ನಶಿಸುತ್ತಿರುವ ಮಾನವೀಯ ಸಂಬಂಧಗಳು: ಗಿರೀಶ್ ಕಾಸರವಳ್ಳಿ ವಿಷಾದ

ತೀರ್ಥಹಳ್ಳಿ, ಮೇ 05,2025 (www.justkannada.in):  ಮಾನವ ಸಂಬಂಧಗಳನ್ನು ಜಾಗತೀಕರಣ ನುಂಗಿ ಹಾಕುತ್ತಿದೆ. ಸಾಮಾಜಿಕ ಚಿಂತನೆ ದೂರ ಸರಿದು ಏಕವ್ಯಕ್ತಿ ಚಿಂತನೆ ಮುನ್ನೆಲೆಗೆ ಬರುತ್ತಿದೆ. ಇಂತಹ ಕಾಲಘಟ್ಟದಲ್ಲಿ ಕಡಿದಾಳ್ ಪ್ರಕಾಶ್ ಅವರು ತಾವು ಕಂಡ ವಿಶ್ವ ಮಾನವರನ್ನು ನಮಗೆ ಪರಿಚಯಿಸಿದ್ದಾರೆ ಎಂದು ಖ್ಯಾತ ಚಲನಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರು ಅಭಿಪ್ರಾಯಪಟ್ಟರು.

ತೀರ್ಥಹಳ್ಳಿಯ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ಅಭಿರುಚಿ ಪ್ರಕಾಶನ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ಸಮ ಕಾರ್ಯದರ್ಶಿ ಕಡಿದಾಳ್ ಪ್ರಕಾಶ್ ಅವರ ಕೃತಿ ‘ನನ್ನೂರಿನ ಶ್ರೀಸಾಮಾನ್ಯರು’ಯನ್ನು ಬಿಡುಗಡೆ ಮಾಡಿ ಮಾತನಾಡಿದರು.

ಸಾಮಾನ್ಯರ ಅಸಾಮಾನ್ಯ ಬುದ್ದಿವಂತಿಕೆ, ಪ್ರಾಮಾಣಿಕತೆ, ಚಾಕಚಕ್ಯತೆಗಳ ವ್ಯಕ್ತಿತ್ವದ ಅನಾವರಣ ಕೃತಿಯಲ್ಲಿ ಬಿಂಬಿತವಾಗಿವೆ. ಗತವು ಪ್ರಸ್ತುತವಾಗುವ ಪಠ್ಯದ ಚಿತ್ರಣವನ್ನು ಕಾಣಬಹುದು. ಗತದ ನಡೆಯೊಂದಿಗೆ ಮೌಲ್ಯವನ್ನು ಬಿಚ್ಚಿಡುವ ಪ್ರಯತ್ನ ಹಾಗೂ ಸಂವಾದಕ್ಕೆ ಆಹ್ವಾನಿಸುವ ಬರವಣಿಗೆ ಕೃತಿಯಲ್ಲಿದೆ. ಸಾಂಸ್ಕೃತಿಕ ನೆಲೆಯು ಗತದ ವೈಭವೀಕರಣವಿಲ್ಲದೆ ದಾಖಲಾಗಿದೆ ಎಂದು ತಿಳಿಸಿದರು.

‘ನಾ ಕಂಡಂತೆ ತೇಜಸ್ವಿ-ಶಾಮಣ್ಣ’ ಕೃತಿಯ ಪರಿಷ್ಕೃತ ಆವೃತ್ತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಹಿರಿಯ ಪತ್ರಕರ್ತ ಜಿ.ಎನ್.ಮೋಹನ್, ಕೃತಿಯ ಕನ್ನಡಿಯಲ್ಲಿ ತೇಜಸ್ವಿ, ಶ್ಯಾಮಣ್ಣ ಮತ್ತು ಪ್ರಕಾಶ್ ಅವರ ಪ್ರತಿಬಿಂಬವಿದೆ. ಸಂಬಂಧಗಳ ಗ್ರಹಿಸುವಿಕೆಯೊಂದಿಗೆ ಜನರ ಮೆರವಣಿಗೆ ಕಾಣಬಹುದು. ಇದೊಂದು ಜುಗಲ್‌ಬಂದಿ ಕೃತಿ. ಸಾಮಾನ್ಯ ಮತ್ತು ಅಸಾಮಾನ್ಯರ ನಡುವಿನ ಪಾತ್ರಗಳು ಚಿತ್ತಾರ ಮೂಡಿಸಿವೆ. ಓದುಗರನ್ನು ಆಕರ್ಷಿಸುವ ಗುಣ ಹೊಂದಿದೆ ಎಂದರು.

‘ಕಟ್ಟುವ ಹಾದಿಯಲ್ಲಿ ಕುವೆಂಪು ಪ್ರತಿಷ್ಠಾನದ ಉಗಮ-ವಿಕಾಸ’ ಕೃತಿ ಕುರಿತು ಮಾಜಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಅವರು ಮಾತನಾಡಿ, ಕುವೆಂಪು ಅವರ ಕವಿಮನೆ ಸೇರಿದಂತೆ ಕುಪ್ಪಳಿಯಲ್ಲಿ ಜರುಗಿದ ಎಲ್ಲಾ ಮಹತ್ವದ ಕೆಲಸಗಳ ಹಿಂದೆ ಕಡಿದಾಳ್ ಪ್ರಕಾಶ್ ಅವರ ಮುನ್ನೋಟವಿದೆ. ಹೀಗಾಗಿ ಕವಿ ರವೀಂದ್ರರ ಶಾಂತಿ ನಿಕೇತನವನ್ನೂ ಮೀರಿ ಕುಪ್ಪಳಿ ಅಭಿವೃದ್ಧಿಗೊಂಡಿದೆ ಎಂದರು. ಶಾಸಕ ಆರಗ ಜ್ಞಾನೇಂದ್ರ ಅಧ್ಯಕ್ಷತೆ ವಹಿಸಿದ್ದರು. ಕೃತಿಕಾರ ಕಡಿದಾಳ್ ಪ್ರಕಾಶ್, ಅಭಿರುಚಿ ಗಣೇಶ್ ಉಪಸ್ಥಿತರಿದ್ದರು. ಲೇಖಕ  ಬಿ.ಆರ್. ಸತ್ಯನಾರಾಯಣ್ ಕಾರ್ಯಕ್ರಮ ನಿರ್ವಹಿಸಿದರು.

Key words: Human, relationships, disappearing: Girish Kasaravalli, Kadidal Prakash