ನವದೆಹಲಿ, ಮೇ ,15,2025 (www.justkannada.in): ಅಪರೇಷನ್ ಸಿಂಧೂರ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡುತ್ತಿದ್ದ ಭಾರತೀಯ ಸೇನಾಧಿಕಾರಿ ಕರ್ನಲ್ ಸೋಫಿಯಾ ಖುರೇಷಿ ಅವರ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಮಧ್ಯಪ್ರದೇಶದ ಸಚಿವ ವಿಜಯ್ ಶಾಗೆ ಸುಪ್ರೀಂ ಕೋರ್ಟ್ ಇಂದು ತರಾಟೆಗೆ ತೆಗೆದುಕೊಂಡಿದೆ.
ಕರ್ನಲ್ ಸೋಫಿಯಾ ಖುರೇಷಿ ಅವರ ಬಗ್ಗೆ ವಿವಾದಾತ್ಮಕ ಹೇಳಿಕೆ ಹಿನ್ನೆಲೆ ಸಚಿವ ವಿಜಯ್ ಶಾ ವಿರುದ್ದ ಎಫ್ ಐಆರ್ ದಾಖಲಿಸುವಂತೆ ನಿನ್ನೆ ಮಧ್ಯಪ್ರದೇಶ ಹೈಕೋರ್ಟ್ ಆದೇಶಿಸಿತ್ತು. ಈ ಆದೇಶದ ವಿರುದ್ಧ ವಿಜಯ್ ಶಾ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು.
ಇದೀಗ ಮಧ್ಯಪ್ರದೇಶ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ವಿಜಯ್ ಶಾ ಸಲ್ಲಿಸಿರುವ ಅರ್ಜಿಯನ್ನು ಮೇ 16ರಂದು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಒಪ್ಪಿಕೊಂಡಿದ್ದು ಇದೇ ವೇಳೆಯಲ್ಲಿ ವಿಜಯ್ ಶಾ ವಿರುದ್ದ ಸುಪ್ರೀಂಕೋರ್ಟ್ ಕಿಡಿಕಾರಿದೆ.
ಸುಪ್ರೀಂ ಕೋರ್ಟ್‌ನಲ್ಲಿ ತಮ್ಮ ಅರ್ಜಿಯ ತ್ವರಿತ ವಿಚಾರಣೆಗೆ ವಿಜಯ್ ಶಾ ಒತ್ತಾಯಿಸಿದ್ದರು. ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳನ್ನು ಪ್ರಾರಂಭಿಸಲು ಹೈಕೋರ್ಟ್ ನೀಡಿದ ನಿರ್ದೇಶನಕ್ಕೆ ತಡೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿತು.
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರು ಸಚಿವರ ಹೇಳಿಕೆಗಳನ್ನು ಸ್ವೀಕಾರಾರ್ಹವಲ್ಲ, ಅದು ಸಂವೇದನಾರಹಿತ ಹೇಳಿಕೆ. ಸಾಂವಿಧಾನಿಕ ಹುದ್ದೆಗಳನ್ನು ಅಲಂಕರಿಸುವ ವ್ಯಕ್ತಿಗಳು ಭಾಷಣದಲ್ಲಿ ಸಂಯಮವನ್ನು ಹೊಂದಿರಬೇಕು. “ನೀವು ಯಾವ ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದೀರಿ? ನೀವು ಸ್ವಲ್ಪ ಸಂವೇದನಾಶೀಲತೆಯನ್ನು ತೋರಿಸಬೇಕು. ಹೋಗಿ ಹೈಕೋರ್ಟ್‌ನಲ್ಲಿ ಕ್ಷಮೆಯಾಚಿಸಿ. ಸಚಿವರು ಜವಾಬ್ದಾರಿಯಿಂದ ಹೇಳಿಕೆ ನೀಡಬೇಕು ಎಂದು ಟೀಕಿಸಿದ್ದು ನಾಳೆಗೆ ವಿಚಾರಣೆ ಮುಂದೂಡಲಾಗಿದೆ.
ಭಾರತೀಯ ಸಶಸ್ತ್ರ ಪಡೆಗಳು ಪ್ರಾರಂಭಿಸಿದ ‘ಆಪರೇಷನ್ ಸಿಂಧೂರ್’ ಬಗ್ಗೆ ಕರ್ನಲ್ ಸೋಫಿಯಾ ಖುರೇಷಿ ಪತ್ರಿಕಾಗೋಷ್ಠಿಗಳಲ್ಲಿ ವಿವರಗಳನ್ನು ಹಂಚಿಕೊಂಡಿದ್ದರು. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಸಚಿವ ವಿಜಯ್ ಶಾ, “ಪಾಕಿಸ್ತಾನದ ಭಯೋತ್ಪಾದಕರು ನಮ್ಮ ಸಹೋದರಿಯರು ಮತ್ತು ಹೆಣ್ಣುಮಕ್ಕಳ ಸಿಂಧೂರವನ್ನು ಅಳಿಸಿದ್ದಾರೆ. ಅದಕ್ಕೆ ಪ್ರತಿಯಾಗಿ ನಾವು ಅವರ ಸಹೋದರಿಯನ್ನು ಮುಂದಿಟ್ಟುಕೊಂಡು ತಕ್ಕ ತಿರುಗೇಟು ನೀಡಿದ್ದೇವೆ ಎಂದಿದ್ದರು.
Key words: Supreme Court, Minister, Vijay Shah, controversial statement, Sophia Qureshi