ಕದನ ವಿರಾಮ: ಕಾಂಗ್ರೆಸ್‌ ನಾಯಕರು ಒಡಕು ಮಾತುಗಳನ್ನಾಡಬಾರದು- ಆರ್‌.ಅಶೋಕ್

ಬೆಂಗಳೂರು, ಮೇ ,13,2025 (www.justkannada.in): ಭಾರತೀಯ ಸೇನೆ 100 ಕ್ಕೂ ಅಧಿಕ ಭಯೋತ್ಪಾದಕರನ್ನು ನಾಶ ಮಾಡಿದೆ. ಕದನ ವಿರಾಮ ಘೋಷಣೆಯಾದ ಸಮಯದಲ್ಲಿ ಕಾಂಗ್ರೆಸ್‌ ನಾಯಕರು ಒಡಕು ಮಾತುಗಳನ್ನು ಆಡಬಾರದು ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯುದ್ಧಕ್ಕೆ ಮುನ್ನ ಶಾಂತಿಯ ಮಾತು ಆಡುತ್ತಾರೆ, ಕದನ ವಿರಾಮವಾದಾಗ ಯುದ್ಧ ನಿಲ್ಲಿಸಿದ್ದೇಕೆ ಎಂದು ಪ್ರಶ್ನಿಸುತ್ತಾರೆ. ಜೊತೆಗೆ ಅಧಿವೇಶನ ನಡೆಸಬೇಕೆಂದು ಕೇಳುತ್ತಾರೆ. ಆದರೆ ಇದು ಅಧಿವೇಶನ ನಡೆಸುವ ಸಮಯವಲ್ಲ. ನಮ್ಮ ಯೋಧರು ಸಾಕ್ಷಿಗಳನ್ನು ನೀಡಿದ್ದಾರೆ. ಇನ್ನು ಮುಂದೆ ಯಾರೂ ಸಾಕ್ಷಿ ಕೇಳಬಾರದು ಎಂದರು.

ಭಾರತೀಯ ಯೋಧರಿಗೆ ಬೆಂಬಲ ಸೂಚಿಸಿ  ಬಿಜೆಪಿ ವತಿಯಿಂದ ಮೇ 15 ರಂದು ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ತಿರಂಗ ಯಾತ್ರೆ ನಡೆಯಲಿದೆ. ಬೆಂಗಳೂರಿನಲ್ಲಿ ಮಲ್ಲೇಶ್ವರದ ಸಂಪಿಗೆಯ ರಸ್ತೆಯಲ್ಲಿ ಶಿರೂರು ಪಾರ್ಕ್‌ನಿಂದ 18 ನೇ ಕ್ರಾಸ್‌ವರೆಗೆ ತಿರಂಗಾ ಯಾತ್ರೆ ನಡೆಯಲಿದೆ. ಇದರಲ್ಲಿ ಪಕ್ಷದ ಚಿಹ್ನೆ ಇರುವುದಿಲ್ಲ. ರಾಷ್ಟ್ರಧ್ವಜ ಇರಲಿದೆ ಎಂದು ತಿಳಿಸಿದರು.

ಮೇ 16 ಮತ್ತು 17 ರಂದು ಜಿಲ್ಲಾ ಕೇಂದ್ರದಲ್ಲಿ, ಮೇ 18 ರಿಂದ 23 ರವರೆಗೆ ತಾಲೂಕು ಕೇಂದ್ರಗಳಲ್ಲಿ ಯಾತ್ರೆ ಮಾಡಲಾಗುವುದು. ಇದರಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.

Key words: Ceasefire, Congress leaders, statements, R. Ashok