ಕಲಬುರಗಿ, ಜುಲೈ,4,2025 (www.justkannada.in): ಕಲಬುರಗಿ ನಗರ ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಹಸಿರು ಹೆಜ್ಜೆ ಕಾರ್ಯಕ್ರಮಮದ ಅಡಿಯಲ್ಲಿ ಸಸಿಗಳ ನೆಡುವ ಮೂಲಕ ಹಸಿರು ನಿರ್ಮಾಣಕ್ಕೆ ಕ್ರಮ ವಹಿಸಲಾಗುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಕಲಬುರಗಿ ಜಿಲ್ಲಾಡಳಿತ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ, ಹಸಿರುಪಥ, ಕಲ್ಯಾಣ ಪಥ ಹಾಗೂ ಪ್ರಗತಿಪಥ ಕಾರ್ಯಕ್ರಮಗಳ ಮೂಲಕ ಸಸಿ ನೆಡುವುದು, ಕಲ್ಯಾಣ ಕರ್ನಾಟಕ ಭಾಗದ ಹಾಗೂ ರಾಜ್ಯದ ಗ್ರಾಮೀಣ ಭಾಗದ ರಸ್ತೆಗಳ ಹಾಗೂ ಮೂಲಭೂತ ಅಭಿವೃದ್ದಿಗೆ ಕ್ರಮವಹಿಸಲಾಗುತ್ತಿದೆ. ಐದು ಹಂತದಲ್ಲಿ ಕೈಗೆತ್ತಿಕೊಳ್ಳುತ್ತಿರುವ ಈ ಯೋಜನೆಗೆ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ದಿ ಮಂಡಳಿ, ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ, ಅರಣ್ಯ ಇಲಾಖೆ, ಕುಡಾ, ಕಲಬುರಗಿ ಕಾರ್ಪೋರೇಷನ್ ಹಾಗೂ ಇತರೆ ಸಂಬಂಧಿಸಿದ ಇಲಾಖೆಗಳು ಕೈಜೋಡಿಸಲಿವೆ ಎಂದರು.
ರಾಜ್ಯದಲ್ಲಿ ಶೇ 22% ಹಾಗೂ ಕಲ್ಯಾಣ ಕರ್ನಾಟಕ ಭಾಗದದಲ್ಲಿ ಶೇ 2% ಅರಣ್ಯ ಪ್ರದೇಶವಿದೆ. ಅದಕ್ಕಾಗಿ ಅರಣ್ಯ ಇಲಾಖೆ ಹೆಚ್ಚು ಅರಣ್ಯೀಕರಣ ಮಾಡಲು ಸಸಿ ನೆಡುವ ‘ ಹಸಿರುಹೆಜ್ಜೆ ‘ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಕಲಬುರಗಿಯಲ್ಲಿ ನಾಳೆ ಉದ್ಘಾಟಿಸಲಿದ್ದು, ಅರಣ್ಯ ಸಚಿವ ಈಶ್ವರ ಖಂಡ್ರೆ ಉಪಸ್ಥಿತರಿರಲಿದ್ದಾರೆ.
ವನಮಹೋತ್ಸವ ಯೋಜನೆಯಡಿಯಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಸುಮಾರು ರೂ 53.55 ಕೋಟಿ ವೆಚ್ಚದಲ್ಲಿ ಅಂದಾಜು 1,848 ಕಿಮಿ ಉದ್ದ ರಸ್ತೆಯಡಿಯಲ್ಲಿ ಸುಮಾರು 9,000 ಹೆಕ್ಟೇರ ಪ್ರದೇಶ ವ್ಯಾಪ್ತಿಯಲ್ಲಿ ಸಸಿ ನೆಡಲಾಗುವುದು ಎಂದರು.
ಹಸಿರು ಪಥ
‘ ಹಸಿರುಪಥ ‘ ಯೋಜನೆಯಡಿಯಲ್ಲಿ ರಾಜ್ಯಾದ್ಯಂತ ನರೇಗಾ ಯೋಜನೆಯಡಿಯಲ್ಲಿ ಸುಮಾರು 5,000 ಕಿಮಿ ರಸ್ತೆ ಬದಿ ಸಸಿ ನೆಡಲಾಗುವುದು. ಈ ಬಗ್ಗೆ ಆ್ಯಪ್ ಕೂಡಾ ಮಾಡಲಾಗಿದ್ದು, ಜಿಯೋ ಟ್ಯಾಗ್ ಮತ್ತು ಟ್ರ್ಯಾಕಿಂಗ್ ಕೂಡಾ ಮಾಡಲಾಗುತ್ತಿದೆ. ನಂತರ ಸ್ಯಾಟಲೈಟ್ ಮೂಲಕ ಚಿತ್ರಣ ವೀಕ್ಷಿಸಬಹುದು ಎಂದರು.
ಮನೆಗೊಂದು ಮರ
ಕಲಬುರಗಿ ನಗರದಲ್ಲಿ ‘ ಮನಗೊಂದು ಮರ ‘ ಯೋಜನೆಯಡಿಯಲ್ಲಿ ರೂ 60 ಲಕ್ಷ ವೆಚ್ಚದಲ್ಲಿ 37,100 ಸಸಿಗಳನ್ನು ಮನಮನೆಗಳಿಗೆ ವಿತರಿಸಲಾಗುತ್ತಿದೆ ಎಂದರು.
ಪ್ರಗತಿಪಥ
‘ ಪ್ರಗತಿಪಥ’ ಯೋಜನೆಯಡಿಯಲ್ಲಿ ಸುಮಾರು 8,150 ಕಿಮೀ ಉದ್ದದ ರಾಜ್ಯದಲ್ಲಿರುವ ಗ್ರಾಮೀಣ ಭಾಗದ ರಸ್ತೆಗಳನ್ನು ಅಂದಾಜು ರೂ 7,000 ಕೋಟಿ ವೆಚ್ಚದಲ್ಲಿ ಅಭಿವೃದ್ದಿಪಡಿಸಲಾಗುತ್ತಿದೆ. ಸುಮಾರು ರೂ 5,000 ವೆಚ್ಚದಲ್ಲಿ ಕಲ್ಯಾಣ ಕರ್ನಾಟಕ ಭಾಗದ ರಸ್ತೆ ಅಭಿವೃದ್ದಿಪಡಿಸಲಾಗುತ್ತಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ವಿವರಿಸಿದರು.
ಉದ್ಯಾನವನಗಳ ಹಾಗೂ ಕೆರೆಗಳ ಪುನರುಜ್ಜೀವನ
ಕಲಬುರಗಿ ನಗರದ 30 ಉದ್ಯಾನವನ ಪುನರುಜ್ಜೀವನ ಮಾಡಲು ಕ್ರಮವಹಿಸಲಾಗುತ್ತಿದೆ ಎಂದು ಹೇಳಿದ ಸಚಿವ ಪ್ರಿಯಾಂಕ್ ಖರ್ಗೆ, ಕೆಕೆಆರ್ ಡಿಬಿ, ಕಾರ್ಪೋರೇಷನ್ ಹಾಗೂ ಜಿಡಿಎ ಜಂಟಿಯಾಗಿ ಕೈಗೆತ್ತಿಕೊಳ್ಳಲಾಗುತ್ತಿರುವ ಈ ಕಾರ್ಯಕ್ರಮದಡಿಯಲ್ಲಿ ರೂ 38.03 ಕೋಟಿ ವೆಚ್ಚದಲ್ಲಿ ನಗರದ ಕೆರೆಗಳ ಹಾಗೂ ಕಲ್ಯಾಣಿಗಳ ಪುನರುಜ್ಜೀವನ ಮಾಡಲಾಗುತ್ತಿದೆ.
ಮೊದಲ ಹಂತದಲ್ಲಿ ರೂ 3 ಕೋಟಿ ವೆಚ್ಚದಲ್ಲಿ ಅಪ್ಪನ ಕೆರೆ ಅಭಿವೃದ್ದಿ, ರೂ 5 ಕೋಟಿ ವೆಚ್ಚದಲ್ಲಿ ಖಾಜಾಕೋಟನೂರು ಕೆರೆ, ರೂ 10 ಕೋಟಿ ವೆಚ್ಚದಲ್ಲಿ ಕಪನೂರಿನ ಕಲ್ಯಾಣಿ ಅಭಿವೃದ್ದಿ, ರೂ 19 ಕೋಟಿ ವೆಚ್ಚದಲ್ಲಿ ಬಹಮನಿ ಕೋಟೆ ಅಭಿವೃದ್ದಿ ಹಾಗೂ ಪ್ರವಾಸಿ ತಾಣ ನಿರ್ಮಾಣ ಮಾಡುವುದು ಈ ಯೋಜನೆಯಲ್ಲಿ ಸೇರಿವೆ. ಜೊತೆಗೆ ರೂ 30 ಕೋಟಿ ವೆಚ್ಚದಲ್ಲಿ ಕಲಬುರಗಿ ನಗರದ 25 ಜಂಕ್ಷನ್ ಗಳನ್ನು ಹಾಗೂ ಸರ್ಕಲ್ ಗಳನ್ನು ರೂ 30 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ ಎಂದರು.
ಕೇವಲ ಸಸಿಗಳನ್ನು ನೆಡುವುದು ಮಾತ್ರವಲ್ಲ ಅವುಗಳ ಪೋಷಣೆ ಹಾಗೂ ಸಂರಕ್ಷಣೆ ಮಾಡಲು ಕೂಡಾ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದ ಸಚಿವರು, ಸ್ವಚ್ಛ, ಸುಂದರ ಹಾಗೂ ಪರಿಸರ ಸ್ನೇಹಿ ಹಸಿರು ಕಲಬುರಗಿ ನಿರ್ಮಾಣ ಮಾಡುವ ಗುರಿ ಹೊಂದಲಾಗಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.
Key words: Five-phase, plan, eco-friendly, green Kalaburagi, Minister, Priyank Kharge