ಬೆಂಗಳೂರು,ಮೇ,14,2025 (www.juskannada.in): ಕೇಂದ್ರ ಸರ್ಕಾರದಿಂದ ಬರಬೇಕಾದ ಪಿಂಚಣಿ ಎರಡು ವರ್ಷದಿಂದ ರಾಜ್ಯಕ್ಕೆ ಕೊಟ್ಟಿಲ್ಲ. ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಈವರೆಗೆ ಕೇಂದ್ರದಿಂದ ಹಣ ಬರಲಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದರು.
ಇಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ದಿಶಾ ಸಮಿತಿಯ ಸಭೆ ನಡೆಯಿತು. ಸಭೆಯಲ್ಲಿ ಕೇಂದ್ರ ಸರ್ಕಾರದಿಂದ ಬರುವ ಪಿಂಚಣಿ, 15ನೇ ಹಣಕಾಸಿನ ಆಯೋಗ ಸೇರಿದಂತೆ ಹಲವು ವಿಷಯಗಳ ಕುರಿತು ಸಿಎಂ ಸಿದ್ದರಾಮಯ್ಯ ಚರ್ಚಿಸಿದರು.
ಸಭೆಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಕೇಂದ್ರ ಸರ್ಕಾರದಿಂದ ಬರಬೇಕಾದ ಪಿಂಚಣಿ ಎರಡು ವರ್ಷದಿಂದ ರಾಜ್ಯಕ್ಕೆ ಕೊಟ್ಟಿಲ್ಲ. ರಾಜ್ಯ ಸರ್ಕಾರವೇ ಬಹುತೇಕ ಹಣ ಕೊಡುವ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರದ ಹೆಸರಿದೆ. ಆದರೂ ಚೂರು, ಪಾರು ಶೇ ಕೇಂದ್ರದ ಹಣವೂ ಬರುತ್ತಿಲ್ಲ. ಈ ನಿರಂತರ ಅನ್ಯಾಯ ಪ್ರಶ್ನಿಸಬೇಕಲ್ಲವಾ ನೀವು ಎಂದು ಪ್ರಶ್ನಿಸಿದರು.
15 ನೇ ಹಣಕಾಸು ಆಯೋಗದಲ್ಲಿ 5,495 ಕೋಟಿ ರೂಪಾಯಿ ವಿಶೇಷ ಅನುದಾನ ಕೊಡಬೇಕು, ಕೆರೆ ಮತ್ತು ಫೆರಿಫೆರಲ್ ರಿಂಗ್ ರಸ್ತೆಗೆ ಕೊಡಬೇಕಾದ ಹಣ ಸೇರಿ ಒಟ್ಟು 11,495 ಕೋಟಿ ರೂಪಾಯಿ ಕೇಂದ್ರದಿಂದ ಬರಬೇಕಿತ್ತು. ಏನನ್ನೂ ಕೊಡುತ್ತಿಲ್ಲ. ನಾವು ರಾಜ್ಯದಿಂದ 4.5 ಲಕ್ಷ ಕೋಟಿ ತೆರಿಗೆ ಕೊಟ್ಟರೂ ರಾಜ್ಯಕ್ಕೆ ಸಣ್ಣ ನೆರವೂ ಕೇಂದ್ರದಿಂದ ಬರುವುದಿಲ್ಲ, ಕೇಂದ್ರ ಪುರಸ್ಕೃತ ಯೋಜನೆಗಳಿಗೂ ಹಣ ಕೊಡುವುದಿಲ್ಲ, ಆದರೆ ಅಭಿವೃದ್ಧಿಗೆ ರಾಜ್ಯ ಸರ್ಕಾರದ ಬಳಿ ಹಣ ಇಲ್ಲ ಅಂತ ನೀವೇ ಹೊರಗೆ ಆರೋಪ ಮಾತಾಡ್ತೀರಿ ಎಂದು ಸಿಎಂ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದರು.
ನಾನೇ ಎರಡು ಬಾರಿ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿ ಮನವಿ ಮಾಡಿದರೂ ಕೊಡಲಿಲ್ಲ. ರಾಜ್ಯದ ಸಂಸದರು ಒಟ್ಟಾಗಿ ಇದನ್ನು ಕೊಡಿಸಲು ಯತ್ನಿಸಬೇಕು. ಇಷ್ಟು ದಿನಗಳೊಳಗೆ ನೀವು ಕೊಡಿಸಬೇಕಿತ್ತು. ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಬೇಡಿ. ರಾಜ್ಯ ಸರ್ಕಾರ ನಿರಂತರವಾಗಿ ಒಟ್ಟು 5,665 ಕೋಟಿ ಪಿಂಚಣಿ ಕೊಡುತ್ತಲೇ ಬರುತ್ತಿದೆ. ಇದರಲ್ಲಿ 559 ಕೋಟಿ ಮಾತ್ರ ಕೇಂದ್ರ ಸರ್ಕಾರ ಕೊಡುತ್ತದೆ. ಈ ಸಣ್ಣ ಮೊತ್ತವನ್ನೂ ಕೇಂದ್ರ ಸರ್ಕಾರಕ್ಕೆ ಕೊಡಲು ಸಾಧ್ಯವಾಗುತ್ತಿಲ್ಲ. ಇದನ್ನೂ ಎರಡು ವರ್ಷಗಳಿಂದ ಬಾಕಿ ಉಳಿಸಿಕೊಂಡಿದೆ. ಇದು ಏಕೆ ಎಂದು ಪ್ರಶ್ನಿಸಿದರು.
Key words: CM Siddaramaiah,Disha Committee meeting, central, projects