ಮೈಸೂರು,ಮೇ,20,2025 (www.justkannada.in): ಸಹಕಾರ ಇಲಾಖೆಯಲ್ಲಿ ನಡೆದಿರುವ ಅಕ್ರಮದಲ್ಲಿ ಭಾಗಿಯಾಗಿರುವ ನೌಕರರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ಸಹಕಾರ ಇಲಾಖೆ ಸಚಿವ ಕೆ ಎನ್ ರಾಜಣ್ಣ ಹೇಳಿದರು.
ಮೈಸೂರಿನಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಕೆ.ಎನ್ ರಾಜಣ್ಣ, ಸಹಕಾರ ಇಲಾಖೆಯಲ್ಲಿ ಅಕ್ರಮಗಳು ನಡೆದಿರುವ ಬಗ್ಗೆ ವ್ಯಾಪಕ ದೂರುಗಳು ಕೇಳಿ ಬಂದಿವೆ. ಮೈಸೂರು ಜಿಲ್ಲೆಯ ಸಹಕಾರ ಸಂಘಗಳಲ್ಲೂ ಅಕ್ರಮ ನಡೆದಿರುವ ಕುರಿತು ದೂರುಗಳು ದಾಖಲಾಗಿವೆ. ಹಲವಾರು ಪ್ರಕರಣಗಳು ನ್ಯಾಯಾಲಯದ ಮೆಟ್ಟಿಲೇರಿವೆ. ಅಲ್ಲದೇ ನೇರವಾಗಿ ಕ್ರಮ ಕೈಗೊಳ್ಳಲು ಕಾನೂನಿನ ತೊಡಕುಗಳಿವೆ. ಹಾಗಾಗಿ ಸಹಕಾರ ಇಲಾಖೆಯಲ್ಲಿ ತಿದ್ದುಪಡಿ ಮಾಡಲು ಮುಂದಾಗಿದ್ದೇವೆ. ತಿದ್ದುಪಡಿ ಪ್ರಕ್ರಿಯೆ ಮುಗಿಯುತ್ತಿದ್ದಂತೆ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಅಕ್ರಮದಲ್ಲಿ ಭಾಗಿಯಾದವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುತ್ತೇವೆ ಎಂದು ತಿಳಿಸಿದರು.
ರಾಜಕಾಲುವೆ ವಿಚಾರದಲ್ಲಿ ನಿರ್ದಾಕ್ಷಿಣ್ಯ ನಿರ್ಧಾರ
ಬೆಂಗಳೂರಿನಲ್ಲಿ ಭಾರಿ ಮಳೆ ಅವಾಂತರ ವಿಚಾರ ಕುರಿತು ಪ್ರತಿಕ್ರಿಯಿಸಿದ ಕೆ.ಎನ್ ರಾಜಣ್ಣ, ನಮ್ಮ ಸರ್ಕಾರದ ಅದರಲ್ಲೂ ಡಿಕೆ ಶಿವಕುಮಾರ್ ಬೆಂಗಳೂರು ಉಸ್ತುವಾರಿಯಾದ ನಂತರ ರಾಜಕಾಲುವೆ ವಿಚಾರದಲ್ಲಿ ನಿರ್ದಾಕ್ಷಿಣ್ಯ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. ರಾಜಕಾಲುವೆ ಒತ್ತುವರಿಯನ್ನು ಮಳೆ ಬಂದ ಸಮಯದಲ್ಲಿ ಮಾತ್ರ ತೆರವು ಮಾಡುವುದಕ್ಕೆ ಇದು ಬಿಜೆಪಿ ಸರ್ಕಾರವಲ್ಲ . ಮಳೆ ಬಂದರೂ ಬಾರದೇ ಇದ್ದರೂ ನಿರಂತರವಾಗಿ ರಾಜಕಾಲುವೆ ಒತ್ತುವರಿ ತೆರವು ಕೆಲಸವನ್ನು ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಡಿಕೆ ಶಿವಕುಮಾರ್ ಹೇಳಿಕೆ ಮಾಧ್ಯಮದವರೇ ತಿರುಚಿದ್ದೀರಿ
ಪ್ರತಿ ತಿಂಗಳು ಗೃಹಲಕ್ಷ್ಮಿ ಹಣ ಕೊಡುವುದಿಲ್ಲ ಎನ್ನುವ ಡಿಕೆ ಶಿವಕುಮಾರ್ ಮಾತಿಗೆ ಪ್ರತಿಕ್ರಿಯಿಸಿದ ಕೆ.ಎನ್ ರಾಜಣ್ಣ, ಡಿಕೆ ಶಿವಕುಮಾರ ಅವರ ಹೇಳಿಕೆಯನ್ನು ಮಾಧ್ಯಮದವರು ತಿರುಚಿದ್ದಿರಿ. ಅವರು ಹೇಳಿಕೆಯ ಬಗ್ಗೆ ಸಂಶಯವಿದೆ. ಗೃಹಲಕ್ಷ್ಮಿ ಹಣ ಬಿಡುಗಡೆ ಮಾಡುವ ಸಾಫ್ಟ್ ವೇರ್ ಬದಲಾವಣೆ ಮಾಡಲಾಗುತ್ತಿದೆ. ಅದ್ದರಿಂದ ಹಣ ಸ್ವಲ್ಪ ತಡವಾಗಿದೆ. ಪತ್ರಿ ತಿಂಗಳು ಹಣ ಬರುವಂತೆ ನಮ್ಮ ಸರ್ಕಾರ ಕೆಲಸ ಮಾಡುತ್ತಿದೆ ಎಂದರು.
ಹೈ ಕಮಾಂಡ್ ತೀರ್ಮಾನಕ್ಕೆ ನಾವು ಬದ್ದ
ಕೆಲ ಸಚಿವರಿಗೆ ಕೋಕ್ ಎಂಬ ಶಾಸಕ ತನ್ವೀರ್ ಸೇಠ್ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ಕೆ.ಎನ್ ರಾಜಣ್ಣ, ಸಚಿವರ ಬದಲಾವಣೆ ತೀರ್ಮಾನ ಮಾಡೋದು ಯಾರು? ಶಾಸಕರು ಅವರ ಅಭಿಪ್ರಾಯ ಹೇಳಿದ್ದಾರೆ. ಎಲ್ಲವನ್ನೂ ಪಕ್ಷದ ಹೈ ಕಮಾಂಡ್ ತೀರ್ಮಾನ ಮಾಡುತ್ತೆ. ಪಕ್ಷದ ಅಧ್ಯಕ್ಷರು, ಸಿಎಂ ಸೇರಿದಂತೆ ಏನೇ ಬದಲಾವಣೆ ಇದ್ದರೂ ಕೂಡ ಎಲ್ಲವೂ ಯಾವ ಸಮಯಕ್ಕೆ ಅನ್ನೋದು ಹೈ ಕಮಾಂಡ್ ತೀರ್ಮಾನ ಮಾಡುತ್ತೆ. ಹೈ ಕಮಾಂಡ್ ತೀರ್ಮಾನಕ್ಕೆ ನಾವು ಬದ್ದ ಎಂದು ಹೇಳಿದರು.
Key words: Minister, K. N. Rajanna, Mysore