ವಚನ ಪಿತಾಮಹ ಡಾ.ಫ.ಗು ಹಳಕಟ್ಟಿ ಅವರ ಜನ್ಮ ದಿನಾಚರಣೆ, ಗೌರವ ನಮನ

ಬೆಂಗಳೂರು ಗ್ರಾಮಾಂತರ ಜುಲೈ, 2,2025 (www.justkannada.in): ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಡಾ.ಫ.ಗು ಹಳಕಟ್ಟಿಯವರ  ಜನ್ಮ ದಿನದ ಪ್ರಯುಕ್ತ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆಯನ್ನು ದೇವನಹಳ್ಳಿ ತಾಲ್ಲೂಕಿನ ಬೀರಸಂದ್ರ ಗ್ರಾಮದ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಚರಿಸಲಾಯಿತು.

ಜಿಲ್ಲಾ ಅಪರ ಜಿಲ್ಲಾಧಿಕಾರಿ ಸೈಯಿದಾ ಆಯಿಷಾ ಅವರು ಡಾ.ಫ.ಗು ಹಳಕಟ್ಟಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಗೌರವ ನಮನ ಸಲ್ಲಿಸಿದರು.

ವಚನ ಪಿತಾಮಹ ಎಂದು ಪ್ರಖ್ಯಾತರಾದ ಡಾ.ಫ.ಗು ಹಳಕಟ್ಟಿಯವರು 1880 ಜುಲೈ 2 ರಂದು ಧಾರವಾಡದಲ್ಲಿ ಜನಿಸಿದರು. ಇವರ ಪೂರ್ಣ ಹೆಸರು ಫಕೀರಪ್ಪ ಗುರುಬಸಪ್ಪ ಹಳಕಟ್ಟಿ. ಹಳಕಟ್ಟಿ ಎಂಬುದು ಇವರ ಮನೆತನದ ಹೆಸರು. ತಂದೆ ಗುರುಬಸಪ್ಪ ಹಳಕಟ್ಟಿ ತಾಯಿ ದಾನಾದೇವಿ. ತಂದೆ ವೃತ್ತಿಯಲ್ಲಿ ಶಿಕ್ಷಕರಾಗಿದ್ದರೂ ಪ್ರವೃತ್ತಿಯಲ್ಲಿ ಸಾಹಿತಿಗಳಾಗಿದ್ದರು.  ಹಾಗಾಗಿ ಇವರಿಗೆ ಸಾಹಿತ್ಯವೆಂಬುದು ರಕ್ತಗತವಾಗಿ ಒಲಿದು ಬಂದಿತ್ತು.

ಇವರು ಉನ್ನತ ಶಿಕ್ಷಣಕ್ಕಾಗಿ ಮುಂಬೈಗೆ ತೆರಳಿದ ಸಂದರ್ಭದಲ್ಲಿ ಅಲ್ಲಿನ ಗುಜರಾತಿ ಮತ್ತು ಮರಾಠಿ ಭಾಷೆಯ ಮೇಲೆ ಅವರಿಗಿದ್ದ ಭಾಷಾಭಿಮಾನವನ್ನು ಕಂಡು,  ಕನ್ನಡದವರಲ್ಲಿ ತಮ್ಮ ಭಾಷೆಯ ಬಗ್ಗೆ ಇದ್ದ ನಿರಭಿಮಾನ ಇವರ ಮನಸ್ಸಿನ ಮೇಲೆ ತುಂಬಾ ಪರಿಣಾಮ ಬೀರಿತು. ಕನ್ನಡಿಗರು ಎಚ್ಚರಗೊಳ್ಳದಿದ್ದರೆ ಕನ್ನಡ ಉದ್ಧಾರವಾಗದೆಂದು ಆ ಕ್ಷಣವೇ ಕನ್ನಡ ನಾಡು, ನುಡಿ, ನೆಲ, ಜಲ, ಸಾಹಿತ್ಯ, ಸಂಸ್ಕೃತಿಗಾಗಿ ದುಡಿಯಲು ವಿದ್ಯಾರ್ಥಿ ದಿಸೆಯಲ್ಲೇ ದೃಢಸಂಕಲ್ಪ ಮಾಡಿದರು. ಅದೇ ಸಂದರ್ಭದಲ್ಲಿ ಕರ್ನಾಟಕದ ಏಕೀಕರಣಕ್ಕಾಗಿ ಆಗಲೇ ಹೋರಾಟದಲ್ಲಿ ನಿರತರಾಗಿದ್ದ ಆಲೂರು ವೆಂಕಟ ರಾವ್  ಇವರಿಗೆ ಸ್ಫೂರ್ತಿಯಾಗಿದ್ದರು.

ಇವರು ವೃತ್ತಿಯಲ್ಲಿ ವಕೀಲರು, ಇದರ ಜೊತೆಗೆ ಸಂಶೋಧಕರು ಹಾಗೂ ವಚನ ಸಾಹಿತ್ಯದಲ್ಲಿ ಅತೀವ ಆಸಕ್ತಿ ಹೊಂದಿದ್ದರು. ಪತ್ರಿಕೋದ್ಯಮದಲ್ಲೂ ಬಹಳ ಆಸಕ್ತಿ ಹೊಂದಿದ್ದ ಹಳಕಟ್ಟಿಯವರು 1926ರಲ್ಲಿ ವಚನ ಸಾಹಿತ್ಯದ ಸಂಶೋಧನೆಗಾಗಿ  ‘ ಶಿವಾನುಭವ ‘ ಪತ್ರಿಕೆ ಪ್ರಾರಂಭಿಸಿದರು. ಹಾಗೆಯೇ 1927ರಲ್ಲಿ ‘ನವ ಕರ್ನಾಟಕ’ ಎಂಬ ವಾರಪತ್ರಿಕೆಯನ್ನೂ ಸಹ ಆರಂಭಿಸಿದ್ದರು. ಈ ಎರಡೂ ಪತ್ರಿಕೆಗಳ ಸಂಪಾದಕ ಮತ್ತು ಪ್ರಕಾಶಕ ಹಾಗೂ ಮುದ್ರಕರಾಗಿ ಹಳಕಟ್ಟಿಯವರ ಪತ್ರಿಕಾರಂಗದ ಸಾಧನೆ ಮಹತ್ತರವಾದುದು.

ಇವರಿಗೆ 1956ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಪ್ರತಿಷ್ಠಿತ ಗೌರವ ಡಾಕ್ಟರೇಟ್ ಮತ್ತು ಭಾರತ ಸರ್ಕಾರ ರಾವ್ ಬಹಾದ್ದೂರ ಪದವಿ ನೀಡಿ ಗೌರವಿಸಿತು. ಇವರ ಸೇವೆಗೆ ಸಂದ ಗೌರವ ಪುರಸ್ಕಾರಗಳು. ಹಾಗೇ 1926ರಲ್ಲಿ ಬಳ್ಳಾರಿಯಲ್ಲಿ ನಡೆದ 12ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅಧ್ಯಕ್ಷರಾಗಿದ್ದರು.

ಡಾ.ಫ.ಗು ಹಳಕಟ್ಟಿ ಅವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಸಹಾಯಕ ರಾಜೀವ್ ಸುಲೋಚನ್ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಸ್ಥಿತರಿದ್ದರು.vtu

Key words: Dr. Fa. Gu Halakatti, Birth anniversary, tributes