Thursday, August 13, 2026

BDA Apartments

Home Front Page ಸವಿತಾ ನಾಗಭೂಷಣರ ‘ದಿನದ‌ ಪ್ರಾರ್ಥನೆ’ಗೆ ವಿಜಯಾ ದಬ್ಬೆ ಸಾಹಿತ್ಯ ಪ್ರಶಸ್ತಿ

ಸವಿತಾ ನಾಗಭೂಷಣರ ‘ದಿನದ‌ ಪ್ರಾರ್ಥನೆ’ಗೆ ವಿಜಯಾ ದಬ್ಬೆ ಸಾಹಿತ್ಯ ಪ್ರಶಸ್ತಿ

ಮೈಸೂರು,ಮೇ,9,2025 (www.justkannada.in): ಹಿರಿಯ‌ ಸಾಹಿತಿ ಸವಿತಾ ನಾಗಭೂಷಣ ಅವರ ‘ದಿನದ ಪ್ರಾರ್ಥನೆ’ ಕವನ ಸಂಕಲನವು  2025ನೇ ಸಾಲಿನ ಡಾ. ವಿಜಯಾ ದಬ್ಬೆ ಸಾಹಿತ್ಯ ಪ್ರಶಸ್ತಿಗೆ ಆಯ್ಕೆಯಾಗಿದೆ. ಸವಿತಾ ಅವರೇ‌ ಮುನ್ನಡೆಸುವ ಶಿವಮೊಗ್ಗದ‌ ‘ನುಡಿ’ ಪ್ರಕಾಶನವು 2024ರಲ್ಲಿ ಈ ಸಂಕಲನವನ್ನು ಪ್ರಕಟಿಸಿದೆ.

ಮೈಸೂರಿನ ಸಮತಾ ಅಧ್ಯಯನ ಕೇಂದ್ರ(ರಿ)ವು 2022 ರಲ್ಲಿ ಸ್ಥಾಪಿಸಿರುವ ಈ ಪ್ರಶಸ್ತಿಗೆ ಈ‌ ಬಾರಿ 2020- 24ರ ಅವಧಿಯಲ್ಲಿ ಲೇಖಕಿಯರು ಪ್ರಕಟಿಸಿದ ಕವನ‌ ಸಂಕಲನಗಳನ್ನು ಆಹ್ವಾನಿಸಿತ್ತು.

ಲೇಖಕಿಯರು/ಪ್ರಕಾಶಕರಿಂದ ಒಟ್ಟು 110 ಸಂಕಲನಗಳು  ಬಂದಿದ್ದವು. ತೀರ್ಪುಗಾರರಾಗಿ ಹಿರಿಯ ಕವಿಗಳಾದ ಪ್ರೊ. ಚ.ಸರ್ಮಮಂಗಳ, ಜಿ.ಪಿ.ಬಸವರಾಜು, ಡಾ. ಎಂ.ಎಸ್. ವೇದಾ ಅವರಿದ್ದ ಸಮಿತಿಯು, ಸವಿತಾ ನಾಗಭೂಷಣ ಅವರ ‘ದಿನದ ಪ್ರಾರ್ಥನೆ’  ಸಂಕಲನವನ್ನು ಪ್ರಶಸ್ತಿಗೆ ಆಯ್ಕೆಮಾಡಿದೆ.

ಸವಿತಾ ಅವರ ಅಖಂಡ ಮಾನವೀಯ ಪರ ನಿಲುವುಗಳು ಅವರ ಎಲ್ಲಾ ಬರಹಗಳಂತೆ ಈ ಸಂಕಲನದಲ್ಲಿಯೂ ಮುಂದುವರಿದಿವೆ ಎನ್ನುವುದು ತೀರ್ಪುಗಾರರ‌ ಒಮ್ಮತದ ಅಭಿಪ್ರಾಯವಾಗಿತ್ತು. 25,000 ರೂ. ನಗದು, ಫಲಕವನ್ನು ಈ ಪ್ರಶಸ್ತಿಯು ಒಳಗೊಂಡಿದೆ.

ಜೂನ್ 1ರಂದು ಮೈಸೂರಿನಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ ಎಂದು ಕೇಂದ್ರದ ಅಧ್ಯಕ್ಷೆ ಡಾ. ಸಬಿಹಾ ಭೂಮಿಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸವಿತಾ ನಾಗಭೂಷಣ ಅವರ ಕುರಿತು:

ಸವಿತಾ‌ ಹುಟ್ಟಿದ್ದು(1961) ಚಿಕ್ಕಮಗಳೂರಿನಲ್ಲಿ. ಶಿವಮೊಗ್ಗದಲ್ಲಿ ಸಂಪೂರ್ಣ ವಿದ್ಯಾಭ್ಯಾಸ. ಇತಿಹಾಸದಲ್ಲಿ ಸ್ನಾತಕೋತ್ತರ ಪದವಿ. ಕನ್ನಡದಲ್ಲಿ ಕವಿ, ಕತೆಗಾರ್ತಿ, ಕಾದಂಬರಿಗಾರ್ತಿ. ಪತಿ ಡಿ.ಎಸ್. ನಾಗಭೂಷಣ ಅವರ ಜತೆಗೂಡಿ ‘ ಹೊಸ ಮನುಷ್ಯ’  ಪತ್ರಿಕೆಯನ್ನು ಸಂಪಾದಿಸುತ್ತಿದ್ದರು. ಅಂಚೆ ಕಛೇರಿಯಲ್ಲಿ 20 ವರ್ಷದ ಸೇವೆಯ ನಂತರ ಸ್ವಯಂ ನಿವೃತ್ತಿ. ಸದ್ಯ ಶಿವಮೊಗ್ಗದಲ್ಲಿ ವಾಸ.

ನಾ ಬರುತ್ತೇನೆ ಕೇಳು, ಚಂದ್ರನನ್ನು ಕರೆಯಿರಿ ಭೂಮಿಗೆ, ಹೊಳೆಮಗಳು, ಜಾತ್ರೆಯಲ್ಲಿ ಶಿವ, ದರುಶನ, ಕರುಣಾಳು, ದೇವರಿಗೆ ಹೋದೆವು, ಕಡೇಮಾತು, ದಿನದ ಪ್ರಾರ್ಥನೆ, ಯುದ್ಧ ವಿರೋಧಿ ಶಾಂತಿಗೀತೆಗಳು… ಇವರ ಕವನ ಸಂಕಲನಗಳು. ಹಳ್ಳಿಯ ದಾರಿ , ಆಕಾಶಮಲ್ಲಿಗೆ, ಕಾಡುಲಿಲ್ಲಿ ಹೂಗಳು… ಇವರ ಆಯ್ದ ಕವನಗಳ ಸಂಕಲನಗಳು.’ಸ್ತ್ರೀಲೋಕ’ ಕಾದಂಬರಿ,’ಅಜ್ಜಿ ಕರೆದ ಹಾಗಾಯಿತು’ ಕಥಾ ಸಂಕಲನ, ‘ಹೂ ಮನಸಿನ ಹೋರಾಟಗಾರ ಮತ್ತು ಇತರ ಲೇಖನಗಳು’ ಎಂಬ ಸಂಗ್ರಹ ಮುಂತಾದವು ಇವರ ಕೃತಿಗಳು. ಎಲ್ಲಾ ಪುಸ್ತಕಗಳಿಗೆ ವಿವಿಧ ಸಂಘ ಸಂಸ್ಥೆಗಳಿಂದ ಪ್ರಶಸ್ತಿ, ಪುರಸ್ಕಾರಗಳು ಸಂದಿವೆ. ಸಾಹಿತ್ಯ ಕ್ಷೇತ್ರದ ಜೀವಮಾನ ಸಾಧನೆಗಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿಯೂ ಸಂದಿದೆ.

Key words: Savita Nagabhushan, Dinada Prarthane,  Vijaya Dabbe Literary Award