ರೈತರು ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಆದಾಯ ಹೆಚ್ಚಿಸಿಕೊಳ್ಳಬೇಕು-ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

ಉಡುಪಿ,ಮೇ,12,2025 (www.justkannada.in):  ರೈತರು ಹೊಸ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಕೃಷಿಯಲ್ಲಿ ಹೆಚ್ಚು ಆದಾಯ ಗಳಿಸುವಂತಾಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.

ಉಡುಪಿ ಜಿಲ್ಲಾ ಪಂಚಾಯತ್, ಕೃಷಿ ಇಲಾಖೆ ವತಿಯಿಂದ ನೂತನವಾಗಿ ನಿರ್ಮಿಸಲಾಗಿರುವ ಕುಂದಾಪುರ ರೈತ ಸಂಪರ್ಕ ಕೇಂದ್ರ (ಕೋಟೇಶ್ವರ)ವನ್ನು ಉದ್ಘಾಟಿಸಿ ಮಾತನಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ರೈತರು ಕೃಷಿಯಲ್ಲಿ ಆಧುನಿಕರಣ ಕಂಡುಕೊಳ್ಳಬೇಕು, ರೈತರು ಸುಖಿಯಾಗಿದ್ದಾಗ ಮಾತ್ರ ದೇಶ ಅಭಿವೃದ್ಧಿಯಾದಂತೆ ಎಂದು ಹೇಳಿದರು.

ರೈತ ಸಂಪರ್ಕ ಕೇಂದ್ರಗಳು ರೈತರಿಗೆ ಅನುಕೂಲವಾಗಿದೆ. ಕೃಷಿಯ ಬಗ್ಗೆ ಅಧಿಕಾರಿಗಳು ರೈತರಿಗೆ ಸೂಕ್ತ ಮಾರ್ಗದರ್ಶನ ಹಾಗೂ ಸಲಹೆ ನೀಡಬೇಕು. ಸರ್ಕಾರದ ಯೋಜನೆಗಳನ್ನು ರೈತರ ಮನೆ ಬಾಗಿಲಿಗೆ ತಲುಪಿಸಬೇಕು, ಅಧಿಕಾರಿಗಳು ರೈತರು ಹಾಗೂ ಸರ್ಕಾರದ ಮಧ್ಯೆ ಕೊಂಡಿಯಾಗಿ ಕೆಲಸ ಮಾಡಬೇಕು, ರೈತರ ಮಿತ್ರರಾಗಿ ಕೆಲಸ ಮಾಡಬೇಕು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕರೆ ನೀಡಿದರು.

ನಮ್ಮ ಸಿದ್ದರಾಮಯ್ಯನವರ ನೇತೃತ್ವದ ರಾಜ್ಯ ಸರ್ಕಾರ ರೈತರ ಪರ ಸರ್ಕಾರ, ರೈತರ ಪರ ಕಾಳಜಿ ಹೊಂದಿರುವ ಸರ್ಕಾರ. ಸರ್ಕಾರಗಳು ಬರುತ್ತವೆ, ಹೋಗುತ್ತವೆ. ರೈತರ ಕೃಷಿ ಚಟುವಟಿಕೆ ನಿರಂತರವಾಗಿರುತ್ತದೆ. ಕೃಷಿ ಚಟುವಟಿಕೆ, ಕೃಷಿ ಸಲಕರಣೆಗಳು, ಸಬ್ಸಿಡಿ ಸಿಗುವ ಬಗ್ಗೆ ರೈತರಿಗೆ ಮಾಹಿತಿ ಸಿಗುವಂತಾಗಬೇಕು. ಪ್ರತಿ ಗ್ರಾಮ ಪಂಚಾಯಿತಿಗಳಲ್ಲಿ ಮಾಹಿತಿ ಫಲಕ ಅಳವಡಿಸಬೇಕು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅಧಿಕಾರಿಗಳಿಗೆ ಸೂಚಿಸಿದರು.

ಭಾರತ ಕೃಷಿ ಪ್ರಧಾನವಾದ ದೇಶ, ಭಾರತದ ದೇಶ ಹಳ್ಳಿಗಳ ದೇಶ, ರೈತರ ದೇಶ, ನಮಗೆ ಕೃಷಿಯೇ ಪ್ರಧಾನವಾಗಿದೆ. ಅದಕ್ಕಾಗಿಯೇ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಜೈ ಜವಾನ್ ಜೈ ಕಿಶಾನ್ ಅಂತ ಕರೆ ಕೊಟ್ಟಿದ್ದರು.. ರೈತ ಸುಮ್ಮನೆ ಕುಳಿತರೆ ನಾವೆಲ್ಲರೂ ಉಪವಾಸ ಕೂರಬೇಕಾಗುತ್ತೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ಬ್ರಿಟಿಷರು ಸ್ವತಂತ್ರ ಕೊಟ್ಟು ಹೋಗುವಾಗ ನಮ್ಮ ಕೃಷಿಗೆ ಪೆಟ್ಟು ನೀಡಿಯೇ  ಹೋದರು. ಭಾರತ ಮುಂಚೂಣಿಗೆ ಬರಬಾರದು ಅಂತ ಕೃಷಿ ಉತ್ಪನ್ನಗಳಿಗೆ ರಾಸಾಯನಿಕ ಬೆರಸಿಹೋಗಿದ್ದರು. ಆದರೆ,  ನಮಗೆ ಕೃಷಿಯೇ ಪ್ರಧಾನವಾಗಿದೆ. ಕೃಷಿಯಿಂದಲೇ ನಾವು ವಿಶ್ವಗುರುವಿನ ಪಟ್ಟದತ್ತ ನಡೆಯುತ್ತಿದ್ದೇವೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದರು.

ದೇವರ, ಜನರ ಆಶೀರ್ವಾದಿಂದ ಬದುಕುಳಿದಿರುವೆ

ಅಪಘಾತದಿಂದಾಗಿ ನಾನು ವಾಪಸ್ ಬರುತ್ತೀನಿ ಅಂತ ಅಂದುಕೊಂಡಿರಲಿಲ್ಲ. ಆ ದೇವರ, ಜನರ ಆಶೀರ್ವಾದಿಂದ ಬದುಕುಳಿದು, ನಿಮ್ಮ ಸೇವೆಗೆ ವಾಪಸ್ ಬಂದಿರುವೆ. ದೇವರು ದೊಡ್ಡವನು ಎನ್ನುತ್ತಾ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್  ಗದ್ಗದಿತರಾದರು.

ಕಾರ್ಯಕ್ರಮದಲ್ಲಿ ಕುಂದಾಪುರ ಕ್ಷೇತ್ರದ ಶಾಸಕ ಕಿರಣ್ ಕುಮಾರ್ ಕೊಡ್ಗಿ, ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು, ಜಿಲ್ಲಾ ಗ್ಯಾರಂಟಿ ಸಮಿತಿ ಉಪಾಧ್ಯಕ್ಷರಾದ ದಿನೇಶ್ ಹೆಗಡೆ, ಜಿಲ್ಲಾ ಕೆಡಿಪಿ ಸದಸ್ಯರಾದ ಪ್ರಸನ್ನ ಕುಮಾರ್ ಶೆಟ್ಟಿ, ಹರಿ ಪ್ರಸಾದ್ ಶೆಟ್ಟಿ, ಶಿವರಾಮ ಶೆಟ್ಟಿ, ವಿಕಾಸ ಹೆಗಡೆ, ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ಅರುಣ್, ಜಿಲ್ಲಾ ಪಂಚಾಯತ್ ಸಿಇಒ ಪ್ರತೀಕ್ ಬಾಯಲ್, ಕೃಷಿ ಇಲಾಖೆಯ ಅಧಿಕಾರಿಗಳು  ಉಪಸ್ಥಿತರಿದ್ದರು.

Key words: Farmers, new technologies, income, Minister, Lakshmi Hebbalkar