ಮೈಸೂರು,ಜೂನ್,10,2025 (www.justkannada.in):  ಬಾಲ ರಾಮನ ಶಿಲೆ ಸಿಕ್ಕ ಸ್ಥಳದ ವಿವಾದ ಮತ್ತೆ ಮುನ್ನೆಲೆಗೆ ಬಂದಿದೆ. ಮೈಸೂರು ತಾಲ್ಲೂಕಿನ ಹಾರೋಹಳ್ಳಿಯಲ್ಲಿ ಬಾಲರಾಮನ ಶಿಲೆ ಸಿಕ್ಕ ಸ್ಥಳದಲ್ಲಿ ದಕ್ಷಿಣದ ಅಯೋಧ್ಯೆ ನಿರ್ಮಾಣಕ್ಕೆ ಅಡ್ಡಿಪಡಿಸಿದ್ದ ಪ್ರಗತಿಪರ ಚಿಂತಕರು ಇದೀಗ ದಕ್ಷಿಣದ ಬುದ್ದಗಯ ನಿರ್ಮಾಣ ಮಾಡಲು ಮುಂದಾಗಿದ್ದಾರೆ.
ಹಾರೋಹಳ್ಳಿಯಲ್ಲಿ ಬಾಲರಾಮನ ಶಿಲೆ ಸಿಕ್ಕ ಸ್ಥಳದಲ್ಲಿ ಇತ್ತೀಚಿಗೆ ದಕ್ಷಿಣ ಅಯೋಧ್ಯೆ ಮಾಡುತ್ತೇವೆ ಎಂದು ರಾಮ ಮಂದಿರ ನಿರ್ಮಾಣಕ್ಕೆ ಭೂಮಿಪೂಜೆಗೆ ಹೋಗಿದ್ದವರಿಗೆ ಕೆಲ ಪ್ರಗತಿಪರ ಚಿಂತಕರು ಅಡ್ಡಿ ಮಾಡಿ ಗಲಾಟೆ ಮಾಡಿ ವಾಪಸ್ ಕಳುಹಿಸಿದ್ದರು. ಇದೀಗ ಕೆಲ ಪ್ರಗತಿಪರ ಚಿಂತಕರು ದಕ್ಷಿಣ ಅಯೋಧ್ಯೆ ಬದಲು ದಕ್ಷಿಣ ಬುದ್ದಗಯಕ್ಕೆ ಚಿಂತನೆ ನಡೆಸಿದ್ದು ಈ ಹಿನ್ನೆಲೆಯಲ್ಲಿ ನಾಳೆ ಬುದ್ದ ಪೂರ್ಣಿಮಾ ಅಂಗವಾಗಿ ಬೋದಿ ವೃಕ್ಷ ನೆಟ್ಟು ಶಂಕುಸ್ಥಾಪನೆ ನೆರವೇರಿಸಲು ಮುಂದಾಗಿದ್ದಾರೆ. ಬುದ್ದಗಯಕ್ಕೆ ಈಗಾಗಲೇ ಜಮೀನಿನ ಮಾಲೀಕ ರಾಮದಾಸ್ ರಿಂದ ಬುದ್ಧಗಯ ಸ್ಮಾರಕ ನಿರ್ಮಾಣ ಸಮಿತಿ ಒಪ್ಪಿಗೆ ಪಡೆದಿದ್ದು, ಈ ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಪ್ರಗತಿಪರ ಚಿಂತಕರು ಭಾಗಿಯಾಗಲಿದ್ದಾರೆ.
ಈ ಕುರಿತು ಮಾತನಾಡಿರುವ ಮಾಜಿ ಮೇಯರ್ ಪುರುಷೋತ್ತಮ್, ನಾಳಿನ ಕಾರ್ಯಕ್ರಮದಲ್ಲಿ ಶಾಸಕ ಜಿ.ಟಿ ದೇವೇಗೌಡ ಕೂಡ ಭಾಗಿಯಾಗಲಿದ್ದಾರೆ. ಉತ್ತರ ಭಾರತ ಅಯೋಧ್ಯೆಯಿಂದ ಜಾತಿ, ಧರ್ಮದ ಬಗ್ಗೆ ವೈಷಮ್ಯ ಹೆಚ್ಚಾಗುತ್ತಿದೆ. ನಮಗೆ ಶಾಂತಿ ಬೇಕು ಅಶಾಂತಿ ಹುಟ್ಟುಹಾಕುವ ರಾಮ ಮಂದಿರ ಬೇಡ. ನಮಗೆ ಬುದ್ದನ ಚಿಂತನೆಗಳು ಬೇಕು. ಇಡೀ ವಿಶ್ವಕ್ಕೆ ಬುದ್ದನ ಚಿಂತನೆಗಳು ಮಾದರಿಯಾಗಿವೆ. ಹಾಗಾಗಿ ನಾವು ನಾಳೆ ದಕ್ಷಿಣ ಬುದ್ದ ಗಯಕ್ಕೆ ಶಂಕುಸ್ಥಾಪನೆ ಮಾಡುವ ಮೂಲಕ ಜನ ಜಾಗೃತಿ ಸಮಾವೇಶ ಹಮ್ಮಿಕೊಂಡಿದ್ದೇವೆ. ಸಮಾವೇಶಕ್ಕೆ ಜಾತ್ಯಾತೀತವಾಗಿ ಪ್ರಗತಿಪರ ಚಿಂತಕರು, ಸಾಹಿತಿಗಳು ಭಾಗವಹಿಸಲಿದ್ದಾರೆ. ಅಲ್ಲಿ ಬುದ್ದನ ಜ್ಞಾನ ಕೇಂದ್ರ, ಮಂದಿರ ನಿರ್ಮಾಣ ಮಾಡೇ ಮಾಡುತ್ತೇವೆ ಎಂದು ಮಾಜಿ ಮೇಯರ್ ಪುರುಷೋತ್ತಮ್  ತಿಳಿಸಿದ್ದಾರೆ.
Key words: Controversy, Bala Rama, Mysore, thinkers, South Bodhgaya
 
            
