ಅಪರೇಷನ್ ಸಿಂಧೂರ: ಸೇನಾಧಿಕಾರಿ ಸೋಫಿಯಾ ಖುರೇಷಿ ಬೆಳಗಾವಿ ಸೊಸೆ

ಬೆಳಗಾವಿ,ಮೇ,8,2025 (www.justkannada.in): ಪಹಲ್ಗಾಮ ದಾಳಿಗೆ ಪ್ರತ್ಯುತ್ತರವಾಗಿ ಭಾರತೀಯ ಸೇನೆ ಪಾಕಿಸ್ತಾನ ವಿರುದ್ಧದ ಆಪರೇಷನ್ ಸಿಂಧೂರ ಹೆಸರಿನಲ್ಲಿ ದಾಳಿ ನಡೆಸಿದ್ದರ ಕುರಿತು ಸೇನೆಯ ಮಹಿಳಾ ಮಹಿಳಾ ಅಧಿಕಾರಿ ಜಗತ್ತಿಗೆ ಮಾಹಿತಿ ನೀಡಿದ್ದರು.‌ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದ ಕರ್ನಲ್ ಸೋಫಿಯಾ ಖುರೇಷಿ ಬೆಳಗಾವಿಯ ಸೊಸೆ ಎಂಬುದು ಹೆಮ್ಮೆಯ ಸಂಗತಿ.

ಹೌದು ಮಹಿಳೆಯರ ತಿಲಕ ಅಳಿಸಿದ ಉಗ್ರರ ವಿರುದ್ಧ ಪ್ರತಿಕಾರಕ್ಕೆ ಭಾರತೀಯ ಸೇನೆ ಆಪರೇಷನ್ ಸಿಂಧೂರ ಹೆಸರಿನ ದಾಳಿ ಮೂಲಕ ಪಾಕಿಸ್ತಾನದ ಉಗ್ರರ ನೆಲೆಗಳನ್ನು ಧ್ವಂಸ ಮಾಡಿತ್ತು. ಈ ಮಹತ್ವದ ದಾಳಿ ಕುರಿತು ಭಾರತೀಯ ಸೇನೆ ಇದೆ ಮೊದಲಬಾರಿಗೆ ಮಹಿಳಾ ಅಧಿಕಾರಿಗಳಿಂದ ಕಾರ್ಯಾಚರಣೆ ಮಾಹಿತಿ ಕೊಡಿಸಿದ್ದರು. ಸಧ್ಯ ಘಟನೆ ಕುರಿತು ವಿವರಣೆ ನೀಡಿದ್ದ ಮಹಿಳಾ ಅಧಿಕಾರಿಯಲ್ಲಿ ಒಬ್ಬರಾದ ಸೋಫಿಯಾ ಖುರೇಷಿ ಅವರಿಗೆ ಕರ್ನಾಟಕ ನಂಟು ಇದೆ ಎಂಬುದು ವಿಶೇಷ.

2016 ರಲ್ಲಿ ಪುಣೆಯಲ್ಲಿ ನಡೆದ ಮಿಲಿಟರಿ ಕವಾಯತಿನಲ್ಲಿ ಭಾರತೀಯ ಸೇನಾ ತುಕಡಿ ಮುನ್ನಡೆಸಿದ ಮೊದಲ ಮಹಿಳಾ ಅಧಿಕಾರಿ ಕರ್ನಲ್ ಸೋಫಿಯಾ ಖುರೇಷಿ ಇವರ ಪತಿ  ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಕೊಣ್ಣೂರ ಗ್ರಾಮದವರು. ತಾಜುದ್ದೀನ್ ಬಾಗೇವಾಡಿ ಅವರೂ ಕೂಡಾ ಸೈನ್ಯದಲ್ಲಿ ಇದ್ದು ಪತ್ನಿಯಂತೆ ಕರ್ನಲ್ ಆಗಿ ದೇಶ ಸೇವೆ ಮಾಡುತ್ತಿದ್ದಾರೆ.

ಸೋಫಿಯಾ ಖುರೇಷಿ ಮೂಲತಃ ಗುಜರಾತ್ ರಾಜ್ಯದ ವಡೋದರ 1981 ರಲ್ಲಿ ಜನಿಸಿದ್ದಾರೆ. ಸೈನಿಕ‌ ಕುಟುಂಬಕ್ಕೆ ಸೇರಿರುವ ಇವರ ತಂದೆ ಹಾಗೂ ಅಜ್ಜ ಇಬ್ಬರು ಭಾರತೀಯ ಸೇನೆಯಲ್ಲಿದ್ದರು. ಜೀವರಸಾಯನಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು, ಸದ್ಯ ಜಮ್ಮುವಿನಲ್ಲಿ ಕರ್ನಲ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.‌ ಇವರ ಪತಿ ತಾಜುದ್ದೀನ್ ಬಾಗೇವಾಡಿ ಅವರೂ ಜಾನ್ಸಿಯಲ್ಲಿ ಕರ್ನಲ್ ಆಗಿ ದೇಶಸೇವೆ ಮಾಡುತ್ತಿದ್ದಾರೆ.

1999 ರಲ್ಲಿ ಭಾರತೀಯ ಸೇನೆಗೆ ಸೇರಿದ ಕರ್ನಲ್ ಸೋಫಿಯಾ ಖುರೇಷಿ ನಂತರ ಭಾರತೀಯ ಸೇನೆಯ ಮೊದಲ ಮಹಿಳಾ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾದವರು. ತಾಜುದ್ದೀನ್ ಬಾಗೇವಾಡಿ ಅವರ ಜೊತೆ ಪ್ರೇಮ ಹುಟ್ಟಿಕೊಂಡ ನಂತರ ಇಬ್ಬರೂ ಪರಸ್ಪರ ಒಪ್ಪಿ  2015 ರಲ್ಲಿ ಮದುವೆಯಾಗಿದ್ದಾರೆ. ಪಾಕಿಸ್ತಾನ ಮೇಲೆ ನಡೆದ ಸೇನಾ ಕಾರ್ಯಾಚರಣೆಯ ಮಾಹಿತಿಯನ್ನು ದೇಶಕ್ಕೆ ತಿಳಿಸಿದ ಸೇನಾಧಿಕಾರಿ ಸೋಫಿಯಾ ಖುರೇಷಿ ಬೆಳಗಾವಿ ಸೊಸೆ ಎಂಬುದು ಹೆಮ್ಮೆಯ ಸಂಗತಿ.

Key words: Army officer, Sophia Qureshi, daughter-in-law, Belgaum