಮಿತಿ ಅಧ್ಯಕ್ಷ ಮ. ಗು ಸದಾನಂದಯ್ಯ, ಪ್ರಧಾನ ಕಾರ್ಯದರ್ಶಿ ಸ.ರ ಸುದರ್ಶನ ಪತ್ರ ಬರೆದು ಖಂಡನೆ ವ್ಯಕ್ತಪಡಿಸಿದ್ದಾರೆ.
ನೀವು ರಾಜ್ಯದಲ್ಲಿ ಒಂದರಿಂದ ಐದನೇ ತರಗತಿವರೆಗೆ ಮಾತೃಭಾಷೆ ಅಥವಾ ರಾಜ್ಯ ಭಾಷೆಯನ್ನು ಎಲ್ಲಾ ಶಾಲೆಗಳಲ್ಲಿ, ಸರ್ಕಾರಿ ಹಾಗೂ ಖಾಸಗಿ ಎರಡರಲ್ಲೂ, ಕಡ್ಡಾಯ ಶಿಕ್ಷಣ ಮಾಧ್ಯಮವಾಗಿ ವಿಧಿಸುವ ಉಚಿತ ಕಡ್ಡಾಯ ಶಿಕ್ಷಣ ಮಸೂದೆ 2015ಕ್ಕೆ ಒಪ್ಪಿಗೆ ಕೊಡಬೇಕೆಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಖುದ್ದಾಗಿ ಒತ್ತಾಯಿಸಿದ ನಿಮ್ಮ ನಡೆಯನ್ನು ಕನ್ನಡ ಕ್ರಿಯಾ ಸಮಿತಿ ಸ್ವಾಗತಿಸಿತ್ತು.
ಆದರೆ ಅದರ ಬೆನ್ನಲ್ಲೇ ನಿಮ್ಮ ಸರ್ಕಾರದ ಶಿಕ್ಷಣ ಇಲಾಖೆ ಈ ವರ್ಷ ನಾಲ್ಕು ಸಾವಿರಕ್ಕೂ ಹೆಚ್ಚು ಶಾಲೆಗಳಲ್ಲಿ ಇಂಗ್ಲೀಷ್ ಮಾಧ್ಯಮ ತೆರೆಯುವುದಾಗಿ ಪ್ರಕಟಣೆ ಕೊಟ್ಟಿರುವುದನ್ನು ನೋಡಿ ಆಘಾತವಾಯಿತು. ಮಾತೃಭಾಷೆ ಶಿಕ್ಷಣ ಮಾಧ್ಯಮದಲ್ಲಿ ನಂಬಿಕೆಯನ್ನು ಪ್ರತಿಪಾದಿಸುತ್ತಾ ಬಂದಿರುವ ನಿಮ್ಮ ನೇತೃತ್ವದ ಸರ್ಕಾರದ ಈ ದ್ವಂದ್ವ ನೀತಿಯನ್ನು ಕನ್ನಡ ಕ್ರಿಯಾ ಸಮಿತಿ ಖಂಡಿಸುತ್ತದೆ.
ಉಚಿತ ಕಡ್ಡಾಯ ಶಿಕ್ಷಣ ಮಸೂದೆ (2015) ಈ ಹಿಂದೆ ನಿಮ್ಮ ಸರ್ಕಾರದಿಂದಲೇ ಮಂಡಿತವಾದ, ಸರ್ವ ಪಕ್ಷಗಳಿಂದ ಬೆಂಬಲ ಪಡೆದ ಮಸೂದೆ. “ಮಗುವನ್ನು ಸಾಕಿ ಸಲಹುವ ತಾಯಿಯಾಗಿ, ಗರ್ಭಪಾತ ಮಾಡಿಸುವ ತಾಯಿಯಾಗಬೇಡಿ” ಎಂದು ಆಗ್ರಹಿಸುತ್ತೇವೆ.
ಈ ಕೂಡಲೇ ಈ ಶೈಕ್ಷಣಿಕ ವರ್ಷದಿಂದಲೇ ನಾಲ್ಕು ಸಾವಿರ ಸರ್ಕಾರಿ ಶಾಲೆಗಳನ್ನು ತೆರೆಯುವ ಆದೇಶವನ್ನು ತಡೆಹಿಡಿಯಿರಿ. ಉಚಿತ ಕಡ್ಡಾಯ ಶಿಕ್ಷಣ ಮಸೂದೆಗೆ ರಾಷ್ಟ್ರಪತಿಗಳ ಒಪ್ಪಿಗೆ ದೊರೆಯುವವರಿಗೆ ಯಾವುದೇ ಸರ್ಕಾರಿ ಶಾಲೆಯಲ್ಲಿ ಆಂಗ್ಲ ಮಾಧ್ಯಮ ಶಾಲೆಗಳನ್ನು ತೆರೆಯುವುದನ್ನು ಕೈಬಿಡಿ. ಹೊಸದಾಗಿ ರಾಜ್ಯ ಹಾಗೂ ಸಿಬಿಎಸ್ ಸಿ ಪಠ್ಯಕ್ರಮದ ಖಾಸಗಿ ಆಂಗ್ಲ ಮಾಧ್ಯಮ ಶಾಲೆಗಳಿಗೂ ಅನುಮತಿ ಕೊಡಬೇಡಿ ಎಂದು ಒತ್ತಾಯಿಸುತ್ತೇವೆ ಎಂದು ಪತ್ರದಲ್ಲಿ ಆಗ್ರಹಿಸಿದ್ದಾರೆ.
ವಿಧಾನಸಭೆಯಲ್ಲಿ ಉಚಿತ ಕಡ್ಡಾಯ ಶಿಕ್ಷಣ ಮಸೂದೆಗೆ ಕೇಂದ್ರ ಸರ್ಕಾರ ಆಕ್ಷೇಪಣೆ ಎತ್ತಿದ್ದರೆ, ಅದನ್ನು ಮುಚ್ಚಿಟ್ಟು, ‘ತಿರಸ್ಕರಿಸಿದೆ’ ಎಂದು ತಪ್ಪು ಮಾಹಿತಿ ನೀಡಿದ, ವಿಧಾನಸಭೆಯಲ್ಲಿ ಅಂಗೀಕರಿಸಿದ್ದ ಉಚಿತ ಕಡ್ಡಾಯ ಶಿಕ್ಷಣ ಮಸೂದೆಗೆ ವಿರುದ್ಧವಾಗಿ “ಶಿಕ್ಷಣ ಮಾಧ್ಯಮ ಪೋಷಕರ ಆಯ್ಕೆಗೆ ಬಿಟ್ಟಿದ್ದು” ಎಂಬ ಹೇಳಿಕೆ ಕೊಟ್ಟ ಶಿಕ್ಷಣ ಸಚಿವರಿಂದ ರಾಜೀನಾಮೆ ಪಡೆದು “ಕನ್ನಡ ಉಳಿಸಿ”ಎಂದು ಒತ್ತಾಯಿಸಿದ್ದಾರೆ. ಸರಕಾರ ಆಂಗ್ಲ ಮಾಧ್ಯಮ ತರಗತಿಗಳನ್ನು ಪ್ರಾರಂಭಿಸಬಾರದೆಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ್ ಬಿಳಿಮಲೆ ಅವರು ಹೇಳಿರುವುದನ್ನು ಕನ್ನಡ ಕ್ರಿಯಾ ಸಮಿತಿ ಸ್ವಾಗತಿಸುತ್ತದೆ.
ಸರ್ಕಾರದ ನೀತಿಯನ್ನು ಕನ್ನಡ ಕ್ರಿಯಾ ಸಮಿತಿ ಖಂಡಿಸುವುದಲ್ಲದೆ, ಹೋರಾಟವನ್ನು ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದೆ.
Key words: State Government. Dual Policy, Kannada kriya samithi, condemns