ವಿಪಕ್ಷಗಳ ದನಿ ಅಡಗಿಸುವ ಪ್ರಯತ್ನ: ಮಾನನಷ್ಟ ಮೊಕದ್ದಮೆಗೆ ಮುಂದಾದ ಸರ್ಕಾರದ ವಿರುದ್ದ ಆರ್.ಅಶೋಕ್ ಕಿಡಿ

ಬೆಂಗಳೂರು,ಮೇ,26,2025 (www.justkannada.in): ರಾಜ್ಯ ಸರ್ಕಾರದ ವೈಪಲ್ಯಗಳ ಬಗ್ಗೆ ಚಾರ್ಜ್ ಶೀಟ್ ಬಿಡುಗಡೆ ಮಾಡಿದ ರಾಜ್ಯ ಬಿಜೆಪಿ ವಿರುದ್ದ ಕಾಂಗ್ರೆಸ್ ಸರ್ಕಾರ ಮಾನನಷ್ಟ ಮೊಕದ್ದಮೆ ಹೂಡಲು ಮುಂದಾಗಿದ್ದು ಈ ಹಿನ್ನೆಲೆಯಲ್ಲಿ ವಿಪಕ್ಷ ನಾಯಕ ಆರ್.ಅಶೋಕ್ ಕಿಡಿಕಾರಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಆರ್.ಅಶೋಕ್, 40% ಸರ್ಕಾರ ಎಂಬ ಹಸಿ ಸುಳ್ಳು, ಅಪಪ್ರಚಾರದ ಮೂಲಕ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಈಗ ಜವಾಬ್ದಾರಿಯುತ ವಿಪಕ್ಷವಾಗಿ ಸರ್ಕಾರದ ಭ್ರಷ್ಟಾಚಾರ, ವೈಫಲ್ಯಗಳ ಬಗ್ಗೆ ದನಿ ಎತ್ತುತ್ತಿರುವ ಬಿಜೆಪಿ ಪಕ್ಷದ ಮೇಲೆ ಸುಳ್ಳು ಕೇಸು ದಾಖಲಿಸುವ ಮೂಲಕ ವಿಪಕ್ಷಗಳ ದನಿ ಅಡಗಿಸುವ ಪ್ರಯತ್ನ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಸಿಎಂ ಸಿದ್ದರಾಮಯ್ಯನವರೇ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರೇ, ನಿಮ್ಮ ಗೊಡ್ಡು ಬೆದರಿಕೆಗಳಿಗೆ, ನಟ್ಟು-ಬೋಲ್ಟು ಟೈಟು ಮಾಡುವ ಧಮ್ಕಿಗಳಿಗೆ ನಾವು ಜಗ್ಗುವುದು ಇಲ್ಲ, ಬಗ್ಗುವುದೂ ಇಲ್ಲ. ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ, ವೈಫಲ್ಯ, ಎಡವಟ್ಟುಗಳನ್ನು ಜನರಿಗೆ ತಲುಪಿಸುವ ನಮ್ಮ ಸಾಂವಿಧಾನಿಕ ದತ್ತ ಕರ್ತವ್ಯ ಎಗ್ಗಿಲ್ಲದೆ ಮುಂದುವರೆಯಲಿದೆ ಎಂದು ಆರ್.ಅಶೋಕ್ ಹರಿಹಾಯ್ದಿದ್ದಾರೆ.

Key words: R. Ashok, government, defamation case