ಮೈಸೂರು,ಮೇ.13,2025 (www.justkannada.in): ಮೇ 22 ರಂದು ಉಚಿತ ಸಾಮೂಹಿಕ ವಿವಾಹವನ್ನು ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನದಲ್ಲಿ ಏರ್ಪಡಿಸಲಾಗಿದ್ದು, ಅರ್ಹ ಜೋಡಿಗಳು ಉಚಿತ ಸಾಮೂಹಿಕ ವಿವಾಹಕ್ಕೆ ಮೇ 15 ರೊಳಗೆ ನೋಂದಾಯಿಸಿಕೊಳ್ಳಿ ಎಂದು ಅಪರ ಜಿಲ್ಲಾಧಿಕಾರಿ ಡಾ. ಪಿ ಶಿವರಾಜು ಅವರು ತಿಳಿಸಿದರು.
ಇಂದು ಜಿಲ್ಲಾಧಿಕಾರಿಗಳ ಕಛೇರಿಯ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಮಾಂಗಲ್ಯ ಭಾಗ್ಯ ಯೋಜನೆಯ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸರಳ ಹಾಗೂ ಸಾಮೂಹಿಕ ವಿವಾಹದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಆಡಂಬರ ರಹಿತವಾಗಿ ಉಚಿತ ಮಾಂಗಲ್ಯ ಭಾಗ್ಯ ಸರಳ ಸಾಮೂಹಿಕ ವಿವಾಹವನ್ನು ರಾಜ್ಯದ ಪ್ರಮುಖ ದೇವಾಲಯಗಳಲ್ಲಿ ನಡೆಸಲು ತೀರ್ಮಾನಿಸಲಾಗಿರುವುದರಿಂದ ಈ ಯೋಜನೆಯನ್ನು ಹೆಚ್ಚು ಹೆಚ್ಚು ಜನರು ಉಪಯೋಗಿಸಿಕೊಳ್ಳಬೇಕೆಂದು ಹೇಳಿದರು.
ವಧುವಿಗೆ ಚಿನ್ನದ ತಾಳಿ ಮತ್ತು ಎರಡು ಚಿನ್ನದ ಗುಂಡು(ಅಂದಾಜು 8 ಗ್ರಾಂ ತೂಕ)ನೀಡಲಾಗುತ್ತದೆ. ಈ ಯೋಜನೆಯಡಿ ವಿವಾಹವಾಗಲು ಬಯಸುವವರು ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇವಾಲಯ, ನಂಜನಗೂಡಿನ ಶ್ರೀಕಂಠೇಶ್ವರ ಸ್ವಾಮಿ ದೇವಾಲಯ, ತಲಕಾಡಿನ ವೈದ್ಯನಾಥೇಶ್ವರಸ್ವಾಮಿ ಹಾಗೂ ಸಮೂಹ ದೇವಾಲಯಗಳು, ಜಿಲ್ಲಾಧಿಕಾರಿಗಳ ಕಚೇರಿಯ ಧಾರ್ಮಿಕ ದತ್ತಿ ತಹಶೀಲ್ದಾರ್ ಕಛೇರಿ, ಅರಮನೆ ಮುಜರಾಯಿ ದೇವಾಲಯಗಳ ವ್ಯವಸ್ಥಾಪಕರ ಬಳಿ ಹಾಗೂ ಮೈಸೂರು ಜಿಲ್ಲೆಯ ಎಲ್ಲಾ ತಾಲ್ಲೂಕು ತಹಶೀಲ್ದಾರ್ ರವರ ಕಚೇರಿಯಲ್ಲಿ ಅರ್ಜಿಯನ್ನು ಪಡೆದುಕೊಳ್ಳಬಹುದು ಎಂದು ತಿಳಿಸಿದರು.
ಅರ್ಜಿ ಪಡೆದ ವಧುವರರು ಅಗತ್ಯ ದಾಖಲೆಗಳನ್ನು ನೋಂದಾಯಿಸಿಕೊಳ್ಳಬೇಕು. ವಧು-ವರರ ತಂದೆ ತಾಯಿಯವರು ವಿವಾಹಕ್ಕೆ ಒಪ್ಪಿ ವಿವಾಹ ದಿನದಂದು ಉಪಸ್ಥಿತರಿರಬೇಕು, ಜೊತೆಗೆ ವರನ ಸಾಕ್ಷಿದಾರರು ಇದ್ದಲ್ಲಿ ಮಾತ್ರ ವಿವಾಹವನ್ನು ನಡೆಸಲಾಗುವುದು. ತಂದೆ ತಾಯಿ ನಿಧನರಾಗಿದ್ದಲ್ಲಿ ಅವರ ವಾರಸುದಾರರರ ಸಂಪೂರ್ಣ ಒಪ್ಪಿಗೆ ಇದ್ದು ಅವರ ವಿವಾಹ ದಿನದಂದು ಕಡ್ಡಾಯವಾಗಿ ಹಾಜರಿರಬೇಕು ಹಾಗೂ ತಂದೆ ತಾಯಿ ನಿಧನದ ಬಗ್ಗೆ ಕಡ್ಡಾಯವಾಗಿ ಮರಣ ಪ್ರಮಾಣ ಪತ್ರವನ್ನು ಹಾಜರುಪಡಿಸಬೇಕೆಂದು ಎಂದರು.
ಸರ್ಕಾರದ ನಿಯಮದಂತೆ ವರನಿಗೆ ಕನಿಷ್ಠ 21 ವರ್ಷ ವಧುವಿಗೆ ಕನಿಷ್ಠ 18 ವರ್ಷ ತುಂಬಿರಬೇಕು. ಮೊದಲನೇ ಮದುವೆಗೆ ಮಾತ್ರ ಅವಕಾಶವಿದ್ದು, ಎರಡನೇ ಮದುವೆಗೆ ಅವಕಾಶವಿರುವುದಿಲ್ಲ. ಅಂತರ್ಜಾತಿಯವರಾಗಿದ್ದರೆ ಧೃಢೀಕೃತ ಜಾತಿ ಪ್ರಮಾಣವನ್ನು ಕಡ್ಡಾಯವಾಗಿ ಹಾಜರುಪಡಿಸಬೇಕು ಎಂದು ಹೇಳಿದರು.
ವಧುವರರ ಕಡೆಯಿಂದ ಕಡ್ಡಾಯವಾಗಿ ಯಾವುದೇ ವರದಕ್ಷಿಣೆಯನ್ನು ಪಡೆಯುವಂತಿಲ್ಲ, ಸಾರ್ವಜನಿಕರಿಂದ ಯಾವುದೇ ದೂರು ಬಂದಲ್ಲಿ ಅಂತಹ ವಿವಾಹವಾಗುವ ವಧುವರರ ಬಗ್ಗೆ ಪುನರ್ ಪರಿಶೀಲಿಸಲಾಗುತ್ತದೆ ಹಾಗೂ ವಿವಾಹಕ್ಕೆ ಸಲ್ಲಿಸಿದ ದಾಖಲೆಗಳು ಸುಳ್ಳು ದಾಖಲೆಗಳೆಂದು ಧೃಡಪಟ್ಟಲ್ಲಿ ಅಂತಹವರ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.
ಈ ಸಭೆಯಲ್ಲಿ ನಂಜನಗೂಡು ಶ್ರೀಕಂಠೇಶ್ವರ ಸ್ವಾಮಿ ದೇವಾಯಲಯ ಕಾರ್ಯನಿರ್ವಾಹಕ ಅಧಿಕಾರಿ ಜಗದೀಶ್ ಕುಮಾರ್, ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕ ಹರೀಶ್ ಟಿ.ಕೆ. ಅವರು ಸೇರಿದಂತೆ ತಹಶೀಲ್ದಾರರು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
Key words: Free, mass marriage, May 22, Eligible couples, Dr P. Shivaraju