ಪ್ರೀತಿಸಿ ಮನೆ ಬಿಟ್ಟು ಓಡಿ ಹೋದ ಮಗಳು: ಮನನೊಂದು ಒಂದೇ ಕುಟುಂಬದ ಮೂವರು ಆತ್ಮಹತ್ಯೆ

ಮೈಸೂರು, ಮೇ, 24,2025 (www.justkannada.in): ಹಿರಿಯ ಮಗಳು ಪ್ರೀತಿಸಿ ಪ್ರಿಯಕರನ ಜೊತೆ ಮನೆಬಿಟ್ಟು ಓಡಿ ಹೋದ ಹಿನ್ನೆಲೆಯಲ್ಲಿ ಮನನೊಂದು ಒಂದೇ ಕುಟುಂಬದ ಮೂವರು ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ.

ಹೆಚ್​.ಡಿ.ಕೋಟೆ ತಾಲೂಕಿನ ಬೂದನೂರು ಕೆರೆಗೆ ಹಾರಿ ಒಂದೇ ಕುಟಂಬದ ಮೂವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಹದೇವಸ್ವಾಮಿ, ಪತ್ನಿ ಮಂಜುಳಾ, ಪುತ್ರಿ ಹರ್ಷಿತಾ ಆತ್ಮಹತ್ಯೆಗೆ ಶರಣಾದವರು. ಮಹದೇವಸ್ವಾಮಿ ಹಿರಿಯ ಪುತ್ರಿ ಅರ್ಪಿತಾ ಯುವಕನೊಂದಿಗೆ  ಮನೆ ಬಿಟ್ಟು ಹೋಗಿದ್ದಳು. ಇದರಿಂದ ತಂದೆ ಮಹದೇವಸ್ವಾಮಿ, ತಾಯಿ ಮಂಜುಳಾ ಮತ್ತು ಸಹೋದರಿ ಹರ್ಷಿತಾ ಮನನೊಂದಿದ್ದರು.

ಈ ಮಧ್ಯೆ ಕೆರೆಗೆ ಹಗ್ಗ ಕಟ್ಟಿ ಕೆರೆಗೆ ಹಾರಿ ಮೂವರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ.  ಮೂವರ ಚಪ್ಪಲಿಗಳು ಮತ್ತು ಬೈಕ್​​ ಬೂದನೂರು ಕೆರೆ ಏರಿ ಮೇಲೆ ಪತ್ತೆಯಾಗಿದೆ. ಮೂವರೂ ಕೆರೆಗೆ ಹಾರಿ ಮೃತಪಟ್ಟಿರುವ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ವಿಚಾರ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಮತ್ತು ಅಗ್ನಿಶಾಮಕ ದಳ ಸಿಬ್ಬಂದಿ ಶೋಧಕಾರ್ಯ ನಡೆಸಿದಾಗ, ಮೂವರ ಶವ ಕೆರೆಯಲ್ಲಿ ಪತ್ತೆಯಾಗಿದೆ.

ಅಗ್ನಿಶಾಮಕ ದಳದ ಸಿಬ್ಬಂದಿ ಶವಗಳನ್ನ ಹೊರ ತೆಗೆದಿದ್ದು, ಮೃತದೇಹವನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ಈ ಕುರಿತು ಹೆಚ್​ ಡಿ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words:  daughter, love, same family, three, suicides