ಪಾಕ್ ಮೇಲೆ ಕೇವಲ ಭಯೋತ್ಪಾದಕರನ್ನು ಗುರಿಯಾಗಿಸಿಕೊಂಡು ಭಾರತ ದಾಳಿ ಮಾಡಿದೆ- ಸಂಸದ ಯದುವೀರ್

ಮೈಸೂರು,ಮೇ,14,2025 (www.justkannada.in): ಪಾಕಿಸ್ತಾನದ ಮೇಲೆ ಕೇವಲ ಭಯೋತ್ಪಾದಕರನ್ನು ಗುರಿಯಾಗಿಸಿಕೊಂಡು ಭಾರತ ದಾಳಿ ಮಾಡಿದೆ. ಭಾರತೀಯ ಸೇನೆ ಪಾಕಿಸ್ತಾನದೊಳಕ್ಕೆ ನುಗ್ಗಿ ಹೊಡೆದಿದೆ ಎಂದು ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಂಸದ ಯದುವೀರ್,  ಭಯೋತ್ಪಾದಕ ಚಟುವಟಿಕೆ ಮುಂದುವರಿದರೆ ವ್ಯಾಪಾರ ವ್ಯವಹಾರ ನಡೆಸಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಈಗಾಗಲೇ ಸ್ಪಷ್ಟಪಡಿಸಿದೆ. ಪಾಕಿಸ್ತಾನ ಹೊರತುಪಡಿಸಿ ಜಗತ್ತಿನ ಎಲ್ಲಾ ರಾಷ್ಟ್ರಗಳು ಭಯೋತ್ಪಾದನೆ ವಿರುದ್ಧ ಇವೆ. ಇಸ್ಲಾಮಿಕ್ ರಾಷ್ಟ್ರಗಳು ಕೂಡ ಉಗ್ರರ ಕೃತ್ಯಗಳನ್ನು ಖಂಡಿಸಿವೆ. ಪಾಕಿಸ್ತಾನದ ಭಯೋತ್ಪಾದಕ ಕೃತ್ಯಕ್ಕೆ ಭಾರತ ತಕ್ಕ ಪ್ರತ್ಯುತ್ತರ ನೀಡಿದೆ. ನಾವು ಪಾಕಿಸ್ತಾನದೊಳಕ್ಕೆ ನುಗ್ಗಿ ಹೊಡೆದಿದ್ದೇವೆ. ಯಾವುದೇ ಪರಿಸ್ಥಿತಿ ಎದುರಾದರೂ ಭಾರತ ಸರ್ವ ಸನ್ನದ್ದವಾಗಿದೆ ಎಂಬ ಸಂದೇಶವನ್ನು ಭಾರತ ವಿಶ್ವಕ್ಕೆ ರವಾನಿಸಿದೆ ಎಂದರು.

ಮಳೆಯಿಂದ ಮೈಸೂರು ನಗರದಲ್ಲಿ ಅವ್ಯವಸ್ಥೆ ವಿಚಾರ ಕುರಿತು ಪ್ರತಿಕ್ರಿಯಿಸಿದ  ಸಂಸದ ಯದುವೀರ್, ಮೈಸೂರು ಮಹಾನಗರ ಪಾಲಿಕೆಗೆ ಚುನಾವಣೆ ಆಗಿಲ್ಲ. 2 ವರ್ಷದಿಂದ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದೆ. ಯಾಕೆ ಚುನಾವಣೆ ನಡೆಸುತ್ತಿಲ್ಲ ಎಂದು ಗೊತ್ತಿಲ್ಲ. ನಾವು ಸಾಕಷ್ಟು ಬಾರಿ ಚುನಾವಣೆ ನಡೆಸಿ ಎಂದು ಮನವಿ ಮಾಡಿದ್ದೇವೆ. ಮಳೆ ಬಂದು ಏನೇ ಆದರೂ ಮೈಸೂರು ನಗರದ ಸಮಸ್ಯೆಗಳನ್ನು ಹೇಳಿಕೊಳ್ಳಲು ಯಾರು ಕೂಡ ಪಾಲಿಕೆಯಲ್ಲಿ ಪ್ರತಿನಿಧಿಗಳು ಇಲ್ಲ. ಜನಪ್ರತಿನಿಧಿಗಳು ಇಲ್ಲದೆ ಇರುವುದರಿಂದ ಸಮಸ್ಯೆಗಳಿಗೆ ಪರಿಹಾರ ಸಿಗುತ್ತಿಲ್ಲ. ಈ ಬಗ್ಗೆ ರಾಜ್ಯ ಸರ್ಕಾರ ಆದಷ್ಟು ಬೇಗ ತೀರ್ಮಾನ ಮಾಡಬೇಕು ಎಂದು ಆಗ್ರಹಿಸಿದರು.

Key words: India, attacked, only,  terrorists, MP,  Yadavir