ಶಿವಮೊಗ್ಗ,ಮೇ,15,2025 (www.justkannada.in): ಆಗುಂಬೆ ಠಾಣಾ ವ್ಯಾಪ್ತಿಯ ಮೂರು ಪ್ರಕರಣಗಳಿಗೆ ಸಂಬಂಧಿಸಿದಂತೆ ಇಂದು ನಕ್ಸಲ್ ನಾಯಕ ಬಿ.ಜಿ. ಕೃಷ್ಣಮೂರ್ತಿ ಶಿವಮೊಗ್ಗ ನ್ಯಾಯಾಲಯಕ್ಕೆ ಹಾಜರಾಗಿದ್ದು ಬಳಿಕ ಜೈಲಿಗೆ ಶಿಫ್ಟ್ ಮಾಡಲಾಗಿದೆ.
ಬಿ.ಜಿ ಕೃಷ್ಣಮೂರ್ತಿಯನ್ನ ಪೊಲೀಸರು ನಿನ್ನೆ ರಾತ್ರಿ ಕೇರಳದಿಂದ ಶಿವಮೊಗ್ಗಕ್ಕೆ ಕರೆ ತಂದಿದ್ದರು. ಇಂದು ಬೆಳಗ್ಗೆ ಶಿವಮೊಗ್ಗ ಜಿಲ್ಲಾ ಸತ್ರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ನಂತರ ವಿಚಾರಣೆ ಮುಗಿಸಿ ನಕ್ಸಲ್ ನಾಯಕ ಬಿ.ಜಿ. ಕೃಷ್ಣಮೂರ್ತಿಯನ್ನು ಶಿವಮೊಗ್ಗ ಜೈಲಿಗೆ ರವಾನಿಸಲಾಗಿದೆ.
2021 ರ ನವೆಂಬರ್ ನಲ್ಲಿ ನಕ್ಸಲ್ ಕೃಷ್ಣಮೂರ್ತಿಯನ್ನ ಕೇರಳ ಪೊಲೀಸರಿಂದ ಬಂಧಿಸಿದ್ದರು. ನಂತರ ಕೇರಳದ ತ್ರಿಶೂರ್ ಜಿಲ್ಲೆಯ ವಿಯೂರ್ ನ ಜೈಲಿನಲ್ಲಿ ಕೃಷ್ಣಮೂರ್ತಿ ಬಂಧಿಯಾಗಿದ್ದು, ಇಂದು ಶಿವಮೊಗ್ಗ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಕೋರ್ಟ್ ಜೂನ್ 16ಕ್ಕೆ ವಿಚಾರಣೆ ಮುಂದೂಡಿಕೆ ಮಾಡಿದೆ.
ಬಿ.ಜಿ ಕೃಷ್ಣಮೂರ್ತಿ ನಕ್ಸಲ್ ಸಂಘಟನೆಯಲ್ಲಿ ಪ್ರಮುಖ ಪಾತ್ರ ವಹಿಸಿಕೊಂಡಿದ್ದು, ಆಗುಂಬೆಯಲ್ಲಿ ಚೆಕ್ ಪೋಸ್ಟ್ ಸುಟ್ಟಿದ್ದ ಪ್ರಕರಣ ಹಾಗೂ ದರೋಡೆ ಪ್ರಕರಣ ಸೇರಿದಂತೆ ಬಸ್ ಸುಟ್ಟಿದ್ದ ಪ್ರಕರಣದ ಪ್ರಮುಖ ಆರೋಪಿಯಾಗಿದ್ದಾರೆ.
ಶಿವಮೊಗ್ಗದಲ್ಲಿ ಬಿ. ಜಿ ಕೃಷ್ಣಮೂರ್ತಿ ಪರ ವಕೀಲ ಶ್ರೀಪಾಲ್ ಮಾತನಾಡಿ, ಆಗುಂಬೆ ಪೊಲೀಸ್ ಠಾಣಾ ವ್ಯಾಪ್ತಿಯ ಮೂರು ಪ್ರಕರಣಗಳ ವಿಚಾರಣೆ ಇತ್ತು. ವಿಚಾರಣೆ ಹಿನ್ನಲೆ ನಿನ್ನೆ ಕೇರಳ ಜೈಲಿನಿಂದ ಬಾಡಿ ವಾರೆಂಟ್ ಮೇಲೆ ಪೊಲೀಸರು ಶಿವಮೊಗ್ಗ ಕರೆತಂದಿದ್ದರು. ವಿಚಾರಣೆಯನ್ನ ಜೂನ್ 16ಕ್ಕೆ ಮುಂದೂಡಲಾಗಿದೆ. ಕೆಲವೊಂದು ಪುಸ್ತಕ ತೆಗೆದುಕೊಂಡು ಹೋಗಲು ಅನುಮತಿ ಕೇಳಿದ್ದಾರೆ. ಪುಸ್ತಕ ತೆಗೆದುಕೊಂಡು ಹೋಗಲು ಶಿವಮೊಗ್ಗ ನ್ಯಾಯಾಧೀಶರು ಅನುಮತಿ ನೀಡಿದ್ದಾರೆ. ಕಾನೂನಿಗೆ ಸಂಬಂಧಿಸಿದ ಹಾಗೂ ಡಾ. ಬಿ. ಆರ್ ಅಂಬೇಡ್ಕರ್ ಕುರಿತ ಪುಸ್ತಕ ಸೇರಿ ಕಾದಂಬರಿ ಪುಸ್ತಕ ತೆಗೆದುಕೊಂಡು ಹೋಗಲು ಅನುಮತಿ ಸಿಕ್ಕಿದೆ. ಮುಂದಿನ ವಿಚಾರಣೆಗೆ ವಿಸಿ ಮೂಲಕ ಭಾಗವಹಿಸಲು ನ್ಯಾಯಾಲಯ ಅನುಮೋದಿಸಿದೆ ಎಂದು ತಿಳಿಸಿದರು.
Key words: Naxal leader, B.G. Krishnamurthy, Shimoga court